ಬೆಳಗಾವಿ: ಇಲ್ಲಿನ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧಗಳ ತನಿಖಾ ತಂಡ (ಸಿಇಎನ್) ವಿಶೇಷ ಕಾರ್ಯಾಚರಣೆ ನಡೆಸಿ ಕರ್ನಾಟಕಕ್ಕೆ ಮಧ್ಯಪ್ರದೇಶ, ಒಡಿಶಾದಿಂದ ಗಾಂಜಾ ಪೂರೈಸುತ್ತಿದ್ದ ಮಾಸ್ಟರ್ ಮೈಂಡ್ ಓರ್ವನನ್ನು ಆತನ ತಂಡದ ಸಮೇತ ಬಂಧಿಸಿ, 50 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಮಾಸ್ಟರ್ ಮೈಂಡ್ ಇಸ್ಮಾಯಿಲ್ ಅಲಿಯಾಸ್ ಸದ್ದಾಂ ಬಾಬು ಸಯ್ಯದ್, ತಾಜೀರ್ ಬಸ್ತವಾಡೆ, ಪ್ರಥಮೇಶ ಲಾಡ್, ತೇಜಸ್ ವಾಜರೆ, ಶಿವಕುಮಾರ ಆಸಬೆ ಹಾಗೂ ರಮಜಾನ್ ಜಮಾದಾರ ಬಂಧಿತರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಆಯುಕ್ತ ಭೂಷಣ ಬೋರಸೆ ಈ ಕುರಿತು ಮಾಹಿತಿ ನೀಡಿ, ಸಿಇಎನ್ ಪೊಲೀಸರು ಜೂ. 29ರಂದು ತಾಜಿಬ್ ಮುಲ್ಲಾ ಮತ್ತು ಅನುರಾಗ ಯರಳಾನಕರನ್ನು ಬಂಧಿಸಿ 5 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದರು. ಇದರ ಮೂಲ ಬೆನ್ನತ್ತಿದ ಸಿಇಎನ್ ಠಾಣೆ ಇನ್ಸಪೆಕ್ಟರ್ ಬಿ.ಆರ್. ಗಡ್ಡೇಕರ ನೇತೃತ್ವದ ತಂಡ ಜುಲೈ 21ರಂದು ಮುಂಬೈದಲ್ಲಿ ಸದ್ದಾಂ ಮನೆ ಮೇಲೆ ದಾಳಿ ಮಾಡಿ, ಆತನ ಮಾವ ಅಬ್ದುಲ್ಮಾಜೀದ್ನನ್ನು 2 ಕೆಜಿ ಗಾಂಜಾದೊಂದಿಗೆ ಬಂಧಿಸಿ ಕರೆತಂದಿದ್ದರು. ಈ ಎಲ್ಲ ಆರೋಪಿಗಳು ಹಿಂಡಲಗಾ ಜೈಲಿನಲ್ಲಿದ್ದರು. ಇವರನ್ನು ಭೇಟಿಯಾಗಲು ನಿನ್ನೆ (ಗುರುವಾರ) ಸದ್ದಾ ಬೆಳಗಾವಿಗೆ ಬರುತ್ತಿದ್ದ ಮಾಹಿತಿ ಆಧರಿಸಿ ಮಹಾರಾಷ್ಟ್ರದ ಚಂದಗಡ ತಾಲೂಕಿನಲ್ಲಿ ದಾಳಿ ಮಾಡಿ 42.730 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಪ್ರಕರಣದಲ್ಲಿ ಇಲ್ಲಿಯವರೆಗೆ 9 ಆರೋಪಿಗಳನ್ನು ಬಂಧಿಸಿ ಒಟ್ಟು 50.452 ಕೆಜಿ ಗಾಂಜಾ, 13 ಮೊಬೈಲ್, 2 ಕಾರು, 1 ಬೈಕ್, ಮಾರಕಾಸ, ಇತರ 11 ವಸ್ತುಗಳು ಸೇರಿ ಒಟ್ಟು 30 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದೇವೆ ಎಂದರು. ಡಿಸಿಪಿಗಳಾದ ನಾರಾಯಣ ಬರಮನಿ, ನಿರಂಜನ ರಾಜೇ ಅರಸ್, ಸೆನ್ ಇನ್ಸಪೆಕ್ಟರ್ ಬಿ.ಆರ್. ಗಡ್ಡೇಕರ ಇತರರಿದ್ದರು.