ತಿ.ನರಸೀಪುರ ಪಟ್ಟಣದ ಹಳೇ ತಿರುಮಕೂಡಲಿನ ಬಳಿಯಿರುವ ಶ್ರೀನಿವಾಸ ಕನ್ವೆನ್ಷನ್ ಹಾಲಿನಲ್ಲಿ ಆಯೋಜಿಸಿದ್ದ ಶಿಕ್ಷಕ ದಿನಾಚರಣೆ ಕಾರ್ಯಕ್ರಮವನ್ನು ಸಂಸದ ಸುನೀಲ್ ಬೋಸ್ ಉದ್ಘಾಟಿಸಿದರು. ಸೋಸಲೆ ಗಂಗಾಧರ್, ಪಿ.ಎಸ್.ಅನಂತರಾಜು, ಎಸ್.ಸಿ.ಶಿವಮೂರ್ತಿ, ಕುಕ್ಕುರು ಗಣೇಶ್, ರಾಮಲಿಂಗಯ್ಯ, ಸುಬ್ಬಣ್ಣ, ಎಂ.ವಿ.ಶಿವಶಂಕರಮೂರ್ತಿ ಇತರರು ಇದ್ದರು. 
ಜಿಲ್ಲೆ

ಬದುಕು ಬೆಳಗುವ ಜ್ಯೋತಿ ಗುರು

ವಸಂತಕುಮಾರ್ ಬಿ

ತಿ.ನರಸೀಪುರ: ಮಕ್ಕಳನ್ನು ದೇಶದ ಸದೃಢ ಪ್ರಜೆಯನ್ನಾಗಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಮಕ್ಕಳು ಶಿಕ್ಷಕರ ಮಾರ್ಗದರ್ಶನವಿಲ್ಲದೇ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ಸಂಸದ ಸುನೀಲ್ ಬೋಸ್ ಹೇಳಿದರು.

ಪಟ್ಟಣದ ಹೊರ ವಲಯ ಹಳೇ ತಿರುಮಕೂಡಲಿನ ಶ್ರೀನಿವಾಸ ಕನ್ವೆನ್ಷನ್ ಹಾಲ್‌ನಲ್ಲಿ ಶನಿವಾರ ಬಿಇಒ ಕಚೇರಿ ಹಾಗೂ ಪ್ರಾಥಮಿಕ/ ಪ್ರೌಢಶಾಲಾ ಶಿಕ್ಷಕರ ಸಂಘಗಳ ವತಿಯಿಂದ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತದ ನೆಲದಲ್ಲಿ ಗುರು ಪರಂಪರೆಯು ಪುರಾತನ ಕಾಲದಿಂದ ನಡೆದುಕೊಂಡು ಬಂದಿದೆ. ಅಂತಹ ಗುರು ಪರಂಪರೆಯು ದೇಶದ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವಲ್ಲಿ ಸಹಕಾರಿಯಾಗಿದೆ ಎಂದರು.

ಶಿಕ್ಷಕರೆಂದರೆ ಹೊಸ ಪೀಳಿಗೆಯ ಬದುಕು ಬೆಳಗುವ ಜ್ಯೋತಿ ಸ್ವರೂಪಿಯಾಗಿದ್ದಾರೆ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಭಾರತದ ಪರಂಪರೆಯನ್ನು ಪಾಶ್ಚಿಮಾತ್ಯ ದೇಶಗಳಿಗೆ ಬೋಧಿಸಿದ ಮಹಾನ್ ಪಂಡಿತರಾಗಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಜ್ಞಾನದ ಬೆಳಕಿನತ್ತ ಮುನ್ನಡೆಸುವಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಹೆಚ್ಚಿನ ಶ್ರಮ ವಹಿಸುತ್ತಿದ್ದಾರೆ ಎಂದರು.

ಬಿಇಒ ಎಸ್.ಸಿ.ಶಿವಮೂರ್ತಿ ಮಾತನಾಡಿ, ಶಿಕ್ಷಕ ಸಮುದಾಯದಲ್ಲೂ ಹಲವು ಸಮಸ್ಯೆಗಳಿವೆ ಅವುಗಳನ್ನೆಲ್ಲ ಬದಿಗೊತ್ತಿ ಯಾವುದನ್ನೂ ತೋರಿಸಿಕೊಳ್ಳದೇ ಮಕ್ಕಳ ಭವಿಷ್ಯ ರೂಪಿಸುವೆಡೆಗೆ ಆಲೋಚಿಸುವ ಶಿಕ್ಷಕರ ಸೇವೆ ಶ್ಲಾಘನೀಯ. ನ್ಯಾಯಾಧೀಶರು ನ್ಯಾಯಕ್ಕಾಗಿ, ವೈದ್ಯರು ರೋಗಿಗಳ ಪ್ರಾಣ ಉಳಿಸಲು ಹೋರಾಟ ನಡೆಸಿದರೆ ಶಿಕ್ಷಕರು ರಾಷ್ಟ್ರಕ್ಕೆ ಉತ್ತಮ ಸಮಾಜ ರೂಪಿಸುವೆಡೆಗೆ ಗಮನಹರಿಸುತ್ತಾರೆ. ಹಾಗಾಗಿಯೇ ವ್ಯಕ್ತಿಯ ಹಿಂದೆ ಗುರು ಇರಬೇಕು, ಮುಂದೆ ಗುರಿ ಇರಬೇಕು ಎಂದು ಹೇಳಲಾಗುತ್ತದೆ. ಹಾಗಾದಾಗ ಮಾತ್ರವೇ ಯಾವುದೇ ಗುರಿ ಸಾಧಿಸಲು ಸಾಧ್ಯ ಎಂದರು.

ಇದೇ ವೇಳೆ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾಹಿತಿ ಸೋಸಲೆ ಗಂಗಾಧರ್ ಅವರು ಪ್ರಧಾನ ಭಾಷಣ ಮಾಡಿದರು. ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಎಂ.ವಿ.ಶಿವಶಂಕರ್ ಮೂರ್ತಿ, ಕುಪ್ಯ ಪುಟ್ಟಸ್ವಾಮಿ, ಬಿಆರ್‌ಸಿ ನಾಗೇಶ್, ದೈಹಿಕ ಶಿಕ್ಷಣ ಪರಿವೀಕ್ಷಕ ಮರಿಸ್ವಾಮಿ, ಪತ್ರಾಂಕಿತ ವ್ಯವಸ್ಥಾಪಕ ಎಚ್.ಗೋವಿಂದರಾಜು, ತಾಪಂ ಮಾಜಿ ಸದಸ್ಯರಾದ ಕುಕ್ಕೂರು ಗಣೇಶ್, ನರಸಿಂಹಮಾದ ನಾಯಕ, ರಾಮಲಿಂಗಯ್ಯ, ಶಿಕ್ಷಕರ ಸಂಘದ ಅಧ್ಯಕ್ಷ ಸುಬ್ಬಣ್ಣ ಇತರರು ಇದ್ದರು.