ಜಿಲ್ಲೆ

ಹಳಿ ಮೇಲಿದ್ದಾತನನ್ನು ಕಂಡು ರೈಲು ನಿಲ್ಲಿಸಿದ ಲೋಕೊ ಪೈಲೆಟ್... ಮುಂದೇನಾಯಿತು?

ಈಶ್ವರಮಂಗಲ: ನರಿಮೊಗರು ಮತ್ತು ಎಡಮಂಗಲ ನಡುವೆ ರೈಲು ಹಳಿ ಮೇಲಿದ್ದ ಅಪರಿಚಿತನನ್ನು ಗಮನಿಸಿದ ಲೋಕೊ ಪೈಲಟ್ ರೈಲಿನ ವೇಗ ತಗ್ಗಿಸಿ ಆತನ ಪ್ರಾಣ ಉಳಿಸಿ ಸಮಯಪ್ರಜ್ಞೆ ಮೆರೆದಿದ್ದಾರೆ. ಗಾಯಗೊಂಡಿದ್ದ ಆತನನ್ನು ಅದೇ ರೈಲಿನಲ್ಲಿ ಪುತ್ತೂರು ನಿಲ್ದಾಣಕ್ಕೆ ಕರೆತಂದು ಬಳಿಕ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಿನಿಂದ ಕಾರವಾರಕ್ಕೆ ಸೋಮವಾರ ತೆರಳುತ್ತಿದ್ದ ಪ್ರಯಾಣಿಕ ರೈಲು ನರಿಮೊಗರು ಮತ್ತು ಎಡಮಂಗಲ ಮಧ್ಯೆ ಬರುತ್ತಿದ್ದಂತೆ 45ರ ಹರೆಯದ ಅಪರಿಚಿತನೋರ್ವ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದುದು ಲೋಕೊ ಪೈಲೆಟ್ ಗಮನಕ್ಕೆ ಬಂದಿತ್ತು. ಕೂಡಲೇ ಅವರು ರೈಲು ನಿಲ್ಲಿಸುವ ಕೆಲಸ ಮಾಡಿದ್ದು, ನಿಧಾನಗತಿಗೆ ಬಂದಿದ್ದ ರೈಲು ಆತನಿಗೆ ಡಿಕ್ಕಿಯಾಗಿತ್ತು. ಗಾಯಗೊಂಡಿದ್ದ ಆತನನ್ನು ರೈಲ್ವೆ ಟಿಕೆಟ್ ಇನ್‌ಸ್ಪೆಕ್ಟರ್ ವಿಠಲ್ ನಾಯಕ್ ಮತ್ತು ಸಿಬ್ಬಂದಿ ಅದೇ ರೈಲಿನಲ್ಲಿ ಪುತ್ತೂರು ನಿಲ್ದಾಣಕ್ಕೆ ಕರೆದುಕೊಂಡು ಬಂದು ಬಳಿಕ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಗಾಯಗೊಂಡಿರುವ ವ್ಯಕ್ತಿ ಮಾನಸಿಕ ಸ್ಥಿಮಿತ ಕಳಕೊಂಡವರೆನ್ನಲಾಗಿದ್ದು, ಆಸ್ಪತ್ರೆಯಲ್ಲಿ ಯಾವುದೇ ಹೆಸರು-ವಿಳಾಸ ನೀಡಿಲ್ಲ. ಚಿಕಿತ್ಸೆ ಬಳಿಕ ಆತ ಮಂಗಳವಾರ ಆಸ್ಪತ್ರೆಯಿಂದ ತೆರಳಿದ್ದಾನೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.