ಜಿಲ್ಲೆ

ಜಗದ ಗಮನ ಸೆಳೆದ 'ಮಣಿಪಾಲ ಮೆರಾಥಾನ್​'...

ಮಾಹೆ ಆಯೋಜಿತ 7ನೇ ಆವೃತ್ತಿಯ ಸ್ಪರ್ಧೆ

20 ಸಾವಿರಕ್ಕೂ ಅಧಿಕ ಓಟಗಾರರು ಭಾಗಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಮಣಿಪಾಲ ಅಕಾಡೆಮಿ ಆಫ್​ ಹೈಯರ್​ ಎಜುಕೇಶನ್​ (ಮಾಹೆ)ನ ವಿದ್ಯಾರ್ಥಿಗಳಿಗಾಗಿ ಗ್ರೀನ್ಸ್​ ಮಣಿಪಾಲದಲ್ಲಿ ಭಾನುವಾರ ನಸುಕಿನ 4:30ಕ್ಕೆ ಆಯೋಜಿಸಿದ್ದ 'ಮಣಿಪಾಲ ಮೆರಾಥಾನ್​' ಕಾರ್ಯಕ್ರಮ ಭಾರತದ ಅತಿದೊಡ್ಡ ಓಟವಾಗಿ ದಾಖಲಾಯಿತು.

ಈ ವರ್ಷದ 7ನೇ ಆವೃತ್ತಿಯಾಗಿ ಚಲನೆಯಲ್ಲಿ ನಾವೀನ್ಯತೆ: ಆರೋಗ್ಯ ಮತ್ತು ಸದೃಢತೆಗಾಗಿ ತಂತ್ರಜ್ಞಾನ ಅಳವಡಿಸಿಕೊಳ್ಳುವಿಕೆ ಎಂಬ ಘೋಷವಾಕ್ಯದೊಂದಿಗೆ ಮೆರಾಥಾನ್​ ನಡೆದಿದ್ದು, 20 ಸಾವಿರಕ್ಕೂ ಹೆಚ್ಚು ಓಟಗಾರರು ಪಾಲ್ಗೊಂಡಿದ್ದರು. 'ಮಣಿಪಾಲ್​ ಗ್ಲೋಬಲ್​ ವರ್ಚುಯಲ್​ 5ಕೆ ರನ್​' ಸೇರ್ಪಡೆಯಿಂದಾಗಿ ವಿಶ್ವಾದ್ಯಂತ 7 ಸಾವಿರಕ್ಕೂ ಅಧಿಕ ಓಟಗಾರರು ವರ್ಚುಯಲ್​ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಮೆರಾಥಾನ್​ಗೆ ಚಾಲನೆ

ಐಸಿಐಸಿಐ ಬ್ಯಾಂಕ್​ನ ಕರ್ನಾಟಕ ವಲಯ ಮುಖ್ಯಸ್ಥ ಶಶಿಕುಮಾರ್​ ನಾಯಕ್​ (42 ಕಿಮೀ), ಎಸ್​ಬಿಐನ ಉಪ ಪ್ರಧಾನ ವ್ಯವಸ್ಥಾಪಕ ಅಲೋಕಕುಮಾರ್​ ದ್ವಿವೇದಿ (21 ಕಿಮೀ), ಯುನೆಕ್ಸ್ಟ್​ ಲರ್ನಿಂಗ್​ನ ಮುಖ್ಯಸ್ಥ ಅಂಬರೀಷ್​ ಸಿನ್ಹಾ (10 ಕಿಮೀ), ಬಾಬ್​ಕಾರ್ಡ್​ ಲಿಮಿಟೆಡ್​ನ ಸಿಇಒ ರವೀಂದ್ರ ರೈ (5 ಕಿಮೀ) ಓಟಗಳಿಗೆ ಚಾಲನೆ ನೀಡಿದರು.

ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ, ಮಾಹೆ ಟ್ರಸ್ಟ್​ನ ಅಧ್ಯಕ್ಷ ಡಾ. ರಂಜನ್​ ಪೈ, ಮಾಹೆಯ ಪ್ರೊ-ಚಾನ್ಸೆಲರ್​ ಡಾ. ಎಚ್​.ಎಸ್​. ಬಲ್ಲಾಳ್​, ಮಾಹೆಯ ವೈಸ್​-ಚಾನ್ಸೆಲರ್​ ವಿಎಸ್​ಎಂ (ನಿವೃತ್ತ) ಲೆಫ್ಟಿನೆಂಟ್​ ಜನರಲ್​ (ಡಾ.) ಎಂ.ಡಿ. ವೆಂಕಟೇಶ್​ ಹಾಗೂ ವಿವಿಯ ಅಧಿಕಾರಿಗಳು, ಜಿಲ್ಲೆಯ ವಿವಿಧ ಗಣ್ಯರು ಪಾಲ್ಗೊಂಡಿದ್ದರು.

ಅಂಗವಿಕಲರು, ಅಂಧರಿಂದಲೂ ಓಟ!

ಅಮೆರಿಕ, ಫ್ರಾನ್ಸ್​, ಜರ್ಮನಿ, ಇಂಗ್ಲಂಡ್​, ಟರ್ಕಿ, ಇಥಿಯೋಪಿಯಾ, ಕೀನ್ಯಾ, ನಮೀಬಿಯಾ, ಜಪಾನ್​, ಉಗಾಂಡಾ, ಮಲಾವಿ, ಕಾಂಗೋ, ಘಾನಾ, ಸುಡಾನ್​, ಅಬುಧಾಬಿ ಯುಎಇ ಮತ್ತು ಆಸ್ಟ್ರೆಲಿಯಾ ದೇಶಗಳಿಂದ 100ಕ್ಕೂ ಅಧಿಕ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಭಾಗವಹಿಸಿದ್ದರು. ಸಮರ್ಥನಂ ಟ್ರಸ್ಟ್​ ಮತ್ತು ಗಂಗಾ ಫೌಂಡೇಷನ್​ನ ಸಹಯೋಗದೊಂದಿಗೆ ಭಾರತದಾದ್ಯಂತ 300ಕ್ಕೂ ಅಧಿಕ ಅಂಧರು, 200ಕ್ಕೂ ಅಧಿಕ ಅಂಗವಿಕಲರೂ ಸಹ ಸ್ಪರ್ಧಿಸಿದ್ದರು.
ಮಣಿಪಾಲ ಮೆರಾಥಾನ್​ ಕೇವಲ ಓಟವಲ್ಲ. ಇದು ಚಲನೆಯಲ್ಲಿ ಸ್ಥಿತಿಸ್ಥಾಪಕತ್ವ, ನಾವೀನ್ಯ ಮತ್ತು ಸಮುದಾಯ ಮನೋಭಾವದ ಆಚರಣೆಯಾಗಿದೆ. ಈ ವರ್ಷದ ಘೋಷಣೆಯಂತೆ ಎಲ್ಲರ ಯೋಗಕ್ಷೇಮ ಮತ್ತು ದೈಹಿಕ ಸದೃಢತೆ ಉತ್ತೇಜಿಸಲು ಜಾಗತಿಕ ಮಟ್ಟದಲ್ಲಿ ಈ ಓಟ ಆಯೋಜಿಸಲಾಗಿದೆ. | ಡಾ. ಎಚ್​. ಎಸ್​. ಬಲ್ಲಾಳ್​. ಮಣಿಪಾಲ ಮಾಹೆಯ ಪ್ರೊ-ಚಾನ್ಸೆಲರ್​. ತಂತ್ರಜ್ಞಾನವೂ ಸಹ ನಮ್ಮ ದೈಹಿಕ ಸದೃಢತೆಯನ್ನು ಮರುರೂಪಿಸಿ ಸಾಧಿಸುವ ವಿಧಾನವಾಗಿದೆ. ಈ ಬಾರಿ 'ಮಣಿಪಾಲ ಮೆರಾಥಾನ್​'ನಲ್ಲಿ ವಿಶ್ವಾದ್ಯಂತ ಓಟಗಾರರು ತೊಡಗಿಸಿಕೊಂಡಿದ್ದು ಮಹತ್ತರ ಸಾಧನೆಯಾಗಿದೆ. ಇದು ಆರೋಗ್ಯಕರ ಭವಿಷ್ಯ ಉತ್ತೇಜಿಸುವಲ್ಲಿ ಡಿಜಿಟಲ್​ ರೂಪಾಂತರದ ಶಕ್ತಿಯನ್ನು ಎತ್ತಿ ತೋರಿಸುತ್ತದೆ. | (ಡಾ.) ಎಂ. ಡಿ. ವೆಂಕಟೇಶ್​. ಮಣಿಪಾಲ ಮಾಹೆಯ ವೈಸ್​ ಚಾನ್ಸೆಲರ್​

ಸಚಿನ್​ ಪೂಜಾರಿ, ಲೆಶಾರ್ಜ್​ ಕೆಫೆಲೆಗನ್​ ಪ್ರಥಮ

ಪೂರ್ಣ ಮೆರಾಥಾನ್​ (42 ಕಿಮೀ)ನ ಪುರುಷರ ವಿಭಾಗದಲ್ಲಿ ಸಚಿನ್​ ಪೂಜಾರಿ (ಪ್ರ), ನಂಜುಂಡಪ್ಪ ಎಂ. (ದ್ವಿ), ಚೆರುಯೋಟ್​ ಡ್ಯಾನಿಯಲ್​ (ತೃ). ಮಹಿಳೆಯರ ವಿಭಾಗದಲ್ಲಿ ಲೆಶಾರ್ಜ್​ ಸೇನೈಟ್​ ಕೆಫೆಲೆಗನ್​ (ಪ್ರ), ಆಸಾ ಟಿಪಿ (ದ್ವಿ), ಶಕುಂತಲಾದೇವಿ (ತೃ).ಅರ್ಧ ಮೆರಾಥಾನ್​ (21 ಕಿಮೀ)ನ ಪುರುಷರ ವಿಭಾಗದಲ್ಲಿ ಅಂಕುಶ್​ ಹಕ್ಕೆ (ಪ್ರ), ಕಿಪ್ಟೂ ಅಬ್ರಹಾಂ (ದ್ವಿ), ಶಿವಮ್​ ಯಾದವ್​ (ತೃ). ಮಹಿಳೆಯರ ವಿಭಾಗದಲ್ಲಿ ಕೆ.ಎಂ. ಲಕ್ಷ್ಮೀ (ಪ್ರ), ನಂದಿನಿ ಜಿ. (ದ್ವಿ), ಮೋಲ್ಲೇಶ್ವರಿ (ತೃ).ಸಮಯದ ಓಟ (10 ಕಿಮೀ) ಪುರುಷರ ವಿಭಾಗ: ಲವ್​ ಚೌಧರಿ (ಪ್ರ), ಎ.ಆರ್​. ರೋಹಿತ್​ (ದ್ವಿ), ಅಂಕಿತ್​ ಇಂಡೋಲಿಯಾ (ತೃ). ಮಹಿಳಾ ವಿಭಾಗ: ಸ್ಮಿತಾ ಡಿ.ಆರ್​. (ಪ್ರ), ನೀತುಕುಮಾರಿ (ದ್ವಿ), ಶ್ರೇಯಾ ಎಂ. (ತೃ). ಪ್ರಥಮ 1 ಲಕ್ಷ ರೂ. ದ್ವಿತೀಯ 75 ಸಾವಿರ ರೂ. ಹಾಗೂ ತೃತೀಯ 50 ಸಾವಿರ ರೂ. ನಗದು ಬಹುಮಾನ ನೀಡಲಾಯಿತು.