ಚಿಕ್ಕಪಡಸಲಗಿ: ಅಲ್ಲಿ ಸಾವಿರಾರು ಜನರು ಜಮಾಯಿಸಿದ್ದರು. ಕೆಲವರು 52 ಅಡಿ ಎತ್ತರ ಕಂಬ ಏರಲು ಸಿದ್ಧರಾಗಿ ನಿಂತಿದ್ದರು. ಮೈನವಿರೇಳಿಸುವ ಈ ಸಾಹಸದಲ್ಲಿ ಕೆಲವರು ಕಂಬ ಏರಲು ಹೋಗಿ ಬೀಳುತ್ತಿದ್ದರೆ, ಮತ್ತೆ ಕೆಲವರು ಎದ್ದು ಗುರಿ ಮುಟ್ಟಲು ಹರಸಾಹಸ ನಡೆಸುತ್ತಿದ್ದರು. ಕೊನೆಗೂ ಒಬ್ಬ ಗುರಿ ತಲುಪಿದಾಗ ಚಪ್ಪಾಳೆ, ಶಿಳ್ಳೆ, ಕೇಕೆಗಳ ಸುರಿಮಳೆಯಾಯಿತು.
ಈ ದೃಶ್ಯ ಕಂಡುಬಂದಿದ್ದು ಗ್ರಾಮದ ಆರಾಧ್ಯ ದೈವ ಮಾರುತೇಶ್ವರ ಜಾತ್ರೆ ನಿಮಿತ್ತ ಸೋಮವಾರ ಜರುಗಿದ ಹಾಲೋಕುಳಿಯ ಝಲಕ್. ಜಾತ್ರೆ ಅಂಗವಾಗಿ ಮೂರು ದಿನ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಹಾಲೋಕುಳಿ ವಿಶೇಷ ಗಮನ ಸೆಳೆಯಿತು.
ದೇವಸ್ಥಾನ ಎದುರು 52 ಅಡಿ ಎತ್ತರದ ಕಂಬವನ್ನು ನೆಟ್ಟು ಅದರ ಮೇಲೆ ವ್ಯಕ್ತಿಯನ್ನು ಕೂರಿಸಲಾಗಿತ್ತು. ಈ ಕಂಬಕ್ಕೆ ಜಾರುವ ಪದಾರ್ಥ ಲೇಪಿಸಲಾಗಿದ್ದು, ಸ್ಪರ್ಧೆಗೆ ಬಂದ ಯುವಕರು ಈ ಕಂಬ ಹತ್ತಿ ಮೇಲೆ ಕುಳಿತ ವ್ಯಕ್ತಿಯನ್ನು ಕೆಳಗೆ ಇಳಿಸಬೇಕು. ಒಬ್ಬೊಬ್ಬರಾಗಿ ಮೇಲೆ ಏರಲು ಪ್ರಯತ್ನಿಸುತ್ತಿದ್ದರೇ, ಸುತ್ತ ನೆರೆದವರು ಅವರ ಮೇಲೆ ನೀರು ಎರಚಿ ಅವರನ್ನು ಕೆಳಗಿಳಿಸಲು ಯತ್ನಿಸುತ್ತಿದ್ದರು. ಜಾರುತ್ತಿದ್ದ ಕಂಬದಿಂದ ಬಿದ್ದವರೇ ಹೆಚ್ಚು. ಕೊನೆಗೊಬ್ಬ ಎಲ್ಲ ಅಡೆತಡೆಗಳನ್ನು ಮೆಟ್ಟಿ ಮೇಲೆ ಹತ್ತಿದ. ಮೇಲೆ ಕುಳಿತ ವ್ಯಕ್ತಿಯನ್ನು ಕರೆದುಕೊಂಡು ಬಂದು ಕೆಳಗಿದ್ದ ಕೆಸರನ್ನು ಅವನಿಗೆ ಮೆತ್ತಿದ. ಆಗ ಚಪ್ಪಾಳೆಗಳ ಸುರಿಮಳೆಯೊಂದಿಗೆ ಹಾಲೋಕುಳಿಗೆ ಅದ್ದೂರಿ ತೆರೆ ಎಳೆಯಲಾಯಿತು. ಯುವಕ ಅಣ್ಣೇಶ ಸಿದ್ದಪ್ಪ ಕಲ್ಯಾಣಿ ಈ ಸಾಹಸ ಮೆರೆದು ಎಲ್ಲರ ಮೆಚ್ಚುಗೆಗೆ ಪಾತ್ರನಾದನು.
ಹಾಲೋಕುಳಿ ಮುನ್ನಾದಿನ ಭಾನುವಾರ ನೀರೋಕುಳಿ ಆಚರಣೆ ನಡೆಯಿತು. ಅದರ ಜತೆಗೆ ಕೃಷ್ಣಾ ನದಿ ದಡದಲ್ಲಿ ಮಾರುತೇಶ್ವರನಿಗೆ ಅಭಿಷೇಕ ನಡೆಸಿ, ವಾದ್ಯ ವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಶನಿವಾರ ವಿವಿಧ ಕಾರ್ಯಕ್ರಮಗಳ ಜತೆ ಜೆವರ್ಗಿ ರಾಜಣ್ಣ ಅವರ ತಂಡದವರಿಂದ ‘ಗಂಗಿ ಮನ್ಯಾಗ ಗೌರಿ ಹೊಲದಾಗ’ ನಾಟಕ ಪ್ರದರ್ಶನಗೊಂಡಿತು.
ಸೋಮವಾರ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆ ಆವರಣದಲ್ಲಿ ನಡೆದ ರಾಷ್ಟ್ರ ಮಟ್ಟದ ಜಂಗಿ ನಿಕಾಲಿ ಕುಸ್ತಿ ಗಮನ ಸೆಳೆಯಿತು. ಮಹಾರಾಷ್ಟ್ರದ ಸೊಲ್ಲಾಪುರ, ಕೊಲ್ಲಾಪುರ, ಪುಣೆ, ಸಾಂಗಲಿ, ಜತ್ತ, ರಾಜ್ಯದ ಧಾರವಾಡ, ವಿಜಯಪುರ, ಕುಂಬಾರಹಳ್ಳ, ಅಲಗೂರ, ಚಿಕ್ಕಪಡಸಲಗಿ ಸೇರಿದಂತೆ ವಿವಿಧ ಭಾಗಗಳಿಂದ ಕುಸ್ತಿ ಪಟುಗಳು ಆಗಮಿಸಿದ್ದರು. ಕುಸ್ತಿ ಮೈದಾನಕ್ಕೆ ಅವರು ಇಳಿಯುತ್ತಿದ್ದಂತೆ ಜನರ ಸಂಭ್ರಮ ಇಮ್ಮಡಿಗೊಂಡಿತು. ಮೈದಾನದಲ್ಲಿ ಕುಸ್ತಿ ಪಟುಗಳ ಸೆಣಸಾಟ ಕ್ಷಣ ಕ್ಷಣಕ್ಕೂ ರೋಮಾಂಚನಗೊಳಿಸಿ ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತು. ಜೈ ಹನುಮಾನ ಯುವ ಮಿತ್ರ ಮಂಡಳಿಯವರು ನೇತೃತ್ವ ವಹಿಸಿದ್ದರು.
ನಮ್ಮೂರಿನ ಮಾರುತೇಶ್ವರ ಭಕ್ತರ ಇಷ್ಟಾರ್ಥ ಪೂರೈಸುವ ಭಾಗ್ಯವಂತನಾಗಿದ್ದಾನೆ. ಹನುಮದೇವರಿಗೆ ಹರಕೆ ಹೊತ್ತರೆ ಎಲ್ಲವು ಈಡೇರಿಸುತ್ತಾನೆ. ಆದ್ದರಿಂದ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಹನಮಂತ ಭೀ ಪೂಜಾರಿ, ದೇವಸ್ಥಾನದ ಅರ್ಚಕ. ಕುಸ್ತಿ ಕ್ರೀಡೆಯು ಒಲಿಂಪಿಕ್‌ನಲ್ಲಿ ಪದಕದ ಭರವಸೆಯ ಕ್ರೀಡೆಯಾಗಿದೆ. ಭಾರತೀಯ ಕ್ರೀಡೆಗಳಲ್ಲಿ ಸಂಸ್ಕಾರವನ್ನು ಕಲಿಸುವ, ರಾಜಮಹಾರಾಜರು ಬೆಳೆಸಿರುವಂತಹ ಈ ಕ್ರೀಡೆಯನ್ನು ಪಾಲನೆ, ಪೋಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಲ್ಲು ಪಟ್ಟಣಶೆಟ್ಟಿ, ನಿವೃತ್ತ ಶಿಕ್ಷಕರು ಹಾಗೂ ಕುಸ್ತಿ ಕಾರ್ಯಕ್ರಮದ ನಿರೂಪಕರು.