ತುಮಕೂರು: ಹೈಕಮಾಂಡ್ ನಿರ್ಧಾರ ಪ್ರಶ್ನಿಸಿ ಮಂತ್ರಿ ಸ್ಥಾನದಿಂದ ವಜಾಗೊಂಡಿರುವ ಕೆ.ಎನ್.ರಾಜಣ್ಣ ಅವರ ಪರವಾಗಿ ಅವರ ಅಭಿಮಾನಿಗಳು ಆರಂಭಿಸಿದ್ದ ಹೋರಾಟ ಮುಂದುವರಿದಿದೆ. ಕೆ.ಎನ್.ರಾಜಣ್ಣ ಅವರನ್ನು ಮತ್ತೆ ಕ್ಯಾಬಿನೆಟ್ಗೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಅಹಿಂದ ಹೆಸರಿನಲ್ಲಿ ಸಂಟಿತರಾಗಿರುವ ಅಭಿಮಾನುಗಳು ಒತ್ತಾಯಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಕೆಎನ್ಆರ್ ಹಾಗೂ ಆರ್ಆರ್ ಅಭಿಮಾನಿ ಬಳಗ ನೇತೃತ್ವದಲ್ಲಿ ಧರಣಿ ನಡೆಸಿದ ನೂರಾರು ಅಭಿಮಾನಿಗಳು ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿರುವುದನ್ನು ಖಂಡಿಸಿ, ಅವರನ್ನು ಮತ್ತೆ ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪುರುಷೋತ್ತಮ ಮಾತನಾಡಿ, ದೇವರಾಜ ಅರಸು ತತ್ವಾದರ್ಶಗಳನ್ನು ರಾಜಕೀಯ ಬದುಕಿನಲ್ಲಿ ಅಳವಡಿಸಿಕೊಂಡು ಅವರಂತೆಯೇ ಹಿಂದುಳಿದ ವರ್ಗ, ಶೋಷಿತರಧ್ವನಿಯಾಗಿ ನೆರವಿಗೆ ನಿಂತಿವರು. ಕೆ.ಎನ್.ರಾಜಣ್ಣ ಅವರ ವಿರುದ್ಧ ತರಾತುರಿಯಲ್ಲಿ ತೆಗೆದುಕೊಂಡಿರುವ ನಿರ್ಧಾರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ ಎಂದರು.
ಇತಿಹಾಸದಲ್ಲಿ ಪ್ರಭಾವಿ ನಾಯಕರ ವಿರುದ್ಧ ಕ್ರಮ ತೆಗೆದುಕೊಂಡಾಗಲೆಲ್ಲಾ ಕಾಂಗ್ರೆಸ್ ಹೀನಾಯ ಸ್ಥಿತಿ ಅನುಭವಿಸಿದೆ. ಪಕ್ಷದ ಸಂಘಟನಾ ಕೊರತೆ ಹಾಗೂ ನಿಷ್ಠಾವಂತರ ಕಡಗಣನೆ ಕಾಂಗ್ರೆಸ್ಗೆ ಮುಳುವಾಗಲಿದೆ. ಮುಖ್ಯಮಂತ್ರಿಯಾಗಿ ಜನಪರ ಕಾರ್ಯಕ್ರಮ ಜಾರಿಗೆ ತಂದು ಜನರ ಮೆಚ್ಚುಗೆಗೆ ಪಾತ್ರರಾದ ದೇವರಾಜ ಅರಸು ಅವರನ್ನೇ ಕಾಂಗ್ರೆಸ್ ಕಡೆಗಣಿಸಿತ್ತು. ಅರಸು ಅವರ ದಾರಿಯಲ್ಲಿ ಸಾಗಿರುವ ನಾಯಕರನ್ನೂ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಜಿಪಂ ಮಾಜಿ ಅಧ್ಯಕ್ಷ ಜಿ.ಜೆ.ರಾಜಣ್ಣ ಮಾತನಾಡಿ, ರಾಜಣ್ಣ ಕಾಂಗ್ರೆಸ್ನ ಸಂಘಟನೆಯ ಶಕ್ತಿಯಾಗಿದ್ದಾರೆ. ಜಿಲ್ಲೆಯ ಅನೇಕ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ಕಾರಣರಾಗಿದ್ದಾರೆ. ಇಂತಹ ನಾಯಕನನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಅಪಮಾನ ಮಾಡಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಕೂಡಲೇಅವರಿಗೆ ಮತ್ತೆ ಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಜಿ.ಎನ್.ಮೂರ್ತಿ, ನಾಗೇಶ್ಬಾಬು, ಲಕ್ಷಿ$್ಮನಾರಾಯಣ, ನಗರಸಭೆ ಮಾಜಿ ಅಧ್ಯಕ್ಷ ಟಿ.ಪಿ.ಮಂಜುನಾಥ್, ಮುಖಂಡರಾದ ನಾರಾಯಣಗೌಡ, ಧನಿಯಾಕುಮಾರ್, ಮಲ್ಲಸಂದ್ರ ಶಿವಣ್ಣ, ಕಿಡಿಗಣ್ಣಪ್ಪ, ಮುರಳಿಕೃಷ್ಣಪ್ಪ, ಎಂ.ಎಚ್.ನಾಗರಾಜು, ಕೆ.ವಿ.ಕೃಷ್ಣಮೂರ್ತಿ, ಎಂ.ಎನ್.ಕೆ.ರಾಜು, ಟಿ.ಆರ್.ಸುರೇಶ್ ಮತ್ತಿತರರು ಇದ್ದರು.