ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
ಯಲಹಂಕ-ಹಿಂದುಪುರ ರಾಜ್ಯ ಹೆದ್ದಾರಿ ಸಂಚಾರ ದುಸ್ತರವಾಗಿದೆ. ಒಂದೆಡೆ ರಸ್ತೆಯ ಸಂಪೂರ್ಣ ಕಾಮಗಾರಿ ಮುಗಿಯದೆ ಟೋಲ್ ಸಂಗ್ರಹ, ಮತ್ತೊಂದೆಡೆ ಮಾರ್ಗಮಧ್ಯೆ ಅವೈಜ್ಞಾನಿಕ ವೃತ್ತಗಳು. ಇವೆಲ್ಲದರ ಮಧ್ಯೆ ಸದಾ ಜನ ಜಂಗುಳಿಯಿಂದ ತುಂಬಿರುವ ಮಾರ್ಗಗಳಲ್ಲಿ ವಿದ್ಯುತ್ ಕಂಬಗಳು ಗೊಂಬೆಗಳಂತೆ ನಿಂತಿರುವುದು ಅಪಘಾತಕ್ಕೆ ಕಾರಣವಾಗಿದೆ.
ನಗರದ ಪ್ರವಾಸಿ ಮಂದಿರ ವೃತ್ತದಿಂದ ಡಿ.ಕ್ರಾಸ್ ರಸ್ತೆ ಹಾಗೂ ಪಿಎಸ್‌ಐ ಜಗದೀಶ್ ವೃತ್ತದಿಂದ ರೈಲ್ವೆ ನಿಲ್ದಾಣದ ವೃತ್ತದವರೆಗೆ ವಿದ್ಯುತ್ ಕಂಬಗಳು ಗೊಂಬೆಗಳಂತೆ ನಿಂತಿವೆ. ಹೀಗಾಗಿ ಕತ್ತಲು ಆವರಿಸಿ ಪ್ರತಿನಿತ್ಯ ರಾತ್ರಿ ವೇಳೆ ವಾಹನ ಸವಾರರು ಪರದಾಡುತ್ತಿದ್ದಾರೆ. ರಸ್ತೆಯಲ್ಲಿ ಸಂಚರಿಸುವ ಬೈಕ್ ಸವಾರರು ಉಸಿರು ಬಿಗಿಹಿಡಿದು ಓಡಾಡಬೇಕಾಗಿದೆ. ಇದೇ ರಸ್ತೆಯ ಪಕ್ಕದಲ್ಲಿರುವ ನಗರ ಠಾಣೆ ಹಾಗೂ ಡಿವೈಎಸ್ಪಿ ಕಚೇರಿಗೆ ರಾತ್ರಿ ವೇಳೆ ಬರುವ ಸಾರ್ವಜನಿಕರು ರಸ್ತೆ ದಾಟಲು ಪರದಾಡುವಂತಾಗಿದೆ.
ಅಪಘಾತ ಪ್ರಕರಣ ಹೆಚ್ಚು: ಹಿಂದೂಪುರ, ಚಿಕ್ಕಬಳ್ಳಾಪುರ, ದೇವನಹಳ್ಳಿ, ತುಮಕೂರು, ದಾಬಸ್‌ಪೇಟೆ, ಬೆಂಗಳೂರು ಸಂಪರ್ಕಿಸುವ ಹೆದ್ದಾರಿಯಾಗಿರುವುದರಿಂದ ಈ ರಸ್ತೆ ಸದಾ ವಾಹನಗಳಿಂದ ತುಂಬಿರುತ್ತದೆ. ಹೀಗಾಗಿ ರಾತ್ರಿ ವೇಳೆ ವಿದ್ಯುತ್ ದೀಪಗಳು ಬೆಳಗದ ಕಾರಣ ಆಗಾಗ್ಗೆ ಅಪಘಾತ ಪ್ರಕರಣ ದಾಖಲಾಗುತ್ತಿವೆ. ಇಷ್ಟಾದರೂ ಸಂಬಂಧಪಟ್ಟ ಅಧಿಕಾರಿಗಳು ವಿದ್ಯುತ್ ಪೂರೈಕೆಸಲು ಮುಂದಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಅವೈಜ್ಞಾನಿಕ ವೃತ್ತಗಳು: ಇವೆಲ್ಲದರ ಮಧ್ಯೆ ಪ್ರವಾಸಿ ಮಂದಿರ ವೃತ್ತ ಹಾಗೂ ಪಿಎಸ್‌ಐ ಜಗದೀಶ್ ವೃತ್ತ ಹಾಗೂ ರೈಲ್ವೆ ನಿಲ್ದಾಣ ವೃತ್ತಗಳು ಸಂಪೂರ್ಣ ಅವೈಜ್ಞಾನಿಕವಾಗಿವೆೆ. ಮುನ್ನೆಚ್ಚರಿಕಾ ಫಲಕಗಳಿಲ್ಲ. ಸರ್ಕಲ್‌ಗಳ ಮಧ್ಯೆ ಪಿಲ್ಲರ್‌ಗಳಿಲ್ಲ. ಮುಖ್ಯವಾಗಿ ಈ ಮೂರು ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ಅವಶ್ಯಕತೆಯಿದೆ. ಹೆಸರಿಗಷ್ಟೇ ರಸ್ತೆ ಚತುಷ್ಪಥವಾಗಿದೆ. ಹಗಲು-ರಾತ್ರಿ ಎನ್ನದೆ ಬೃಹತ್ ಲಾರಿಗಳು ರಸ್ತೆಯ ಇಕ್ಕೆಲಗಳಲ್ಲಿ ನಿಲ್ಲುತ್ತಿವೆ. ಇದರಿಂದಲೂ ಅಪಘಾತ ಪ್ರಕರಣಗಳು ದಾಖಲಾಗುತ್ತಿವೆ.
ದೊಡ್ಡಬಳ್ಳಾಪುರದ ಪ್ರಮುಖ ರಸ್ತೆಗಳ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ಪೂರೈಕೆ ಆಗಿಲ್ಲ ಎಂಬುದು ಗಮನಕ್ಕೆ ಬಂದಿದೆ. ಈ ಬಗ್ಗೆ ಬೆಸ್ಕಾಂಗೆ ನೀಡಬೇಕಾದ ದಾಖಲೆಗಳು, ಡೆಪಾಸಿಟ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಮುಗಿಸಲಾಗಿದೆ. ಕಾಮಗಾರಿ ನಡೆಯುತ್ತಿದೆ. ಶೀಘ್ರವಾಗಿ ವಿದ್ಯುತ್ ಕಂಬಗಳಲ್ಲಿ ದೀಪ ಬೆಳಗಲಿವೆ. ಬಿ.ಕೆ.ಸಿಂಗ್, ಕೆಆರ್ ಡಿಸಿಎಲ್ ಅಧಿಕಾರಿ ಈ ರಸ್ತೆಯ ವಿದ್ಯುತ್ ಕಂಬಗಳ ಅಳವಡಿಕೆ ಕೆಲಸವನ್ನು ಗುತ್ತಿಗೆದಾರರು ವಹಿಸಿಕೊಂಡಿದ್ದಾರೆ. ಈಗಾಗಲೇ ವಿದ್ಯುತ್ ಕಂಬ, ದೀಪಗಳನ್ನು ಅಳವಡಿಸಲಾಗಿದೆ. ಕೊನೆಯ ಹಂತದ ಕೆಲಸ ನಡೆಯುತ್ತಿದೆ. ಮುಂದಿನ ವಾರ ಅಥವಾ ಹದಿನೈದು ದಿನಗಳಲ್ಲಿ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲಾಗುವುದು. ಎನ್. ರೋಹಿತ್, ಎಇಇ ಬೆಸ್ಕಾಂ, ದೊಡ್ಡಬಳ್ಳಾಪುರ