ಜಿಲ್ಲೆ

ಪಾವಗಡದಲ್ಲಿ ತಬ್ಲಿಘಿಗಳ ಸ್ಥಳಾಂತರಕ್ಕೆ ಸ್ಥಳೀಯರ ಪಟ್ಟು

ಪಾವಗಡ: ಗುಜರಾತ್‌ನಿಂದ ಖಾಸಗಿ ಬಸ್‌ನಲ್ಲಿ ಮಂಗಳವಾರ ರಾತ್ರಿ 10ಗಂಟೆ ಸುಮಾರಿಗೆ 18 ತಬ್ಲಿಗಳು ಬಂದಿಳಿದಿದ್ದು, ಪಟ್ಟಣದ ಕುರುಬರಹಳ್ಳಿ ಗೇಟ್ ಸಮೀಪದ ಹಾಸ್ಟೆಲ್‌ನಲ್ಲಿ ಅವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ.

ಬಂದಿರುವ 18 ತಬ್ಲಿಗಳಲ್ಲಿ 13 ಮಂದಿ ವೈ.ಎನ್.ಹೋಸಕೊಟೆಯವರು, ಐವರು ಆಂಧ್ರದವರು. ತಬ್ಲಿಗಳು ಬಂದಿರುವ ಸುದ್ದಿತಿಳಿದು ಸ್ಥಳಕ್ಕೆ ಬಂದ ಕುರುಬರಹಳ್ಳಿ, ನಲಿಗಾನಹಳ್ಳಿ, ಬಾಲಮ್ಮನಹಳ್ಳಿ ಗ್ರಾಮಸ್ಥರು ಯಾವುದೇ ಕಾರಣಕ್ಕೂ ವಸತಿ ನಿಲಯದಲ್ಲಿ ಕ್ವಾರಂಟೈನ್‌ಗೆ ಅವಕಾಶ ನೀಡುವುದಿಲ್ಲ, ಬೇಕಿದ್ದರೆ ವೈ.ಎನ್.ಹೊಸಕೊಟೆಯಲ್ಲಿ ಅವರಿಗೆ ಸ್ಥಳ ನೀಡಿ, ಇಲ್ಲಿ ಬೇಡವೇ ಬೇಡ ಎಂದು ಪಟ್ಟು ಹಿಡಿದರು.

ಕೊನೆಗೆ ಮಂಗಳವಾರ ರಾತ್ರಿ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಡಿ.ವರದರಾಜು ಮತ್ತು ಪೊಲೀಸರ ಜತೆಯೂ ಗ್ರಾಮಸ್ಥರು ವಾಗ್ವಾದ ನಡೆಸಿದರು. ಗುಜರಾತ್‌ನಿಂದ ಖಾಸಗಿ ಬಸ್‌ನಲ್ಲಿ ಕುರುಬರಹಳ್ಳಿ ಗೇಟ್ ಬಳಿ ಬಂದಿಳಿದ ತಬ್ಲಿಘಿಗಳಿಗೆ ಮುಂಜಾಗ್ರತಾ ಕ್ರಮವಾಗಿ ತಾಲೂಕು ಆಡಳಿತ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಿತ್ತು.

ಬುಧವಾರ ಬೆಳಗ್ಗೆ ಮಧುಗಿರಿ ಉಪವಿಭಾಗಾಧಿಕಾರಿ ಡಾ.ನಂದಿನಿದೇವಿ, ಡಿವೈಎಸ್‌ಪಿ ಪ್ರವೀಣ್‌ಕುಮಾರ್ ಮತ್ತು ವಿವಾದಿತ ವಸತಿನಿಲಯಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಜಿಲ್ಲಾಡಳಿತ ಎಲ್ಲ ಮುಂಜಾಗ್ರತಾ ಕ್ರಮಕೈಗೊಂಡಿದ್ದು, ಯಾರೂ ಆತಂಕಪಡಬೇಕಿಲ್ಲ ಎಂದು ಭರವಸೆ ನೀಡಿದರು.

ಎಲ್ಲರ ಗಂಟಲು ದ್ರವ ಪರೀಕ್ಷೆ: ಪಾವಗಡ ತಾಲೂಕು ವೈ.ಎನ್.ಹೊಸಕೋಟೆಯ 13, ಆಂಧ್ರದ ಐವರು ತಬ್ಲಿಘಿಗಳು ಗುಜರಾತ್, ಅಹಮದಾಬಾದ್‌ಗೆ ಜಮಾಯತ್‌ಗೆ ಹೋಗಿದ್ದರು ಎನ್ನಲಾಗಿದೆ, ಗುಜರಾತ್‌ನ ಈಶ ೌಂಡೇಷನ್ ಸೆಂಟರ್‌ನಲ್ಲಿ 28 ದಿನ ಕ್ವಾರಂಟೈನ್‌ನಲ್ಲಿದ್ದ ಇವರಿಗೆ ಅಲ್ಲಿ ಪರೀಕ್ಷೆ ನಡೆಸಲಾಗಿದೆ. ಗುಜರಾತ್ ಸರ್ಕಾರ ಖಾಸಗಿ ಬಸ್‌ನಲ್ಲಿ 33 ತಬ್ಲಿಘಿಗಳನ್ನು ರಾಜ್ಯಕ್ಕೆ ಕಳುಹಿಸಿದ್ದು, ಅದರಲ್ಲಿ 15 ಜನರು ಚಿತ್ರದುರ್ಗದಲ್ಲಿ ಇಳಿದಿದ್ದಾರೆ. ಉಳಿದ 18 ಮಂದಿ ಮಂಗಳವಾರ ಕುರುಬರಹಳ್ಳಿ ವಸತಿನಿಲಯಕ್ಕೆ ಬಂದು ಆಶ್ರಯ ಪಡೆದಿದ್ದಾರೆ. ಡಾ.ಕಿರಣ್ ನೇತೃತ್ವದಲ್ಲಿ ಇವರೆಲ್ಲರ ಗಂಟಲು ದ್ರವ ಪಡೆದು ಪರೀಕ್ಷೆ ನಡೆಸಲಾಗಿದೆ. ಆಂಧ್ರದ ತಬ್ಲಿಘಿಗಳನ್ನು ಅಲ್ಲಿಗೆ ಕಳುಹಿಸಿಕೊಡಲಾಗಿದೆ.

2 ತಿಂಗಳ ಹಿಂದೆಯೇ ಕ್ವಾರಂಟೈನ್‌ಗಾಗಿ ಈ ಜಾಗವನ್ನು ಜಿಲ್ಲಾಧಿಕಾರಿ ಗುರುತಿಸಿದ್ದಾರೆ, ಬಂದಿರುವ 18 ಜನರಲ್ಲಿ 13 ಜನ ವೈ.ಎನ್.ಹೋಸಕೊಟೆಯವರು, ಉಳಿದವರು ಆಂಧ್ರದವರು. ಕೋವಿಡ್-19 ಪರೀಕ್ಷೆ ನಡೆಸಲಾಗಿದ್ದು ವರದಿ ಬಂದ ನಂತರ ಇವರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಡಿ.ವರದರಾಜು ತಹಸೀಲ್ದಾರ್