ಕುಶಾಲನಗರ:
ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಅಧ್ಯಕ್ಷತೆಯಲ್ಲಿ ಬುಧವಾರ ಇಲ್ಲಿನ ಕಾವೇರಿ ನೀರಾವರಿ ನಿಗಮ ಅಧೀಕ್ಷಕ ಅಭಿಯಂತರರ ಕಚೇರಿಯಲ್ಲಿ ಶಾಸಕರು, ಜಿಲ್ಲೆಯ ಹಿರಿಯ ಅಧಿಕಾರಿಗಳ ಸಭೆ ನಡೆಯಿತು. ಶಾಸಕರಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಸಿಇಒ ವರ್ಣಿತ್ ನೇಗಿ, ಉಪವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಎಸ್.ಪಿ. ಕೆ. ರಾಮರಾಜನ್, ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ, ಸರ್ಕಾರದಿಂದ ನೂತನವಾಗಿ ನೇಮಕವಾದ ತಾಲೂಕು ಉಸ್ತುವಾರಿ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಬೋಸರಾಜು, ತಾಲೂಕಿಗೆ ನೂತನವಾಗಿ ನೇಮಕವಾಗಿರುವ ಉಸ್ತುವಾರಿ ಅಧಿಕಾರಿಗಳ ಜತೆ ಮೊದಲ ಬಾರಿ ಸಭೆ ನಡೆಸಲಾಗಿದೆ. ಆಡಳಿತಕ್ಕೆ ಚುರುಕು ನೀಡುವ ನಿಟ್ಟಿನಲ್ಲಿ ಈ ಸಭೆ ನಡೆಸಲಾಗಿದೆ. ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಆದಷ್ಟು ಶೀಘ್ರಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಭಾಗಮಂಡಲ ಮೇಲ್ಸೇತುವೆ ಕಾಮಗಾರಿ ಈ ತಿಂಗಳಾಂತ್ಯಕ್ಕೆ ಮುಗಿಸುವಂತೆ ಕಡಕ್ ನಿರ್ದೇಶನ ನೀಡಲಾಗಿದ್ದು ಮುಂದಿನ ತಿಂಗಳು ಮೊದಲ ವಾರ ಮುಖ್ಯಮಂತ್ರಿ ಅವರು ಉದ್ಘಾಟಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಇದೇ ಸಂದರ್ಭ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಸಭೆ ಆಯೋಜಿಸುವಂತೆಯೂ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.