ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಗೆ ಭೇಟಿ ನೀಡಿದ ಭಕ್ತರು ಸರತಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು. 
ಜಿಲ್ಲೆ

ಮಾದಪ್ಪನಿಗೆ ತಟ್ಟದ ಖಗ್ರಾಸ ಚಂದ್ರಗ್ರಹಣದ ಬಿಸಿ

ಶಿವಶಂಕರ್ ಎಂ. ಹೆಬ್ಬಳ್ಳ

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಭಾನುವಾರ ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಭಕ್ತರಿಗೆ ಎಂದಿನಂತೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.

ಚಂದ್ರಗ್ರಹಣ ಹಿನ್ನಲೆಯಲ್ಲಿ ಭಾನುವಾರ ರಾಜ್ಯದ ಕೆಲವು ಪ್ರಮುಖ ದೇಗುಲಗಳ ಬಾಗಿಲುಗಳು ಬಂದ್ ಆಗಿದ್ದವು. ಇದರಿಂದ ದೇವರ ದರ್ಶನಕ್ಕೆ ಅವಕಾಶ ಇರಲಿಲ್ಲ. ಆದರೆ ರಾಜ್ಯದ ಪ್ರಸಿದ್ಧ ಧಾರ್ಮಿಕ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಮ.ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಮಾದಪ್ಪನಿಗೆ ಎಂದಿನಂತೆ ತ್ರಿಕಾಲ ಪೂಜೆ ನಡೆಯಿತು. ರಜೆ ದಿನವಾದ್ದರಿಂದ ಶ್ರೀಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಸರತಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ವಿವಿಧ ಹರಕೆ ಸೇವೆಗಳಲ್ಲಿ ಭಾಗಿಯಾಗಿದ್ದರು. ದೇಗುಲದ ಮುಂಭಾಗದ ಗಂಧದಕಡ್ಡಿ, ಕರ್ಪೂರ ಹಚ್ಚಿ ಮಾದಪ್ಪನನ್ನು ನೆನೆದು ಕೈ ಮುಗಿದು ಪ್ರಾರ್ಥಿಸಿದರು.

ಇನ್ನು ಎಂದಿನಂತೆ ಬೆಳಗ್ಗೆಯಿಂದ ಸಂಜೆಯತನಕ ದೇಗುಲದ ಸುತ್ತ ಹುಲಿ, ಬಸವ ಹಾಗೂ ರುದ್ರಾಕ್ಷಿ ವಾಹನಗಳ ಉತ್ಸವಗಳು ಜರುಗಿದವು. ಬೆಳಗ್ಗೆ ಬೆಳ್ಳಿ ತೇರಿನ ಉತ್ಸವ ನಡೆಯಿತು. ಸಂಜೆ 7ರಲ್ಲಿ ಚಿನ್ನದ ತೇರಿನ ಉತ್ಸವ ಜರುಗಿತು. ಹರಕೆ ಹೊತ್ತ ಭಕ್ತರು ದಂಡಿನ ಹೊತ್ತು ಸಾಗಿದರು. ಉಘೇ ಮಾದಪ್ಪ ಉಘೇ, ಜೈ ಮಹಂತಾ ಮಲೆಯ ಘೋಷಣೆಗಳನ್ನು ಮೊಳಗಿಸಿದರು. ರಾತ್ರಿ 8ರ ವೇಳೆಯಲ್ಲಿ ಮಾದಪ್ಪನಿಗೆ ಅಭಿಷೇಕದ ಪೂಜೆಯನ್ನು ನೆರವೇರಿಸುವುದರ ಮೂಲಕ ಮಹಾ ಮಂಗಳಾರತಿ ಬೆಳಗಿಸಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಎಂದಿನಂತೆ 9.30ರ ಬಳಿಕ ದೇಗುಲದ ಬಾಗಿಲನ್ನು ಮುಚ್ಚಲಾಯಿತು. ಹಾಗಾಗಿ ಮಾದಪ್ಪನ ಸನ್ನಿಧಿಗೆ ಖಗ್ರಾಸ ಚಂದ್ರಗ್ರಹಣದ ಬಿಸಿ ತಟ್ಟಲಿಲ್ಲ.