ವಿಜಯವಾಣಿ ಸುದ್ದಿಜಾಲ ಬೈಂದೂರು
ಮರಾಠಿ ಜನಾಂಗದವರು ನಮ್ಮ ಸನಾತನ ಸಂಸ್ಕೃತಿ, ಪರಂಪರೆ, ಆಚಾರ ವಿಚಾರಗಳನ್ನು ಎತ್ತಿ ಹಿಡಿದಿದ್ದಾರೆ. ಅವರು ನಡೆಸುವ ಹೋಳಿನೃತ್ಯ ವಿಭಿನ್ನವಾಗಿದೆ. ರಾಮಾಯಣ, ಮಹಾಭಾರತ ಮೊದಲಾದ ಪುರಾಣ ಗ್ರಂಥಗಳಲ್ಲಿರುವ ವ್ಯಾಖ್ಯಾನಗಳನ್ನು ತಮ್ಮ ನೃತ್ಯ ಹಾಗೂ ಹಾಡಿನಿಂದಲೇ ಮನದಟ್ಟು ಮಾಡಿಸುತ್ತಿದ್ದಾರೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ತಂತ್ರಿ ಕೆ.ನಿತ್ಯಾನಂದ ಅಡಿಗ ಹೇಳಿದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವರ್ಣಮುಖಿ ಮಂಟಪದಲ್ಲಿ ಮರಾಠಿ ಜನಾಂಗದವರ ಹೋಳಿ ಆಚರಣೆಯ ಸಂದರ್ಭ ಬೈಂದೂರು ಹಾಗೂ ಕುಂದಾಪುರ ತಾಲೂಕಿನ 35ಕ್ಕೂ ಅಧಿಕ ಹೋಳಿ ಕೇರಿ ವತಿಯಿಂದ ದೇವರಿಗೆ ಸಾಮೂಹಿಕ ಕಾಣಿಕೆ ಸಮರ್ಪಣೆ ಕಾರ್ಯಕ್ರಮದ ಧರ್ಮಸಭೆಯಲ್ಲಿ ಮಾತನಾಡಿದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಪ್ರಧಾನ ಅರ್ಚಕ ಡಾ.ಕೆ.ಎನ್.ನರಸಿಂಹ ಅಡಿಗ, ಕೆ.ವಿ.ಶ್ರೀಧರ ಅಡಿಗ ಜಂಟಿಯಾಗಿ ಕಾರ್ಯಕ್ರಮ ಉದ್ಘಾಟಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಲಿಂಗ ನಾಯ್ಕ ಜೆಡ್ಡು, ಸುಧಾ ಕೆ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತಕುಮಾರ್ ಶೆಟ್ಟಿ, ಪತ್ರಕರ್ತ ಕೆ.ಸಿ.ರಾಜೇಶ್, ಸಮುದಾಯದ ಮುಖಂಡರಾದ ಹೆರಿಯ ನಾಯ್ಕ, ನಾರಾಯಣ ನಾಯ್ಕ ಉಪಸ್ಥಿತರಿದ್ದರು. ಗೋಳಿಹೊಳೆ ಚಾರ‌್ಸಾಲ್ ಹೋಳಿ ಕೇರಿ ತಂಡದವರು ಪ್ರಾರ್ಥಿಸಿದರು. ರಮೇಶ್ ಜಡ್ಕಲ್ ಸ್ವಾಗತಿಸಿದರು. ಉದಯ ನಾಯ್ಕ ಹುಲ್ಕಡಿಕೆ ನಿರೂಪಿಸಿದರು.