ಜಿಲ್ಲೆ

ದುರಸ್ತಿಯಾಗಲಿ ಕುಮಟಾ ತಾಲೂಕು ಸೌಧದ ಲಿಫ್ಟ್

ಕುಮಟಾ: ಇಲ್ಲಿನ ತಾಲೂಕು ಸೌಧದ ಲಿಫ್ಟ್ ವ್ಯವಸ್ಥೆ ಕೆಟ್ಟು ಹಲವು ತಿಂಗಳಾದರೂ ದುರಸ್ತಿ ಮಾಡಿಸುವ ಯಾವ ಲಕ್ಷಣವೂ ಕಂಡುಬರುತ್ತಿಲ್ಲ. ಹೀಗಾಗಿ ದಿನನಿತ್ಯ 60ಕ್ಕಿಂತ ಹೆಚ್ಚು ಮೆಟ್ಟಿಲು ಹತ್ತಿಳಿಯುವ ಕಷ್ಟದಿಂದಾಗಿ ಸಾರ್ವಜನಿಕರು ಅವ್ಯವಸ್ಥೆಗೆ ಹಿಡಿಶಾಪ ಹಾಕುವಂತಾಗಿದೆ.

ತಾಲೂಕು ಸೌಧದಲ್ಲಿ ಉಪವಿಭಾಗಾಧಿಕಾರಿ ಕಚೇರಿ, ತಹಸೀಲ್ದಾರ್ ಕಚೇರಿ ಸಹಿತ ಇತರ ಹಳೆಯ ಸರ್ಕಾರಿ ಕಚೇರಿಗಳು ಸ್ಥಳಾಂತರಗೊಂಡು ಬಂದಂತೆ ತನ್ನ ಸಾಮರ್ಥ್ಯ ಮೀರಿ ಕೆಲಸ ಮಾಡಿರುವ ಲಿಫ್ಟ್ ಕೆಟ್ಟು ನಾಲ್ಕೈದು ತಿಂಗಳಾಗಿದೆ. ಹಳೆಯ ಕಚೇರಿಯಿಂದ ಕಡತಗಳ ಮೂಟೆ, ಪೀಠೋಪಕರಣಗಳು ಮುಂತಾದವುಗಳನ್ನು ಲಿಫ್ಟ್ ಮೇಲೆತ್ತಿ ಮೂರನೇ ಅಂತಸ್ತಿನವರೆಗೂ ಸಾಗಿಸಿ ತನ್ನ ಕೈಲಾದ ಕೆಲಸ ಮಾಡಿದೆ. ಆದರೆ, ಅತಿಭಾರದ ಕಾರ್ಯಭಾರದ ಕಾರಣಕ್ಕೋ ಅಥವಾ ಲಿಫ್ಟನ ತಾಂತ್ರಿಕ ಗುಣಮಟ್ಟದಿಂದಲೋ ಲಿಫ್ಟ್ ಓರೆಯಾಗಿದ್ದು ಅಪಾಯಕಾರಿಯೂ ಆಗಿದೆ. ಹೀಗಾಗಿ ಲಿಫ್ಟ್ ಬಂದ್ ಆಗಿದ್ದು ದುರಸ್ತಿಗೆ ಲಕ್ಷಾಂತರ ಖರ್ಚಿದೆ ಎಂಬ ಮಾಹಿತಿ ಲಭಿಸಿದೆ. ಹೀಗಾಗಿ ಲಿಫ್ಟ್ ದುರಸ್ತಿಗೆ ಬೇಕಾದ ಹಣಕಾಸು ಸಮಸ್ಯೆಯಿಂದ ದುರಸ್ತಿ ಕಾರ್ಯ ನಡೆದಿಲ್ಲ ಎಂಬುದು ಸ್ಪಷ್ಟ.

ಮುಖ್ಯವಾಗಿ ತಾಲೂಕು ಸೌಧಕ್ಕೆ ಬರುವವರಲ್ಲಿ ಹೆಚ್ಚಿನವರಿಗೆ ಮೊದಲ ಅಂತಸ್ತು ಹಾಗೂ ಎರಡನೇ ಅಂತಸ್ತಿನಲ್ಲೇ ಕೆಲಸಕಾರ್ಯಗಳಿರುತ್ತದೆ. ನೆಲ ಮಹಡಿಯಲ್ಲಿ ಕೇವಲ ಉಪನೋಂದಣಾಧಿಕಾರಿ ಕಚೇರಿ ಮತ್ತು ಆಧಾರ ಕೇಂದ್ರ ಇದ್ದರೂ ವಿವಿಧ ಕಾರಣಗಳಿಗೆ ಮೇಲಿನ ಅಂತಸ್ತುಗಳಿಗೆ ಜನ ಓಡಾಡಲೇಬೇಕು. ವೃದ್ಧರು, ಅಸಹಾಯಕರು, ಅಂಗವಿಕಲರು, ಸೊಂಟ-ಮೊಣಕಾಲು ನೋವು ಇರುವವರು ಮೊದಲ ಮಹಡಿ ಹತ್ತುವುದರಲ್ಲೇ ಸುಸ್ತಾಗುತ್ತಾರೆ. ಸ್ವಲ್ಪ ಹೆಚ್ಚಿನ ಪ್ರಮಾಣದ ಅಂಗವಿಕಲತೆ ಉಳ್ಳವವರನ್ನು ಹೊತ್ತೊಯ್ಯಬೇಕಾಗುತ್ತದೆ. ವಿಚಿತ್ರವೆಂದರೆ ತಾಲೂಕಿನಲ್ಲಿ ಪಂಚಾಯಿತಿ ಇನ್ನಿತರ ಸರ್ಕಾರಿ ಉದ್ಯೋಗಿಗಳಲ್ಲೂ ಸಾಕಷ್ಟು ಅಂಗವಿಕಲರಿದ್ದು, ತಾಲೂಕು ಸೌಧದ ದಿನನಿತ್ಯದ ಭೇಟಿ ಅವರಿಗೆ ನೋವಿನ ಕಥೆಯಾಗುತ್ತಿದೆ. ಹೀಗಾಗಿ ತಾಲೂಕು ಸೌಧದ ಮೆಟ್ಟಿಲುಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಲಿಫ್ಟ್ ಅವ್ಯವಸ್ಥೆಯ ವಿರುದ್ಧ ಬೇಸರದ ನುಡಿಗಳು ಸದಾ ಕೇಳಿಬರುತ್ತಿವೆ. ಸಮಸ್ಯೆ ಹೇಳಿಕೊಳ್ಳುವುದಕ್ಕೆ ತಹಸೀಲ್ದಾರ್ ಕೂಡಾ ಇಲ್ಲದಂತಾಗಿದೆ. ತಾಲೂಕಾಡಳಿತ ಕೂಡಲೇ ಲಿಫ್ಟ್ ಸರಿಪಡಿಸುವ ಕ್ರಮ ಕೈಗೊಳ್ಳಬೇಕಿದೆ.

ಇಲ್ಲಿನ ಲಿಫ್ಟ್​ಗೆ ಸ್ವಲ್ಪ ಹೆಚ್ಚಿನ ಸಮಸ್ಯೆಯಾಗಿದೆ. ಹೀಗಾಗಿ, ದುರಸ್ತಿಗೂ ಹೆಚ್ಚಿನ ಹಣಕಾಸು ಅಗತ್ಯವಿತ್ತು. ಈ ಬಗ್ಗೆ ವರದಿ ಕಳಿಸಲಾಗಿದ್ದು, ಹಣಕಾಸು ವ್ಯವಸ್ಥೆ ಬಂದಿದೆ. ಸದ್ಯದಲ್ಲೇ ಲಿಫ್ಟ್ ದುರಸ್ತಿ ಮಾಡಿಸಲಾಗುವುದು. | ಸತೀಶ ಗೌಡ  ಗ್ರೇಡ್-2 ತಹಸೀಲ್ದಾರ್, ಕುಮಟಾ