ಬನ್ನೂರಿನ ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಲಯನ್ಸ್.ಡಾ.ಎನ್ .ಕೃಷ್ಣೇಗೌಡ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷ ಬಿ.ಬಸುರಾಜು, ಕಾರ್ಯದರ್ಶಿ ಎಸ್.ರಾಮಚಂದ್ರ, ಜಿಲ್ಲಾ ರಾಜ್ಯಪಾಲ ಟಿ.ನಾರಾಯಣಸ್ವಾಮಿ ಇತರರು ಇದ್ದರು. 
ಜಿಲ್ಲೆ

ಸಮಾಜ ಸೇವೆಯೇ ಲಯನ್ಸ್ ಕ್ಲಬ್‌ನ ಗುರಿ

ಬನ್ನೂರು: ಲಯನ್ಸ್ ಕ್ಲಬ್‌ನ ಸೇವೆ ಅನನ್ಯವಾಗಿದ್ದು, 108 ವರ್ಷದ ದೀರ್ಘಕಾಲದ ಇತಿಹಾಸವನ್ನು ಹೊಂದಿದೆ ಎಂದು ಪಿಎಂಜೆಎಫ್ ಡಾ.ಎನ್ ಕೃಷ್ಣೇಗೌಡ ತಿಳಿಸಿದರು.

ಪಟ್ಟಣದ ಮಾಕನಹಳ್ಳಿ ಗ್ರಾಮದಲ್ಲಿರುವ ಲಯನ್ಸ್ ವಿದ್ಯಾ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಲಯನ್ಸ್ ಕ್ಲಬ್ ಆಫ್ ಬನ್ನೂರು ಪದಾಧಿಕಾರಿಗಳ ಪದವಿ ಪ್ರದಾನ ಸಮಾರಂಭದಲ್ಲಿ ನೂತನ ಅಧ್ಯಕ್ಷ ಬಿ.ಬಸುರಾಜು ಮತ್ತು ಕಾರ್ಯದರ್ಶಿ ಎಸ್.ರಾಮಚಂದ್ರ ತಂಡಕ್ಕೆ ಪದವಿ ಪ್ರದಾನ ಮಾಡಿ ಮಾತನಾಡಿದರು.

ಲಯನ್ಸ್ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾಗಿದೆ. ಪ್ರಪಂಚದಾದ್ಯಂತ 49971 ಲಯನ್ಸ್ ಕ್ಲಬ್‌ಗಳನ್ನು ಹೊಂದಿದ್ದು, 13,60,278 ಜನ ಸದಸ್ಯರನ್ನು ಹೊಂದಿದೆ. ಪ್ರತಿ ತಿಂಗಳಿಗೆ ಎಲ್ಲ ಕ್ಲಬ್‌ಗಳಿಂದ 25.96 ಕೋಟಿ ರೂ. ದೇಣಿಗೆ ಸಂಗ್ರಹವಾಗುತ್ತಿದ್ದು, 65 ಕೋಟಿ ರೂ. ಗಳನ್ನು ಸದಸ್ಯರು ದಾನವಾಗಿ ಸಂಸ್ಥೆಗೆ ನೀಡಿದ್ದಾರೆ. ಈ ಹಣವನ್ನು ಕ್ಲಬ್‌ಗಳು ಉಪಯೋಗಿಸಿಕೊಳ್ಳಬಹುದು. ಪ್ರತಿ ಕ್ಲಬ್ 86 ಲಕ್ಷ ರೂ.ಗಳನ್ನು ಪಡೆಯಬಹುದಾಗಿದ್ದು, ವಿವಿಧ ಸೇವಾ ಕಾರ್ಯಗಳಿಗೆ ಬಳಸಿಕೊಳ್ಳಿ ಎಂದು ತಿಳಿಸಿದರು.

ನೂತನ ಅಧ್ಯಕ್ಷ ಬಸವರಾಜು ಮಾತನಾಡಿ, ಕ್ಲಬ್ ವಿವಿಧ ರೀತಿಯ ಸೇವಾ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದೆ. 2025-26ನೇ ಸಾಲಿಗೆ ಅಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸುವಂತ ಸುವರ್ಣಾವಕಾಶ ನಮ್ಮ ತಂಡಕ್ಕೆ ಬಂದಿದ್ದು, ಸಿಕ್ಕಿರುವಂತಹ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಸೇವಾ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.

ನಂತರ ಲಯನ್ ಡಿ.ಪುಟ್ಟೇಗೌಡ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದಂತ ಲಯನ್ಸ್ ಶಾಲೆಯ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಬೀದಿಬದಿ ವ್ಯಾಪಾರಿಗಳಿಗೆ ನೆರಳಿನ ಕೊಡೆಗಳನ್ನು ಅನಿಲ್‌ಕುಮಾರ್ ವಿತರಣೆ ಮಾಡಿದರು. ಸಂಸ್ಥಾಪಕ ಸದಸ್ಯರಾದ ಎಸ್.ಕೃಷ್ಣಪ್ಪ, ನಿವೃತ್ತರಾದ ದೇವೇಗೌಡ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪ್ರಾಂತಪಾಲ ಟಿ.ನಾರಾಯಣಸ್ವಾಮಿ, ಮಾಜಿ ಶಾಸಕ ಎಸ್.ಕೃಷ್ಣಪ್ಪ, ಚನ್ನಪ್ಪ, ಬಿ.ಎಸ್.ರವೀಂದ್ರಕುಮಾರ್, ಡಿ.ಪುಟ್ಟೇಗೌಡ, ಬಿ.ಎಲ್.ಶಿವಸ್ವಾಮಿ, ರಮೇಶ್, ಎಚ್.ಎಂ.ಸ್ವಾಮಿ, ಎಂ.ಡಿ.ಪುಟ್ಟಸ್ವಾಮಿ, ಎಸ್.ನಾಗರಾಜು, ಕೆ.ನಾಗರಾಜು, ಡಾ.ರಾಮಚಂದ್ರ, ವೈ.ಎಸ್.ರಾಮಸ್ವಾಮಿ, ವೈ.ಕೆ.ರಮೇಶ್, ಮಹೇಶ್‌ಕುಮಾರ್, ಜಯರಾಮು, ವೇಣುಗೋಪಾಲ್, ಗೋವಿಂದ, ನಾಗೇಂದ್ರ, ಎಸ್.ಕೆ.ವೀರಪ್ಪಗೌಡ, ಮಂಜುನಾಥ್, ಚಂದ್ರಶೇಖರಭಟ್, ಪ್ರದೀಪ್‌ಕುಮಾರ್, ಮಂಜುನಾಥ, ಕುಚೇಲ, ರಾಮಲಿಂಗೇಗೌಡ, ಚಲುವರಾಜು, ದೇವೇಗೌಡ ಇದ್ದರು.