ಮೈಸೂರು: ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಪಾರಂಪರಿಕ ಕಟ್ಟಡ ಸರ್ಕಾರಿ ಅತಿಥಿ ಗೃಹಕ್ಕೆ ಸೇರಿದ ಸ್ವಾಗತ ಕಮಾನು ಎಲ್ಲರ ನಿರ್ಲಕ್ಷೃಕ್ಕೆ ಗುರಿಯಾಗಿ, ಕುದುರೆ ಲಾಯವಾಗಿ ಮಾರ್ಪಾಡು ಹೊಂದಿತ್ತು. ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಮೇಯರ್ ಶಿವಕುಮಾರ್ ಕುದುರೆಗಳನ್ನು ಸ್ಥಳದಿಂದ ತೆರವುಗೊಳಿಸಿದರು.
ಈ ಸ್ವಾಗತ ಕಮಾನಿನ ದುಸ್ಥಿತಿಯ ಕುರಿತು ನಂ.1 ಕನ್ನಡ ದೈನಿಕ ‘ವಿಜಯವಾಣಿ’ ಬುಧವಾರದ ಸಂಚಿಕೆಯಲ್ಲಿ ‘ಕುದುರೆ ಲಾಯವಾದ ಸ್ವಾಗತ ಕಮಾನು’ ವಿಶೇಷ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಮೇಯರ್ ಶಿವಕುಮಾರ್, ಸ್ವಾಗತ ಕಮಾನಿನ ಅಭಿವೃದ್ಧಿಗೆ ಕ್ರಮ ವಹಿಸುವ ಭರವಸೆ ನೀಡಿದ್ದಾರೆ.
ಸ್ವಾಗತ ಕಮಾನು ನಿರ್ವಹಣೆಯ ಕೊರತೆಯಿಂದ ದುಸ್ಥಿತಿಗೆ ತಲುಪಿದೆ. ಇದರ ಜತೆಗೆ ಈ ಕಟ್ಟಡದಲ್ಲಿ ಕುದುರೆಗಳನ್ನು ಕಟ್ಟುತ್ತಿರುವ ಹಿನ್ನೆಲೆಯಲ್ಲಿ ಕಟ್ಟಡ ಮತ್ತಷ್ಟು ದುಸ್ಥಿತಿಗೆ ತಲುಪಿದೆ. ಇದೇ ರೀತಿ ನಿರ್ವಹಣೆ ಕಾಣದೆ ಹೋದರೆ ಕೆಲವೇ ವರ್ಷಗಳಲ್ಲಿ ಕಟ್ಟಡ ಕುಸಿದು ಬೀಳುವುದು ನಿಶ್ಚಿತ. ‘ವಿಜಯವಾಣಿ’ ವರದಿಯ ಪರಿಣಾಮ ಇದೀಗ ಈ ಪಾರಂಪರಿಕ ಕಟ್ಟಡಕ್ಕೆ ಕಾಯಕಲ್ಪ ದೊರೆಯುವ ಭರವಸೆ ಮೂಡಿದೆ.
ಸ್ವಾಗತ ಕಮಾನು ಪಾರಂಪರಿಕ ಕಟ್ಟಡವಾಗಿದ್ದು, ಯಾವುದೇ ಕಾರಣಕ್ಕೂ ಈ ಕಟ್ಟಡದಲ್ಲಿ ಕುದುರೆಗಳನ್ನು ಕಟ್ಟಬಾರದು. ಇನ್ನು ಮುಂದೆ ಕುದುರೆಗಳನ್ನು ಕಟ್ಟಿದರೆ ಕುದುರೆಗಳನ್ನು ದೊಡ್ಡಿಗೆ ಕಳುಹಿಸಲಾಗುವುದು ಎಂದು ಕುದುರೆ ಮಾಲೀಕರುಗಳಿಗೆ ಮೇಯರ್ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಸ್ವಾಗತ ಕಮಾನು ಕಟ್ಟಡ ಸಂಪೂರ್ಣ ದುಸ್ಥಿತಿಗೆ ತಲುಪಿದ್ದು, ಕಟ್ಟಡದ ಸಂರಕ್ಷಣಾ ಕಾರ್ಯವನ್ನು ಶೀಘ್ರದಲ್ಲಿಯೇ ಕೈಗೊಳ್ಳಲಾ ಗುವುದು. ಗುರುವಾರ ಜಿಲ್ಲಾ ಪಾರಂಪರಿಕ ಸಮಿತಿ ಸದಸ್ಯರಾದ ಡಾ.ಎನ್.ಎಸ್. ರಂಗರಾಜು ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕಟ್ಟಡವನ್ನು ಪರಿಶೀಲಿಸಿ ಕಟ್ಟಡದ ಸಂರಕ್ಷಣೆಗೆ ಕ್ರಮ ವಹಿಸಲಾಗುವುದು ಎಂದು ‘ವಿಜಯವಾಣಿ’ಗೆ ತಿಳಿಸಿದರು.