ಸಕಲೇಶಪುರ: ಮಹಿಳೆಯರು, ವೃದ್ಧರು, ಮಕ್ಕಳಿಗೆ ಮನೆಯಂಗಳದಲ್ಲೇ ಅಗತ್ಯ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಆರಂಭವಾದ ನಮ್ಮ ಕ್ಲಿನಿಕ್ ಸದ್ಯ ಬಾಗಿಲು ಮುಚ್ಚುವ ಹಂತ ತಲುಪಿವೆ.
ಹೌದು, ದೆಹಲಿಯ ಮೊಹಲ್ಲಾ ಕ್ಲಿನಿಕ್ ಯಶಸ್ಸು ಗಮನಿಸಿದ್ದ ಬಸವರಾಜ್ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ರಾಜ್ಯಾದ್ಯಂತ ಗ್ರಾಮೀಣ ಭಾಗದಲ್ಲಿ 50 ಸಾವಿರ ಜನಸಂಖ್ಯೆಗೊಂದರಂತೆ ನಮ್ಮ ಕ್ಲಿನಿಕ್ ಆರಂಭಿಸಿದ್ದು, ಕ್ಲಿನಿಕ್ ಮುಖ್ಯವಾಗಿ 9 ಕಾರ್ಯಕ್ರಮದಡಿ ಸೇವೆ ನೀಡಬೇಕಿದೆ. ಅದರಂತೆ ಪಟ್ಟಣದಲ್ಲಿ ಸ್ಥಾಪನೆಗೊಂಡಿರುವ ಕ್ಲಿನಿಕ್‌ಗೆ 50 ಸಾವಿರ ಜನಸಂಖ್ಯೆ ಇಲ್ಲದಿದ್ದರೂ ಮಲೆನಾಡು ಎಂಬ ಕಾರಣಕ್ಕೆ ಪಟ್ಟಣದ ಬೇಲೂರು ರಸ್ತೆಯ ಖಾಸಗಿ ಕಟ್ಟಡದಲ್ಲಿ ನಮ್ಮ ಕ್ಲಿನಿಕ್ ಎರಡು ವರ್ಷದ ಹಿಂದೆ ಉದ್ಘಾಟನೆಗೊಂಡಿದೆ. ಆದರೆ ಆರಂಭದಿಂದ ಇದುವರೆಗೆ ನಮ್ಮ ಕ್ಲಿನಿಕ್‌ನಲ್ಲಿ ಸಮರ್ಪಕವಾಗಿ ಚಿಕಿತ್ಸೆ ನೀಡಿದ ದಿನಗಳೇ ಇಲ್ಲದಾಗಿದ್ದು, ಕಳೆದ ಆರು ತಿಂಗಳಿನಿಂದ ಯಾವುದೇ ಸೇವೆ ದೊರೆಯದ ಕಾರಣ ಮುಚ್ಚುವ ಹಂತ ತಲುಪಿದೆ.
ನಮ್ಮ ಕ್ಲಿನಿಕ್‌ನ ಕಟ್ಟಡದಲ್ಲಿ ನಾಮಫಲಕ ಹೊರತುಪಡಿಸಿ ಏನೇನೂ ಸೌಲಭ್ಯವಿಲ್ಲದೆ ಇಲ್ಲಿಗೆ ಬರುವ ರೋಗಿಗಳು ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ. ಕ್ಲಿನಿಕ್‌ನಲ್ಲಿ ಒಬ್ಬ ವೈದ್ಯ, ಒಬ್ಬ ಶುಶ್ರೂಷಕಿ, ಒಬ್ಬ ಲ್ಯಾಬ್‌ಟೆಕ್ನೀಷಿಯನ್ ಹಾಗೂ ಒಬ್ಬ ಡಿ ಗ್ರೂಪ್ ನೌಕರ ಇರಬೇಕಿದೆ. ಈ ಕ್ಲಿನಿಕ್‌ನಲ್ಲಿ 9 ಸೇವೆಗಳನ್ನು ಮುಖ್ಯವಾಗಿ ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸಬೇಕಿದ್ದು, ಇದರಲ್ಲಿ ಪ್ರಮುಖವಾಗಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಅಗತ್ಯ ಚಿಕಿತ್ಸೆ, ಮಕ್ಕಳ ಚಿಕಿತ್ಸೆ, ಮಧುಮೇಹ, ಕಣ್ಣಿನ ಚಿಕಿತ್ಸೆ ದೊರೆಯಬೇಕಿದೆ. ಆದರೆ, ಪಟ್ಟಣದ ನಮ್ಮ ಕ್ಲಿನಿಕ್‌ನಲ್ಲಿ ಕಳೆದ ಒಂದು ವರ್ಷದಿಂದ ವೈದ್ಯ, ನರ್ಸ್, ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ ಯಾವುದೇ ಸಿಬ್ಬಂದಿ ಇಲ್ಲ. ಇರುವ ಡಿ ಗ್ರೂಪ್‌ನೌಕರ ನಿತ್ಯ ಕ್ಲಿನಿಕ್ ಬಾಗಿಲು ತೆರೆಯುವುದು, ಮುಚ್ಚುವ ಕೆಲಸ ಮಾಡುತ್ತಿದ್ದಾರೆ.
ವಿದ್ಯುತ್ ಕಟ್: ಕ್ಲಿನಿಕ್ ಆರಂಭವಾದ ಇಂದಿನವರೆಗೆ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲದ ಕಾರಣ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದ್ದು, ವಿದ್ಯುತ್ ಇಲ್ಲದ ಕಾರಣ ಕ್ಲಿನಿಕ್ ಕತ್ತಲ ಕೂಪದಲ್ಲಿ ಮುಳುಗಿದೆ.
ಎಲ್ಲೆಲ್ಲಿಯೂ ಇದೇ ಸ್ಥಿತಿ: ಜಿಲ್ಲೆಯಲ್ಲಿ ಒಟ್ಟು ಆರು ನಮ್ಮ ಕ್ಲಿನಿಕ್‌ಗಳಿದ್ದು ಚನ್ನರಾಯಪಟ್ಟಣ ತಾಲೂಕಿನಲ್ಲಿ ಎರಡು, ಸಕಲೇಶಪುರ, ಬೇಲೂರು, ಅರಸೀಕೆರೆ, ಅರಕಲಗೂಡು ತಾಲೂಕಿನಲ್ಲಿ ತಲಾ ಒಂದೊಂದು ನಮ್ಮ ಕ್ಲಿನಿಕ್‌ಗಳಿವೆ. ಈ ಎಲ್ಲ ಆರು ಕ್ಲಿನಿಕ್‌ಗಳಲ್ಲೂ ವೈದ್ಯರು ಅಗತ್ಯ ಸಿಬ್ಬಂದಿಯಿಲ್ಲದೆ ಕ್ಲಿನಿಕ್‌ಗಳ ಸ್ಥಿತಿ ಆಯೋಮಯವಾಗಿದೆ.
ನಮ್ಮ ಕ್ಲಿನಿಕ್‌ಗೆ ವೈದ್ಯರ ನೇಮಕ ಪ್ರಕ್ರಿಯೆ ನಡೆದಿದೆಯಾದರೂ ಯಾವುದೇ ವೈದ್ಯರು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಲು ಮುಂದೆ ಬಾರದ ಕಾರಣ ವೈದ್ಯ ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದು ವರ್ಷ ಗ್ರಾಮೀಣ ಸೇವೆ ಸಲ್ಲಿಸಬೇಕು ಎಂಬ ನಿಯಮವನ್ನು ಎತ್ತಿಹಿಡಿದ ಸರ್ಕಾರ ನಮ್ಮ ಕ್ಲಿನಿಕ್‌ನಲ್ಲಿ ಕೆಲಸ ಮಾಡಲು ಶಿಫಾರಸು ಮಾಡಿದೆ. ಆದರೆ, ನಮ್ಮ ಕ್ಲಿನಿಕ್‌ನಲ್ಲಿ ಸೇವೆ ಸಲ್ಲಿಸಿದರೆ ಕಡಿಮೆ ಸಂಬಳ ದೊರೆಯುತ್ತದೆ ಎಂಬ ಕಾರಣ ನೀಡುತ್ತಿರುವ ವೈದ್ಯ ವಿದ್ಯಾರ್ಥಿಗಳು ಗ್ರಾಮೀಣ ಸೇವೆಯಿಂದ ವಿವಿಧ ಕಾರಣ ನೀಡಿ ನುಣುಚಿಕೊಳ್ಳುತ್ತಿದ್ದಾರೆ. ಲಕ್ಷಾಂತರ ರೂ.ವೆಚ್ಚ: ನಮ್ಮ ಕ್ಲಿನಿಕ್‌ಗಳು ಬಹುತೇಕ ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು. ಕಟ್ಟಡದ ಬಾಡಿಗೆ, ವಿದ್ಯುತ್ ಬಿಲ್, ಸಿಬ್ಬಂದಿ ಸಂಬಳ ಸೇರಿದಂತೆ ಪ್ರತಿಯೊಂದು ಕ್ಲಿನಿಕ್ ನಿರ್ವಹಣೆಗಾಗಿ ಪ್ರತಿ ತಿಂಗಳು ಲಕ್ಷಾಂತರ ರೂ.ವೆಚ್ಚ ತಗುಲುತ್ತಿದ್ದು ವೈದ್ಯರಿಲ್ಲದ ಆಸ್ಪತ್ರೆಯಲ್ಲಿ ರೋಗಿಗಳಿಗೆ ಯಾವುದೇ ಚಿಕಿತ್ಸೆ ದೊರೆಯದಿದ್ದರೂ ಲಕ್ಷಾಂತರ ರೂ.ವೆಚ್ಚ ಮಾಡುತ್ತಿರುವುದು ಜನರ ತೆರಿಗೆ ಹಣ ವ್ಯರ್ಥಮಾಡಿದಂತಾಗುತ್ತಿದೆ. ಆದ್ದರಿಂದ, ನಮ್ಮ ಕ್ಲಿನಿಕ್ ಮುಚ್ಚಿ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಿದರೆ ದೂರದ ಆಸ್ಪತ್ರೆಗಳಿಗೆ ಹೋಗುವುದು ತಪ್ಪಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.