ಮೈಸೂರು: ನಗರದ ರೋಟರಿ ಐವರಿ ಸಿಟಿ ಮೈಸೂರು ನೂತನ ಪದಾಧಿಕಾರಿಗಳ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಗರದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ರೋಟರಿ ಮಾಜಿ ಜಿಲ್ಲಾ ಪ್ರಾಂತಪಾಲ, ಉದ್ಯಮಿ ಅಭಿನಂದನ್ ಎ.ಶೆಟ್ಟಿ ಮಾತನಾಡಿ, ಜನರ ಕಷ್ಟಗಳಿಗೆ ಸ್ಪಂದಿಸುವುದೇ ರೋಟರಿ ಸಂಸ್ಥೆಯ ಬಹಳ ಮುಖ್ಯವಾದ ಉದ್ದೇಶ. ಸೇವಾ ಮನೋಭಾವವನ್ನು ಹೊಂದಿರುವ ಸಾರ್ವಜನಿಕ ಸೇವಾ ಸಂಸ್ಥೆ ರೋಟರಿ ಎಂದು ಬಣ್ಣಿಸಿದರು.
ಜನರಿಗೆ ಸಹಾಯ, ಸಹಕಾರ ನೀಡುವುದರ ಮೂಲಕ ಸಮುದಾಯಕ್ಕೆ ನಮ್ಮ ಕೈಲಾದ ಸಹಾಯಹಸ್ತವನ್ನು ನೀಡುವುದು ಬಹಳ ಮುಖ್ಯವಾದ ಗುರಿ. ಸಮಾಜದಲ್ಲಿ ನೊಂದ ಕುಟುಂಬಗಳನ್ನು ಗುರುತಿಸಿ, ಅವರಿಗೆ ಆರ್ಥಿಕ ನೆರವು, ಆರೋಗ್ಯ, ಶಿಕ್ಷಣ, ಸ್ವ-ಉದ್ಯೋಗ ಕಲ್ಪಿಸುವುದರಲ್ಲಿ ತೊಡಗಿಸಿಕೊಳ್ಳುವುದು, ಆ ಮೂಲಕ ವ್ಯಕ್ತಿ ಬದುಕಿನಲ್ಲಿ ಸಹಕಾರ ನೀಡಿ, ಜೀವನದಲ್ಲಿ ಮುಂದೆ ಬರುವಂತೆ ಪ್ರೇರೇಪಿಸಿದಾಗ ನಾವೂ ಕೂಡ ಬದುಕಿನ ಸಾರ್ಥಕತೆಯೊಂದಿಗೆ ತೃಪ್ತಿ ಕಾಣಬಹುದು ಎಂದು ಅಭಿಪ್ರಾಯಿಸಿದರು.
ಸರ್ಕಾರವನ್ನು ಅವಲಂಬಿಸದೇ ಸಾರ್ವಜನಿಕವಾಗಿ ಸಂಘ-ಸಂಸ್ಥೆಗಳು ಕೂಡ ಕೈ ಜೋಡಿಸಿ, ಸಮಾಜ ಸೇವಾ ಕಾರ್ಯಗಳಲ್ಲಿ ಗುರುತಿಸಿಕೊಂಡಾಗ ಇನ್ನೂ ಅತ್ಯುತ್ತಮ ಸಮಾಜವನ್ನು ನಿರ್ಮಿಸಬಹುದು. ಹಸಿವುಮುಕ್ತ ಜೀವನ, ರೋಗಮುಕ್ತ ಸಮಾಜ, ಆರೋಗ್ಯ ವೃದ್ಧಿ, ಕುಟುಂಬ ನಿರ್ವಹಣೆ, ಪರಿಸರದ ಮಲಿನತೆಯನ್ನು ಶುದ್ಧಗೊಳಿಸುವುದು, ಶುದ್ಧ ಕುಡಿಯುವ ನೀರನ್ನು ಒದಗಿಸಿ, ಎಲ್ಲರಲ್ಲೂ ಆರೋಗ್ಯವನ್ನು ಕಾಪಾಡುವುದೇ ನಮ್ಮೆಲ್ಲರ ಗುರಿಯಾಗಬೇಕು ಹಾಗೂ ಈ ಸೇವಾ ಕಾರ್ಯಗಳಿಗೆ ಸಮಾಜದಲ್ಲಿ ಹಣ ಉಳ್ಳವರು ಸೇವಾ ಕಾರ್ಯಗಳಲ್ಲಿ ಭಾಗಿಯಾಗಬೇಕು ಎಂದು ಕೋರಿದರು.
ರೋಟರಿ ಐವರಿ ಸಿಟಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಕೆ.ಶಶಿಧರ್ ಮಾತನಾಡಿ, ಈ ವರ್ಷವೂ ಹತ್ತು ಹಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮ್ಯಾಜಿಕ್ ಆಫ್ ರೋಟರಿ ಗುರಿ ತಲುಪುವಲ್ಲಿ ಕಾರ್ಯೋನ್ಮುಖರಾಗುತ್ತೇವೆ. ಸಮುದಾಯಗಳ ಬಗ್ಗೆ ಜಾಗೃತಿ, ಅರಿವು, ಕಾಳಜಿಯಿಂದ ಕರ್ತವ್ಯ ನಿರ್ವಹಿಸುತ್ತೇವೆಂದು ತಿಳಿಸಿದರು.
ಸಂಸ್ಥೆಯ ಮಾಜಿ ಅಧ್ಯಕ್ಷ ಸಂಜಯ್ ಅರಸ್, ಕಾರ್ಯದರ್ಶಿ ಶೋಭಾನಾಗರಾಜ್, ಡಾ.ಪ್ರಹ್ಲಾದ್, ಖಜಾಂಜಿ ಎಸ್.ಬಾಲಚಂದರ್, ಸಹಾಯಕ ಕಾರ್ಯದರ್ಶಿ ಇಫ್ತಿಕರ್ ಅಹಮದ್, ಉಪಾಧ್ಯಕ್ಷ ಎಂ.ಕೆ.ಮುಕೇಶ್, ಸುನಿಲ್ ಬಾಳಿಗಾ, ಡಾ.ಎಂ.ಕೆ.ಸಚ್ಚಿದಾನಂದನ್, ಮಂಜುಳಾ ಬಾಲಚಂದರ್, ಬಿ.ಜಿ.ನಾಗರಾಜು, ಶಬನಾ ಇಫ್ತಿಕರ್, ಮಂಜುಳಾ ಬಾಲಚಂದರ್, ಕೇಶವ್ ಬಿ.ಕಾಂಚನ್, ಬಾಬು ಅತ್ತರ್, ಜ್ಯೋತಿ ಮುಖೇಶ್, ಪೂಜಾ ಬಾಳಿಗಾ, ಲತಾ ಸಚ್ಚಿ ಇತರರು ಇದ್ದರು.
ನಿರ್ವಾಣ ಯೋಗ ಕೇಂದ್ರದ ಗುರೂಜಿ ಶಶಿಕುಮಾರ್ ಹಾಗೂ ಸ್ವಾಮಿ ವಿವೇಕಾನಂದ ಯುವ ಕೇಂದ್ರದ ಕಾರ್ಯಕ್ರಮ ವ್ಯವಸ್ಥಾಪಕಿ ನಂದಿನಿ ಶಂಕರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.