ಜಿಲ್ಲೆ

ಪಾಳು ಬಿದ್ದಿವೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿರ್ಮಿಸಿರುವ ಮಿನಿ ರೈತ ಸಂತೆ ಕಟ್ಟಡ

ಆರ್. ಮೈಸೂರು

ತರಕಾರಿ ಮಾರಾಟಗಾರರಿಗೆ ಅನುಕೂಲವಾಗುತ್ತದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿರ್ಮಿಸಿರುವ ರೈತ ಸಂತೆಗಳು ಪಾಳು ಬಿದ್ದಿವೆ.

ಒಂದೆಡೆ ಶೇ. 50ರ ಅನುಪಾತದಲ್ಲಿ ನಿವೇಶನ ಹಂಚಿಕೆಯಿಂದ ಮುಡಾ ಸಂಕಷ್ಟಕ್ಕೆ ಸಿಲುಕಿದ್ದರೆ ಮತ್ತೊಂದೆಡೆ ವಿವೇಚನೆ ಇಲ್ಲದೇ ನಿರ್ಮಿಸಿರುವ ರೈತ ಸಂತೆ ಮಿನಿ ಮಾರುಕಟ್ಟೆಯಿಂದ ಆರ್ಥಿಕ ಹೊರೆ ಉಂಟಾಗಿದೆ.

ರೈತರು ಹಾಗೂ ಹೂ-ಹಣ್ಣು-ತರಕಾರಿ ವ್ಯಾಪಾರಿಗಳಿಗೆ ಅನುಕೂಲವಾಗಲೆಂದು ಮುಡಾ ನಿರ್ಮಿಸಿದ್ದ ರೈತ ಸಂತೆ ಸೇರಿದಂತೆ 9 ಕಿರು ಮಾರುಕಟ್ಟೆ ಪ್ರಯೋಜನಕ್ಕೆ ಬಾರದೆ ಪಾಳು ಬಿದ್ದಿವೆ. ಸದ್ಯ ಕಿರು ಮಾರುಕಟ್ಟೆಯೊಳಗೆ ಮಳಿಗೆಗಳನ್ನು ನಿರ್ಮಿಸಿ ರೈತರು ಮರು ಬಳಕೆ ಮಾಡಿಕೊಳ್ಳುವಂತೆ ಮಾಡುವ ಮೂಲಕ ಮಾರುಕಟ್ಟೆ ನಿರ್ಮಾಣಕ್ಕೆ ಮಾಡಿರುವ ಸಾಲ ತೀರಿಸಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಿದೆ.

ರೈತರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವ ಉದ್ದೇಶದಿಂದ ಮಿನಿ ರೈತ ಸಂತೆಗಳನ್ನು ಬಳಕೆ ಮಾಡಬೇಕು ಎಂದು ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಸೂಚಿಸಿದ್ದರು. ಅಲ್ಲದೇ ದಶಕಗಳ ಹಿಂದೆ ವಿಜಯನಗರದ 2ನೇ ಹಂತದಲ್ಲಿ ರೈತಸಂತೆಗೂ ಅವರೇ ಚಾಲನೆ ನೀಡಿದ್ದರು. ಈ ಮೂಲಕ ರೈತರು, ಉತ್ಪಾದಕರಿಂದ ನೇರವಾಗಿ ಗ್ರಾಹಕರಿಗೆ ಸರಕು ತಲುಪುವಂತೆ ಮಾಡುವುದು ಇದರ ಉದ್ದೆಶವಾಗಿತ್ತು.

ವಿಶಾಲವಾದ ಪ್ರಾಂಗಣದಲ್ಲಿ ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗಿತ್ತು. ಚಾಲನೆ ಸಿಕ್ಕ ಕೆಲವು ದಿನ ಚೆನ್ನಾಗಿಯೇ ನಡೆದ ಸಂತೆ ನಂತರ ರೈತರು ಸಂತೆಯತ್ತ ಮುಖ ಮಾಡಲಿಲ್ಲ. ಇದೀಗ ಪಾಳುಬಿದ್ದ ರೈತಸಂತೆ ಕಟ್ಟಡದಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಯೋಜನಕ್ಕೆ ಬಾರದೆ ಕಟ್ಟಡ ಪಾಳು ಬಿದ್ದಿದೆ.

ಅಷ್ಟೇ ಅಲ್ಲದೇ ಅರವಿಂದ ನಗರ, ಹಿನಕಲ್, ಶಾರದಾದೇವಿನಗರ, ರಾಜ್‌ಕುಮಾರ ರಸ್ತೆ, ವಿಜಯನಗರ 2ನೇ ಹಂತ, ಹೆಬ್ಬಾಳು 1ನೇ ಹಂತದ ಲಕ್ಷ್ಮೀಕಾಂತ ನಗರದ ಕಿರು ಮಾರುಕಟ್ಟೆಗಳು ರೈತರ ಬಳಕೆಗೆ ಬಾರದೆ ಪಾಳು ಬಿದ್ದಿದ್ದು, ಕೆಲವರಿಗೆ ಆಶ್ರಯ ತಾಣವಾಗಿವೆ. ಕೆಲವು ಮಾರುಕಟ್ಟೆಗಳಲ್ಲಿ ಗಿಡಗಂಟಿಗಳು ಬೆಳೆದು ವಿಷಜಂತುಗಳ ಆವಾಸ ತಾಣವಾಗಿವೆ. ಸಂಜೆಯಾದರೆ ಪುಂಡರು- ಕುಡುಕರ ಅಡ್ಡೆಯಾಗಿ ಪರಿವರ್ತನೆಯಾಗಿವೆ. ವಿದ್ಯುತ್ ಸಂಪರ್ಕಕ್ಕಾಗಿ ಅಳವಡಿಸಿದ್ದ ಉಪಕರಣ ಧೂಳು ಹಿಡಿಯುತ್ತಿವೆ. ಮತ್ತೆ ಕೆಲವು ಮಾರುಕಟ್ಟೆ ನಿರಾಶ್ರಿತರ ಆಶ್ರಯತಾಣವಾಗಿವೆ.

ನಬಾರ್ಡ್ ಯೋಜನೆಯಡಿ ಲಕ್ಷಾಂತರ ರೂ. ವ್ಯಯ ಮಾಡಿ ದಶಕಗಳ ಹಿಂದೆ ಇವನ್ನು ನಿರ್ಮಿಸಲಾಗಿತ್ತು. ಎಷ್ಟೊ ಕಿರುಮಾರುಕಟ್ಟೆಗಳ ಬಳಿಯೇ ಕೋಳಿ, ಕುರಿ ತ್ಯಾಜ್ಯಗಳನ್ನು ವ್ಯಾಪಾರಿಗಳು ಎಸೆಯುತ್ತಾರೆ. ಇವುಗಳನ್ನು ತಿನ್ನಲು ಹಂದಿ, ನಾಯಿಗಳು ಬರುತ್ತವೆ. ಪರಿಣಾಮ ಅನೈರ್ಮಲ್ಯ ತಾಂಡವವಾಡುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿಯಲ್ಲಿ ಅಕ್ಕಪಕ್ಕದ ನಿವಾಸಿಗಳು ವಾಸಿಸುತ್ತಿದ್ದಾರೆ.

ಶೆಲ್ಟರ್ ಮಾರುಕಟ್ಟೆ ನಿರ್ಮಿಸಿಕೊಡಿ

ರೈತರು ಹಾಗೂ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸಲೆಂದು ನಗರದ ವಿವಿಧ ಕಡೆ ಕಿರು ಮಾರುಕಟ್ಟೆಯೇನೋ ನಿರ್ಮಾಣ ಮಾಡಿದರು. ಆದರೆ ಇನ್ನಷ್ಟು ಸೌಲಭ್ಯಗಳ ಅವಶ್ಯಕತೆ ಇತ್ತು. ಹೀಗಾಗಿ ಸರಿಯಾದ ನಿರ್ವಹಣೆ ಇಲ್ಲದೆ ವ್ಯಾಪಾರಸ್ಥರು ವಹಿವಾಟು ನಡೆಸಲು ಸಾಧ್ಯವಾಗಲಿಲ್ಲ. ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ಬೀದಿ ಬೀದಿ ಅಲೆದು ವ್ಯಾಪಾರ ಮಾಡಬೇಕಾದ ಸ್ಥಿತಿ ವ್ಯಾಪಾರಿಗಳಿಗೆ ಎದುರಾಗಿದೆ. ನಮಗೆ ಶಾಶ್ವತವಾದ ವ್ಯಾಪಾರದ ನೆಲೆ ಸಿಗಬೇಕು. ಹೀಗಿರುವ ಕಿರು ಮಾರುಕಟ್ಟೆ ಇಕ್ಕಟ್ಟಾಗಿದೆ. ವ್ಯಾಪಾರ ಮಾಡಲು ಸಾಧ್ಯವಿಲ್ಲ. ಅದಕ್ಕೆ ಮಳಿಗೆ ರೀತಿ ಶೆಲ್ಟರ್ ಹಾಕಿಕೊಟ್ಟರೆ ಅನುಕೂಲವಾಗುತ್ತದೆ ಎನ್ನುತ್ತಾರೆ ನಿಂಬೆಹಣ್ಣಿನ ವ್ಯಾಪಾರಿ ಅಶೋಕ್.

ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು

ಮುಡಾದಲ್ಲಿ ಈ ಹಿಂದೆ ಏನಾಗಿದೆ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಮಿನಿ ಮಾರುಕಟ್ಟೆ ಸೇರಿದಂತೆ ಇನ್ನಿತರೆ ಅಗಬೇಕಾದ ಕೆಲಸ, ಕಾರ್ಯಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಅಲ್ಲಿಂದ ಬರುವ ನಿರ್ದೇಶನದ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು.

ರಘುನಂದನ್

ಮುಡಾ ಆಯುಕ್ತ