ಬೀರೂರು: ಹಾಲು ಉತ್ಪಾದಕರ ಮಹಿಳಾ ಸಂಘದಲ್ಲಿ 10 ವರ್ಷಗಳಿಂದ ವಾರ್ಷಿಕ ಸಭೆ ನಡೆಸದೇ ಆಯ-ವ್ಯಯದ ವರದಿ ನೀಡಿಲ್ಲ. ಸಂಘದಲ್ಲಿ ಬಂದಿರುವ ಆದಾಯದ ಬಗ್ಗೆ ವರದಿ ನೀಡುವಂತೆ ಕೇಳಿದ್ದಕ್ಕೆ ರೈತರು ತಂದ ಹಾಲನ್ನು ವಾಪಾಸ್ಸು ಕಳುಹಿಸಲಾಗಿದೆ.
ಹುಲ್ಲೇಹಳ್ಳಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಂಘದಲ್ಲಿ ಗುರುವಾರ ವಾರ್ಷಿಕ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಸಂಘ ಆರಂಭವಾಗಿ 10 ವರ್ಷ ಕಳೆದರೂ ಒಂದು ವಾರ್ಷಿಕ ಸಭೆ ಮಾಡಿಲ್ಲ. ಈ ಬಾರಿ ಸಹಕಾರ ಸಂಘಕ್ಕೆ 5ಲಕ್ಷ ರೂ.ಆದಾಯ ಎಂದು ವರದಿಯಲ್ಲಿ ತೋರಿಸಲಾಗಿದೆ. 10 ವರ್ಷದಿಂದ ಬಂದಿರುವ ಆದಾಯದ ವರದಿಯನ್ನು ನೀಡುವಂತೆ ರೈತರು ಒತ್ತಾಯಿಸಿದರು. ಆಗ ಕೆಲ ಕಿಡಿಗೇಡಿಗಳು ಪ್ರಶ್ನಿಸಿದ ರೈತರ ಮೇಲೆ ಮುಗಿಬಿದ್ದರು. ಇದರಿಂದ ಸಹಕಾರ ಸಂಘದ ಅಧಿಕಾರಿಗಳು ಸಭೆಯನ್ನು ಮೊಟಕುಗೊಳಿಸಿ ವಾಪಾಸ್ಸು ಹೋದರು.
ಎಂದಿನಂತೆ ರೈತರು ಸಂಜೆ ಸಂಘಕ್ಕೆ ಹಾಲು ತಂದಾಗ ಸಭೆಯನ್ನು ಸಂಘದ ವದರಿ ಕೇಳಿದವರ ಹಾಲನ್ನು ತಿರಸ್ಕರಿಸಿ, ನಿಮ್ಮಿಂದ ನಡೆಯಬೇಕಿದ್ದ ಸಭೆ ಮೊಟಕುಗೊಂಡಿದೆ. ಸಂಘಕ್ಕೆ ಕ್ಷಮೆಯಾಚಿಸಿ ಪತ್ರ ನೀಡಿದರೆ ಮಾತ್ರ ನಿಮ್ಮ ಹಾಲು ಹಾಕಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ನಿಮ್ಮ ಹಾಲನ್ನು ವಾಪಾಸ್ಸು ತೆಗೆದುಕೊಂಡು ಹೋಗಿ ನಾವು ತೆಗೆದುಕೊಳ್ಳುವುದಿಲ್ಲ ಎಂದು ಸಂಘದ ಬಾಗಿಲು ಮುಚ್ಚಿಕೊಂಡರು. ನಂತರ ಮೇಲಾಧಿಕಾರಿಗಳ ಗಮನಕ್ಕೆ ತಂದ ರೈತರು ಖಾಸಗಿ ವಾಹನದಲ್ಲಿ ಕಡೂರು ರಸ್ತೆಯಲ್ಲಿರುವ ಡೈರಿಗೆ ತಂದು ಒಪ್ಪಿಸಿದರು.
ತಿಮ್ಮೇಗೌಡ, ಹರೀಶ್, ಮನುಕುಮಾರ್, ರೇವಂತ್, ಚೈತ್ರ, ಓಂಕಾರಮ್ಮ ಇದ್ದರು.