ನ್ಯಾಮತಿ: ತಾಲೂಕಿನ ಕೆಂಚಿಕೊಪ್ಪ ಗ್ರಾಮದಲ್ಲಿ ಹಳೇ ಮನೆಯೊಂದನ್ನು ಕೆಡವುವ ಕೆಲಸಕ್ಕೆ ಹೋಗಿದ್ದ ವ್ಯಕ್ತಿ ಮೇಲೆ ಗೋಡೆ ಬಿದ್ದು ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಆರುಂಡಿ ಗ್ರಾಮದ ಜಿ.ರವಿ (39) ಮೃತ ವ್ಯಕ್ತಿ. ಬೀರಪ್ಪ ಎಂಬ ಗುತ್ತಿಗೆದಾರನೊಂದಿಗೆ ಮನೆಯ ಹೆಂಚುಗಳನ್ನು ತೆಗೆದು ಗೋಡೆ ಕೆಡವುತ್ತಿರುವಾಗ ಗೋಡೆ ಬಿದ್ದಿದ್ದು, ಮೈಕೈ ಮತ್ತು ಕಾಲುಗಳಿಗೆ ಗಂಭೀರ ಗಾಯಗೊಂಡಿದ್ದಾರೆ.
ಕೂಡಲೇ ನ್ಯಾಮತಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ, ವೈದ್ಯರ ಸೂಚನೆ ಮೇರೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮುಂಜಾಗ್ರತೆ ಕ್ರಮ ತೆಗೆದುಕೊಳ್ಳದಿರುವುದೇ ಈ ಅವಘಡಕ್ಕೆ ಕಾರಣವಾಗಿದೆ ಎಂದು ಮೃತನ ತಂದೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಮನೆ ಮಾಲಿಕ ಹಾಗೂ ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮ ಕೈಗೊಂಡು, ನಾಯ ನೀಡುವಂತೆ ಪ್ರಕರಣ ದಾಖಲಿಸಿದ್ದಾರೆ.