ಆಲ್ದೂರು: ಭಾರತೀಯ ಜನತಾ ಪಾರ್ಟಿಯ ಮೇಲೆ ಜನ ನಂಬಿಕೆ ಇಟ್ಟಿದ್ದು ಬಿಜೆಪಿ ಸದಸ್ಯತ್ವ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ನಾರಾಯಣ ಗುರು ಸಮುದಾಯ ಭವನದಲ್ಲಿ ಬಿಜೆಪಿ ಮಂಡಲದಿಂದ ಆಯೋಜಿಸಿದ್ದ ಕಾರ್ಯಕಾರಣಿ ಸಭೆ ಹಾಗೂ ಸಂಸದರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಜನತೆ ಬಿಜೆಪಿ ಮೇಲೆ ನಂಬಿಕೆ ಇಟ್ಟಿದೆ. ಬಿಜೆಪಿ ಸದಸ್ಯರಾಗುತ್ತೀರಾ ಎಂದು ಜನರನ್ನು ಕೇಳಿದರೆ ಇಲ್ಲ ಎಂದು ಹೇಳುವವರ ಸಂಖ್ಯೆ ಕಡಿಮೆ. ಸದಸ್ಯತ್ವ ಅಭಿಯಾನ ಯಶಸ್ವಿಯಾಗಿ ಸಾಗುತ್ತಿದೆ ಎಂದರು.
ಮುಡಾ ಹಗರಣದಲ್ಲಿ ನ್ಯಾಯಾಲಯದ ತೀರ್ಪನ್ನು ರಾಜಕೀಯ ತೀರ್ಪು ಎಂದು ಹೇಳುವ ಮೂಲಕ ಸಚಿವ ಜಮೀರ್ ಅಹಮದ್ ನ್ಯಾಯಾಲಯಕ್ಕೆ ಅಪಮಾನ ಮಾಡಿದ್ದಾರೆ. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ನ್ಯಾಯಾಲಯದ ತೀರ್ಪಿಗೆ ಅವಮಾನ ಮಾಡುವ ಇವರ ನೈತಿಕತೆ ಏನು ಎಂಬುದನ್ನು ತೋರಿಸುತ್ತದೆ ಎಂದರೆ.
ಗಣೇಶ ಉತ್ಸವದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಿದ್ದ ಪೋಲೀಸರೇ ಗಣೇಶನ ವಿಗ್ರಹವನ್ನು ಪೊಲೀಸ್ ವ್ಯಾನ್‌ನಲ್ಲಿ ತಂದು ಠಾಣೆಯಲ್ಲಿ ಇಡುತ್ತಾರೆ ಎಂದರೆ ಮುಂದಿನ ದಿನಗಳಲ್ಲಿ ಹಿಂದು ಸಂಸ್ಕೃತಿ ಮೇಲೆ ಎಂತಹ ಭಯಾನಕ ಕೃತ್ಯಗಳು ನಡೆಯಬಹುದು ಎಂಬುದನ್ನು ಊಹಿಸಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಳಿತಪ್ಪಿದೆ ಎಂದರು.
ಆಲ್ದೂರು ಮಂಡಲದ ಅಧ್ಯಕ್ಷ ರವಿ ಬಸರವಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜು ಶೆಟ್ಟಿ, ಉಪಾಧ್ಯಕ್ಷ ಕನಕ ರಾಜು, ಕವೀಶ್,ಮಂಡಲದ ಪ್ರಧಾನ ಕಾರ್ಯದರ್ಶಿ ಅರವಿಂದ್, ರವೀಂದ್ರ, ಆಲ್ದೂರು ಮಂಡಲದ ಪ್ರಭಾರಿ ವೀಣಾಶೆಟ್ಟಿ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನೇಶ್, ಮನು ರಾಮೇಗೌಡ, ನಾರಾಯಣ ಆಚಾರ್ಯ, ನಾಗೇಶ್, ಪ್ರತಿಭಾ, ಚಂಪಾ, ಮಂಜುಳಾ, ಭವ್ಯ, ಚೇತನ್‌ಶೆಟ್ಟಿ, ಸಿಂಧೂ ಕುಮಾರ್ ಇದ್ದರು.