ಆನೇಕಲ್​ ಪಟ್ಟಣದ ಬನ್ನೇರುಟ್ಟ ರಸ್ತೆ ತಿರುವಿನಲ್ಲಿ ಕೆಟ್ಟು ನಿಂತಲಾರಿ. 
ಜಿಲ್ಲೆ

ರಸ್ತೆ ಮಧ್ಯೆ ಎರಡು ದಿನ ಕೆಟ್ಟು ನಿಂತ ಲಾರಿ

ಆನೇಕಲ್​ : ಪಟ್ಟಣದಾದ್ಯಂತ ರಸ್ತೆಗಳು ಸಂಪೂರ್ಣ ಗುಂಡಿಮಯವಾಗಿದ್ದು, ಬುಧವಾರ ರಾತ್ರಿ ಸುರಿದ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ರಸ್ತೆಯಲ್ಲಾಗಿರುವ ಗುಂಡಿಗಳಿಂದಾಗಿ ಆನೇಕಲ್​ ಪಟ್ಟಣದಿಂದ ಬನ್ನೇರುಟ್ಟ ರಸ್ತೆ ತಿರುವಿನಲ್ಲಿ ಲಾರಿ ಕೆಟ್ಟು ನಿಂತು ವಾಹನ ಸಂಚಾರಕ್ಕೆ ಸಾಕಷ್ಟು ಅಡಚಣೆ ಉಂಟಾಯಿತು. ಹೊಸೂರು ಮಾರ್ಗವಾಗಿ ಆನೇಕಲ್​ನಿಂದ ಬನ್ನೇರುಟ್ಟ ಭಾಗಕ್ಕೆ ಹೋಗಬೇಕಾಗಿದ್ದ ಲಾರಿ ವೆಂಕಟೇಶ್ವರ ಚಿತ್ರಮಂದಿರ ತಿರುವಿನ ಬಳಿ ಗುಂಡಿಯಲ್ಲಿ ಸಿಲುಕಿ ನಿಂತಿದ್ದು, ಗುರುವಾರ ಸಂಜೆಯವರೆಗೂ ದುರಸ್ತಿ ಆಗದೆ ಸಂಚಾರ ದಟ್ಟಣೆಯಿಂದಾಗಿ ವಾಹನ ಸವಾರರು ಪರದಾಡಿದರು. ಕೊನೆಗೆ ರಾತ್ರಿ ಲಾರಿ ಮೇಲೆತ್ತಿ ಸುಗಮ ಸಂಚಾರಕ್ಕೆ ಅನುವು ಮಾಡಲಾಯಿತು. ಬನ್ನೇರುಟ್ಟ ರಸ್ತೆ ತಿರುವು ಬಳಿ ರಸ್ತೆ ಕಿರಿದಾಗಿದ್ದು, ಹಲವು ದಿನಗಳಿಂದ ಗುಂಡಿ ಬಿದ್ದಿದೆ. ವಾಹನ ಸಮಾರರು ಹಾಗೂ ಪ್ರತಿದಿನ ಆಟೋ, ದ್ವಿಚಕ್ರ ವಾಹನದಲ್ಲಿ ಶಾಲೆಗೆ ಹೋಗುವ ಮಕ್ಕಳು ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ.