ಮೈಸೂರು: ಯುದ್ಧೋನ್ಮದ ಇಂದಿನ ದಿನಗಳಲ್ಲಿ ಅಸ್ತ್ರಗಳಿಂದಲ್ಲ, ಅಕ್ಷರಗಳಿಂದ ಬದುಕನ್ನು ಗೆಲ್ಲಬಹುದು. ಹಗೆತನಕ್ಕಿಂತ ಪ್ರೀತಿಯಿಂದ ಮನಸ್ಸು ಅರಳಿಸಬಹುದು. ದಸರೆಯು ಮಾನವ ಕುಲಕ್ಕೆ ಶಾಂತಿ, ಸಹಾನುಭೂತಿ ಮತ್ತು ನ್ಯಾಯದ ದೀಪ ಬೆಳಗಿಸಲಿ ಎಂದು ಬೂಕರ್ ಪ್ರಶಸ್ತಿ ವಿಜೇತೆ, ಲೇಖಕಿ ಬಾನು ಮುಷ್ತಾಕ್ ಆಶಿಸಿದರು.
ಸಂಘ ಪರಿವಾರ, ಬಿಜೆಪಿಯ ತೀವ್ರ ವಿರೋಧ, ಟೀಕೆಗಳ ನಡುವೆ ಪೊಲೀಸ್ ಬಿಗಿಭದ್ರತೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಸೋಮವಾರ ನಾಡದೇವಿ ಶ್ರೀ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಈ ಬಾರಿಯ ನಾಡಹಬ್ಬ ದಸರಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಜಗತ್ತು ಯುದ್ಧದ ಜ್ವಾಲೆಯಲ್ಲಿ ಸುಡುತ್ತಿದೆ. ಮನುಕುಲವಿಂದು ದ್ವೇಷ ಮತ್ತು ರಕ್ತಪಾತದಲ್ಲಿ ಮುಳುಗಿರುವಾಗ, ಶಾಂತಿಯ ಹಬ್ಬವಾದ ‘ದಸರಾ’ ಘೋಷಣೆಯು ಎಲ್ಲರ ಕಿವಿಯಲ್ಲಿ ಪ್ರತಿಧ್ವನಿಸಲಿ, ಸೌಹಾರ್ದದ ಮೇಳವಾಗಿಸಲಿ ಎಂದು ಪ್ರಾರ್ಥಿಸಿದರು.
ದಸರಾ ಎಂದರೆ ಕೇವಲ ಹಬ್ಬವಲ್ಲ, ಇದೊಂದು ನಾಡಿನ ಸಂಸ್ಕೃತಿಯ ಉತ್ಸವ. ಎಲ್ಲರನ್ನೂ ಒಗ್ಗೂಡಿಸುವ ಸಮನ್ವಯದ ಮೇಳ. ಈ ನೆಲದಲ್ಲಿ ಹುಟ್ಟಿದ ಪ್ರತಿಯೊಂದು ಜೀವಕ್ಕೂ ಈ ಮಣ್ಣಿನ ವಾರಸುದಾರಿಕೆ, ಸ್ಪಂದನೆ ಮತ್ತು ನೆನಪುಗಳಿವೆ. ಅವು ಮೇಳೈಸಬೇಕು ಎಂದರು.
ಈ ಪವಿತ್ರ ಕ್ಷಣದಲ್ಲಿ ಶ್ರೀ ಚಾಮುಂಡಿ ತಾಯಿಯ ಕೃಪೆಯ ನೆರಳಿನಲ್ಲಿ, ಈ ವೇದಿಕೆಯಿಂದ ನಿಮ್ಮೆದುರು ನಿಲ್ಲುವ ಅವಕಾಶ ದೊರೆತಿರುವುದು ನನ್ನ ಜೀವನದ ಅತ್ಯಂತ ಗೌರವದ ಕ್ಷಣ ಎಂದು ಹೇಳಿದರು.
ಅರಸರ ಸಂಸ್ಕೃತಿ, ಪರಂಪರೆಯಿಂದ ಹಿಡಿದು, ಕನ್ನಡ ಭಾಷೆಯ ಅಂತರಾಳದ ಹೃದಯಸ್ಪಂದನದವರೆಗೆ ಈ ಹಬ್ಬ ನಮಗೆ ಸ್ಮರಿಸುತ್ತದೆ. ಸಂಸ್ಕೃತಿ ಎಂದರೆ ಬೇರೆ ಬೇರೆ ಧ್ವನಿಗಳ ಸಂಗಮ. ವಿಭಿನ್ನತೆಯಲ್ಲೇ ಏಕತೆಯ ಸುಗಂಧ ಎಂದು ಬಣ್ಣಿಸಿದರು.
ರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಮುಸ್ಲಿಮರನ್ನು ಅನುಮಾನಿಸದೆ ನಂಬಿ ಅಂಗರಕ್ಷಕರ ಪಡೆಯ ಸದಸ್ಯರನ್ನಾಗಿಸಿದ್ದರು. ಇದು ನಮಗೆ ಬಹಳ ಹೆಮ್ಮೆಯ ಮತ್ತು ಅಪ್ಯಾಯಮಾನವಾದ ವಿಷಯವಾಗಿದೆ. ಎಲ್ಲರೂ ಸಹಬಾಳ್ವೆಯನ್ನು ಅರ್ಥ ಮಾಡಿಕೊಳ್ಳಬೇಕು. ಸಂಸ್ಕೃತಿ ಎಂದರೆ ಹೃದಯದಲ್ಲಿ ಪ್ರೀತಿಯನ್ನು ಹುಟ್ಟಿಸುವ ಧಾರ್ಮಿಕ ನಂಬಿಕೆ, ಜೀವಪರ, ಮಾನವೀಯ ಪರವಾದ ಈ ನೆಲದ ಸಂಸ್ಕೃತಿ. ಹಾಗಾಗಿ ಈ ನೆಲ ಎಲ್ಲರನ್ನೊಳಗೊಳ್ಳುವ ಎಲ್ಲರ ಬದುಕನ್ನು ಗೌರವಿಸುವ ಸರ್ವ ಜನಾಂಗದ ಶಾಂತಿಯ ತೋಟ ಎಂದು ವಿಶ್ಲೇಷಿಸಿದರು.
ಹೆಣ್ಣಿನ ಶಕ್ತಿಯನ್ನು ಪ್ರಚುರಪಡಿಸಿರುವ ಚಾಮುಂಡಿ ತಾಯಿಯ ಮಹಿಮೆ ನಮ್ಮೆಲ್ಲರ ಜೀವನಕ್ಕೆ ಮಾರ್ಗದರ್ಶಕವಾಗಿರಲಿ. ಆಕೆ ಸತ್ಯ, ಧೈರ್ಯ ಹಾಗೂ ರಕ್ಷಕತ್ವದ ಸಂಕೇತ. ಇಂತಹ ದೇವರು ನಮ್ಮೊಳಗಿನ ದ್ವೇಷ, ಅಸಹಿಷ್ಣುತೆಗಳನ್ನು ನಾಶವಾಗಿಸಲಿ. ಇಂತಹ ದಸರಾ ಹಬ್ಬ ಕೇವಲ ಮೈಸೂರಿಗೆ ಸೀಮಿತವಾಗದೆ, ನಾಡು, ದೇಶದ ಗಡಿ ದಾಟಿ ಇಡೀ ಜಗತ್ತಿನಾದ್ಯಂತ ಮಾನವ ಕುಲಕ್ಕೆ ಶಾಂತಿ, ಸಹಾನುಭೂತಿ, ಪ್ರೀತಿ ಮತ್ತು ನ್ಯಾಯದ ದೀಪ ಬೆಳೆಗಿಸಲಿ ಎಂದು ಹಾರೈಸಿದರು.
ಸೌಹಾರ್ದದ ಸಿಂಫನಿಯಾಗಲಿ:
ಪ್ರತಿ ಹೂವು ತನ್ನ ಬಣ್ಣದಲ್ಲೇ ಅರಳಲಿ, ಪ್ರತಿ ಹಕ್ಕಿ ತನ್ನ ರಾಗದಲ್ಲೇ ಹಾಡಲಿ. ಆದರೆ ಒಟ್ಟಿಗೆ ಸೇರಿದಾಗ ಅದು ಸೌಹಾರ್ದ ಸಿಂಫನಿಯಾಗಲಿ. ಪ್ರಜಾಪ್ರಭುತ್ವವು ಕೇವಲ ವ್ಯವಸ್ಥೆಯಲ್ಲ, ಅದು ಮೌಲ್ಯ. ಅದರಲ್ಲಿ ಪ್ರತಿಯೊಬ್ಬರ ಧ್ವನಿಯನ್ನು ಗೌರವಿಸುವ ಮನೋಭಾವವಿದೆ. ಜತೆಗೆ ಅದು ಬೇರೆಯವರ ಬದುಕಿನಲ್ಲಿ ಅರ್ಥಪೂರ್ಣವಾಗಿ ನಡೆದುಕೊಳ್ಳುವ ಜವಾಬ್ದಾರಿ ಕಲಿಸುತ್ತದೆ. ಅದನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎನ್ನುವ ಮೂಲಕ ಟೀಕೆಗಳು ಸಲ್ಲದು ಎನ್ನುವ ಸಂದೇಶ ಸಾರಿದರು.
ನನ್ನ ಜೀವನದ ದರ್ಶನ ಯಾವತ್ತಿಗೂ ಜೀವಪರ. ಅಸ್ತ್ರಗಳಿಂದಲ್ಲ, ಅಕ್ಷರದಿಂದ ಬದುಕನ್ನು ಗೆಲ್ಲಬಹುದು. ಹಗೆಗಳಿಂದಲ್ಲ. ಪ್ರೀತಿಯಿಂದ ಬದುಕನ್ನು ಅರಳಿಸಬಹುದು ಎನ್ನುವ ತತ್ವ ನನ್ನದು. ವ್ಯಕ್ತಿಯಿಂದ ಸಮಷ್ಠಿಯೆಡೆಗೆ ಸಾಗುವುದೇ ನಿಜವಾದ ದಾರಿ. ನನ್ನ ಧಾರ್ಮಿಕ ನಂಬಿಕೆಗಳು, ನನ್ನ ಜೀವನ ದರ್ಶನ ಎಂದಿಗೂ ಜೀವಪರ. ಅವು ಮರದ ನೆರಳಿನಂತೆ, ತಂಪಾದ ನದಿಯಂತೆ. ಎಂದೂ ಹೊಸಲು ದಾಟಿ ಹೋಗಿಲ್ಲ ಎಂದರು.
ನಾವೆಲ್ಲ ಒಂದೇ ಗಗನದಡಿಯ ಪಯಣಿಗರು. ಆಕಾಶ ಯಾರನ್ನೂ ಬೇರ್ಪಡಿಸುವುದಿಲ್ಲ. ಹಾಗೆಯೇ ಭೂಮಿ ಯಾರನ್ನೂ ಹೊರ ತಳ್ಳುವುದಿಲ್ಲ. ಮನುಷ್ಯನು ಮಾತ್ರ ಗಡಿ ಹಾಕುತ್ತಾನೆ. ಆ ಗಡಿಗಳನ್ನು ನಾವೇ ಅಳಿಸಬೇಕು ಎಂದು ಹೇಳಿದರು.
ಇತಿಹಾಸದತ್ತ ನೋಡಿದರೆ ತಮ್ಮ ಸಾಧನೆಯಿಂದಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದೆಂದಿಗೂ ಪ್ರಸ್ತುತವಾಗುತ್ತಾರೆ. ರಾಜಕೀಯ, ಆರ್ಥಿಕ, ಸಾಮಾಜಿಕ ನ್ಯಾಯದ ಔದಾರ್ಯದ ದೊರೆಯಾಗಿದ್ದರು. ಅವರಲ್ಲಿ ಭೇದ-ಭಾವಕ್ಕಿಂತ ವಿಶಾಲ ಮನಸ್ಸಿಗೆ ಗೌರವವಿತ್ತು. ಸಂಪತ್ತನ್ನು ಹಂಚಿದಾದ ಮಾತ್ರ ಅದು ಬೆಳೆಯುತ್ತದೆ. ಶಕ್ತಿಯನ್ನು ಹಂಚಿಕೊಂಡಾಗ ಮಾತ್ರ ದೀರ್ಘಕಾಲ ಬದುಕಿಸುತ್ತದೆ ಎನ್ನುವ ತತ್ವ ಅಳವಡಿಸಿಕೊಂಡಿದ್ದರು ಎಂದರು.
ಸಂಸ್ಕೃತಿ ನಮ್ಮ ಬೇರು. ಸೌಹಾರ್ದ ನಮ್ಮ ಶಕ್ತಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಭಾರತದ ನೆಲೆಯಲ್ಲಿ ನಮ್ಮ ಯುವಶಕ್ತಿಯೊಂದಿಗೆ ಸೇರಿ ಮಾನವೀಯ ಮೌಲ್ಯಗಳ ಪ್ರೀತಿಯ ಹೊಸ ಸುಧಾರಿತ ಸಮಾಜವನ್ನು ಕಟ್ಟೋಣ ಎಂದರು
ಇದೇ ವೇಳೆ ಮುಸ್ಲಿಂ ಹೆಣ್ಣು ಮಗಳು ಬಾಗಿನ ಪಡೆದಾಗಿನ ಸಂದರ್ಭದಲ್ಲಿ ತನ್ನ ಮನಸ್ಸಿನ ಭಾವನೆ ವ್ಯಕ್ತಪಡಿಸುವ ಕವನ ಓದಿದರು.