ಜಮಖಂಡಿ ನಗರದಲ್ಲಿ ತಯಾರಾದ ಮಾವಾ. 
ಜಿಲ್ಲೆ

ಎಗ್ಗಿಲ್ಲದೆ ಸಾಗಿದ ಮಾವಾ ದಂಧೆ

ದತ್ತಾತ್ರೇಯ ಪಿ ಕುಲಕರ್ಣಿ

ಜಮಖಂಡಿ: ಯುವಕರ ಆರೋಗ್ಯ ಹಾಳು ಮಾಡುತ್ತಿರುವ ಮಾವಾ ದಂಧೆ ಜಮಖಂಡಿ, ಹುನ್ನೂರು ಸೇರಿ ತಾಲೂಕಿನ ಹಲವೆಡೆ ರಾಜಾರೋಷವಾಗಿ ನಡೆದಿದೆ.

ಸರ್ಕಾರ ತಂಬಾಕು ಮಿಶ್ರಿತ ಗುಟ್ಖಾ ನಿಷೇಧಿಸಿರುವ ಹಿನ್ನೆಲೆಯಲ್ಲಿ ಗುಟ್ಖಾ ಪ್ರಿಯರು ವ್ಯಸನ ತೀರಿಸಿಕೊಳ್ಳಲು ಮಾವಾಗೆ ಮೊರೆ ಹೋಗಿದ್ದಾರೆ. ಜಮಖಂಡಿ ಹಾಗೂ ವಿವಿಧೆಡೆ ಅಕ್ರಮವಾಗಿ ತಯಾರಾಗುತ್ತಿರುವ ಮಾವಾ ಉತ್ಪನ್ನ ಸೇವಿಸುವ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಬಾಯಿ ಹುಣ್ಣು ರೋಗಿಗಳ ಸಂಖ್ಯೆ ಹೆಚ್ಚಳ

ಗುಟ್ಖಾ, ಮಾವಾ ದುಶ್ಚಟಕ್ಕೆ ದಾಸರಾಗಿರುವ ಹೆಚ್ಚಿನ ಸಂಖ್ಯೆ ಯುವಕರಲ್ಲಿ ಬಾಯಿ ತೆರೆಯಲು ಆಗುತ್ತಿಲ್ಲ. ವಸಡುಗಳಲ್ಲಿ ಕೆಂಪು ಬಿಳಿ ಮಚ್ಚೆಗಳು, ಹುಣ್ಣುಗಳು, ಹಲ್ಲುಗಳ ಸವೆತ ಸೇರಿ ಇನ್ನಿತರ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ನಗರದ ದಂತ ವೈದ್ಯರ ಹತ್ತಿರ ಒಂದು ತಿಂಗಳಲ್ಲಿ ಮಾವಾ ಸೇವಿಸಿ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ 10ಕ್ಕೂ ಅಧಿಕ ರೋಗಿಗಳು ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಇಂತಹ ಬಹಳಷ್ಟು ರೋಗಿಗಳನ್ನು ಮಿರಜ್, ಸಾಂಗಲಿ, ಹುಬ್ಬಳ್ಳಿ, ಬಾಗಲಕೋಟೆ ಸೇರಿ ವಿವಿಧ ಆಸ್ಪತ್ರೆಗಳಿಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿದ್ದೇವೆ. ಇನ್ನೂ ಕೆಲವರು ನೇರವಾಗಿ ದೊಡ್ಡ ಆಸ್ಪತ್ರೆಗಳಿಗೆ ಹೋದವರು ಇದ್ದಾರೆ ಎಂದು ನಗರದ ದಂತ ವೈದ್ಯ ಡಾ. ವಿದ್ಯಾಧರ ಪತ್ತಾರ ಹೇಳುತ್ತಾರೆ.

ಅಧಿಕಾರಿಗಳು ನೆಪ ಮಾತ್ರಕ್ಕೆ ಒಂದು ದಿನ ಮಾರಾಟ ಅಂಗಡಿಗಳ ಮೇಲೆ ದಾಳಿ ಮಾಡಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮಾವಾ ಪಾಕೆಟ್‌ಗಳನ್ನು ವಶಪಡಿಸಿಕೊಳ್ಳುತ್ತಾರೆ. ಆದರೆ ಮಾವಾ ಉತ್ಪಾದಿಸುವ ಘಟಕಗಳನ್ನು ಶಾಶ್ವತವಾಗಿ ಮಟ್ಟಹಾಕಲು ಮಾತ್ರ ಹಿಂದೇಟು ಹಾಕುತ್ತಿರುವುದು ನಾಗರಿಕರಲ್ಲಿ ಸಂಶಯಕ್ಕೆ ಎಡೆ ಮಾಡಿದೆ.

ನಗರದ ಅನೇಕ ಪಾನ್ ಶಾಪ್, ಮನೆಗಳಲ್ಲಿ ಮಾವಾ ತಯಾರಿಕೆಯಲ್ಲಿ ಯುವಕರು ತೊಡಗಿಕೊಂಡಿದ್ದಾರೆ. ತಮ್ಮ ಜೀವನ ಕಟ್ಟಿಕೊಳ್ಳಲು ಬೇರೆಯವರ ಬದುಕು ಬರ್ಬಾದ್ ಮಾಡುತ್ತಿದ್ದಾರೆ ಎಂದು ಪ್ರಜ್ಞಾವಂತ ನಾಗರಿಕರು ಆಡಿಕೊಳ್ಳುತ್ತಿದ್ದಾರೆ. ಮಾವಾ ತಯಾರಿಸುವವರು ಕ್ವಿಂಟಾಲ್ ಲೆಕ್ಕದಲ್ಲಿ ಅಡಿಕೆ, ಹುಣಸೆ ಬೀಜಗಳನ್ನು ಯಂತ್ರದ ಸಹಾಯದಿಂದ ಪುಡಿ ಮಾಡಿ ಗುಣಮಟ್ಟವಲ್ಲದ ತಂಬಾಕು, ಸುಣ್ಣ, ನಿಕೋಟಿನ್ ಸೇರಿ ವಿವಿಧ ರಾಸಾಯನಿಕ ವಸ್ತುಗಳನ್ನು ಸೇರಿಸಿ ಪ್ಲಾಸ್ಟಿಕ್ ಹಾಳೆಯಲ್ಲಿ ಹದವಾಗಿ ತಿಕ್ಕಿ ಮಾವಾ ತಯಾರಿಸುತ್ತಾರೆ.

ಟಯರ್ ಮೇಲೆ ತಿಕ್ಕುವ ಮಾವಾಗೆ 30 ರೂ., ಕೈಯಲ್ಲಿ ತಿಕ್ಕುವ ಮಾವಾಗೆ 40 ರಿಂದ 50 ರೂ., ಸ್ಪೇಷಲ್ ಮಾವಾಗೆ 60 ರೂ. ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ನಿತ್ಯ ಇಲ್ಲಿಂದ ಮುಂಬಯಿ, ಪುಣೆ, ಸಾಂಗಲಿ, ಮಿರಜ್, ಧಾರವಾಡ, ಹುಬ್ಬಳ್ಳಿ, ಗಲಗಲಿ, ಅಥಣಿ, ವಿಜಯಪುರ, ಲೋಕಾಪುರ, ಬೀಳಗಿ, ಮುಧೋಳ ನಗರಕ್ಕೆ ಮಾವಾ ಸಾಗಿಸಲಾಗುತ್ತದೆ.

ಕದ್ದು ಮುಚ್ಚಿ ಮಾರಾಟ

ನಗರದ ಪಾನ್‌ಶಾಪ್‌ಗಳಲ್ಲಿ ಕದ್ದು ಮುಚ್ಚಿ ಮಾವಾ ಮಾರಾಟ ಮಾಡಲಾಗುತ್ತಿದೆ. ಪ್ರತಿ ಪಾನ್‌ಶಾಪ್‌ನಲ್ಲಿ 100ಕ್ಕೂ ಅಧಿಕ ಮಾವಾ ಪಾಕೆಟ್‌ಗಳು ದಿನ ನಿತ್ಯ ಖಾಲಿಯಾಗುತ್ತವೆ. ನಗರದಲ್ಲಿ ನೂರಾರು ಪಾನ್‌ಶಾಪ್ ಅಂಗಡಿಗಳಿವೆ. ಕೆಲ ಗ್ರಾಹಕರು ಮುಂಚಿತವಾಗಿ ಮಾವಾ ತಯಾರಿಸಲಿಕ್ಕೆ ಹಣ ನೀಡುತ್ತಾರೆ. ಗುಟ್ಖಾ ನಿಷೇಧದ ಬಳಿಕ ಮಾವಾಗೆ ಬೇಡಿಕೆ ಹೆಚ್ಚಿದೆ ಎಂದು ಪಾನ್‌ಶಾಪ್ ವ್ಯಾಪಾರಿಗಳು ತಿಳಿಸುತ್ತಾರೆ.

ಮೊದಲು ಜಮಖಂಡಿ ನಗರ ಹಾಲಿನ ಖೊವಾ, ಪೇಢೆ ಹಾಗೂ ಹೈನುಗಾರಿಕೆಯ ಪದಾರ್ಥಗಳಿಗೆ ಪ್ರಸಿದ್ಧವಾಗಿತ್ತು. ಆದರೆ ಈಗ ಮಾವಾದಿಂದ ಕುಖ್ಯಾತಿ ಪಡೆಯುತ್ತಿರುವುದಕ್ಕೆ ಪ್ರಜ್ಞಾವಂತ ನಾಗರಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

ಜಮಖಂಡಿ ನಗರದಲ್ಲಿ ಅಕ್ರಮ ಮಾವಾದಿಂದಲೇ ಪ್ರತಿ ತಿಂಗಳು ಕೋಟ್ಯಂತರ ರೂ.ವಹಿವಾಟು ನಡೆಯುತ್ತಿದೆ. ಪೊಲೀಸ್, ಆಹಾರ ಸುರಕ್ಷತಾ ಅಧಿಕಾರಿಗಳ ಎದುರೇ ಅಕ್ರಮ ಮಾವಾ ಚಟುವಟಿಕೆ ನಡೆದರೂ ಯಾವುದನ್ನು ನೋಡಿ ನೋಡದಂತೆ ಕಣ್ಣು ಮುಚ್ಚಿಕೊಂಡು ಕುಳಿತುಕೊಂಡಿದ್ದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸ್ ಸಿಬ್ಬಂದಿಯಲ್ಲಿ ಕೆಲವರು ಮಾವಾ ಜಗಿಯುತ್ತಾರೆ. ರಾಜಾರೋಷವಾಗಿ ಅಕ್ರಮ ದಂಧೆ ನಡೆಯಲು ಇದು ಕೂಡ ಕಾರಣವಾಗಿರಬಹುದು ಎಂಬ ಮಾತು ಕೇಳಿ ಬರುತ್ತಿದೆ.

ಜಮಖಂಡಿಯಲ್ಲಿ ಮಾವಾ ತಯಾರಿಸಿ ಮಾರಾಟ ಮಾಡುತ್ತಿರುವ ಬಗ್ಗೆ ವಿಚಾರಿಸುವೆ. ಅಕ್ರಮ ಮಾವಾ ತಯಾರಿಸುವವರ ಮೇಲೆ, ಮಾರಾಟಗಾರರ ಮೇಲೆ ಶೀಘ್ರ ಕ್ರಮ ತೆಗೆದುಕೊಳ್ಳಲಾಗುವುದು. ಸಂಗಪ್ಪ ಎಂ. ಜಿಲ್ಲಾಧಿಕಾರಿ