ಸುಂಟಿಕೊಪ್ಪ: ಸಂಘಗಳಿಂದ ಪಡೆದ ಸಾಲವನ್ನು ನಿರ್ದಿಷ್ಟ ಉದ್ದೇಶಕ್ಕೆ ವಿನಿಯೋಗಿಸಿದಲ್ಲಿ ಮಾತ್ರ ವೈಯಕ್ತಿಕ ಅಭಿವೃದ್ಧಿ ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನ್ನಪೂರ್ಣ ಸ್ವಸಹಾಯ ಸಂಘದ ಪ್ರಬಂಧಕಿ ರಾಜಿ ಅಭಿಪ್ರಾಯಪಟ್ಟರು.
ನಾಕೂರು ಶಿರಂಗಾಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್‌ಬೈಲ್ ಕಾರ್ಯಕ್ಷೇತ್ರದಲ್ಲಿ ಆಯೋಜಿಸಿದ್ದ ಅನ್ನಪೂರ್ಣ ಸ್ವಸಹಾಯ ಸಂಘದ 17ನೇ ವಾರ್ಷಿಕೋತ್ಸವ ಮಾತನಾಡಿ, ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಂಘದ ಸದಸ್ಯರಿಗೆ ವಿದ್ಯಾ ನಿಧಿಯಿಂದ ಮಕ್ಕಳ ಉನ್ನತ ಶಿಕ್ಷಣ, ಸ್ವಂತ ಸೂರು, ವ್ಯಾಪಾರ, ವಾಹನಗಳ ಖರೀದಿಗೆ ಸಾಲ ಸೌಲಭ್ಯ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ನೀಡುತ್ತಿದೆ. ನಾವು ಸಾಲ ಪಡೆದುಕೊಳ್ಳುವ ಮೊದಲು ಅದರ ಸಾಧಕ-ಬಾಧಕಗಳ ಅರಿತುಕೊಂಡು ಸಾಲ ಪಡೆದುಕೊಳ್ಳಬೇಕು. ಪಡೆದ ಸಾಲವನ್ನು ನಿರ್ದಿಷ್ಟ ಉದ್ದೇಶಕ್ಕೆ ಬಳಸಬೇಕು. ಹಾಗಾದರೆ ಮಾತ್ರ ನಾವು ಅಭಿವೃದ್ಧಿಯನ್ನು ಹೊಂದಬಹುದು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾನ್‌ಬೈಲ್ ಒಕ್ಕೂಟದ ಉಪಾಧ್ಯಕ್ಷೆ ಗೀತಾ ವಹಿಸಿದ್ದರು. ಸದಸ್ಯರಾದ ಕೇಶವತಿ, ಶ್ರೀಮತಿ ಅನಿಸಿಕೆ ಹಂಚಿಕೊಂಡರು. ಸೇವಾ ಪ್ರತಿನಿಧಿ ಯಶೋಧ ಬಸವರಾಜ್, ಸ್ವ-ಸಹಾಯ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಪುಷ್ಪಲತಾ, ಸರಸ್ವತಿ, ವಿವಿಧ ಸಂಘಗಳ ಸದಸ್ಯರು ಇದ್ದರು.