ಜನ ಜೀವನ ಅಸ್ತವ್ಯಸ್ತ 
ಜಿಲ್ಲೆ

ಕೋಟೆನಾಡಿನ ಜನ ಜೀವನ ಅಸ್ತವ್ಯಸ್ತ..!

ಬಾಗಲಕೋಟೆ: ಕಳೆದ ಒಂದು ವಾರದಿಂದ ಕಣ್ಮರೆಯಾಗಿದ್ದ ವರುಣ ದೇವ ಮತ್ತೆ ಪತ್ಯೇಕ್ಷನಾಗಿದ್ದು, ಜಿಲ್ಲೆಯಾದ್ಯಂತ ಮಂಗಳವಾರ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಬಿಟ್ಟು ಬಿಡದೆ ಸುರಿಯಿತು. ಇದರಿಂದ ಕೋಟೆನಾಡಿನ ಜನ ಜೀವನ ಅಸ್ತವ್ಯಸ್ತಗೊಂಡಿತು. ಸಿಡಿಲಿನ ಹೊಡೆತಕ್ಕೆ 8 ಆಡು ಬಲಿಯಾಗಿವೆ.
ಬಾಗಲಕೋಟೆ ನಗರ, ತಾಲೂಕು ಹಾಗೂ ಮುಧೋಳ, ಜಮಖಂಡಿ, ರಬಕವಿ-ಬನಹಟ್ಟಿ, ತೇರದಾಳ, ಮಹಾಲಿಂಗಪುರ, ಲೋಕಾಪುರ, ಕೆರೂರ, ಕಲಾದಗಿ, ಬೀಳಗಿ, ಬಾದಾಮಿ, ಹುನಗುಂದ, ಇಳಕಲ್ಲ, ಕಮಗತಿ, ಅಮೀನಗಡ ಸೇರಿದಂತೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಯಿತು. ಮಳೆಯಿಂದಾಗಿ ಪ್ರಾಣಿಗಳ ಜೀವಕ್ಕೆ ಕುತ್ತು ಬಂದರೆ, ಮಾರುಕಟ್ಟೆಯಲ್ಲಿ ಬೀದಿ ವ್ಯಾಪಾಸ್ಥರು ತೀವ್ರ ಸ್ವರೂಪದಲ್ಲಿ ಪರದಾಡಿದರು. ವರುಣನ ಆರ್ಭಟಕ್ಕೆ ಜಿಲ್ಲೆಯಾದ್ಯಂತ ಅನೇಕ ಕಡೆ ಮನೆಗಳಿಗೆ ಹಾನಿಯಾಗಿದೆ.

ಮಳೆಯಿಂದಾಗಿ ತೊಗರಿ, ಹೆಸರು, ಈರುಳ್ಳಿ ಬೆಳಗಾರರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ವಾತಾವರಣದಲ್ಲಿ ಆಗಿರುವ ಬದಲಾವಣೆಯಿಂದಾಗಿ ಬೆಳೆ ರೋಗದ ಭೀತಿ ಎದುರಾಗಿದೆ. ಬೆಳೆಗಳನ್ನು ಉಳಿಸಿಕೊಳ್ಳಲು ತೀವ್ರ ಹೋರಾಟ ನಡೆಸಬೇಕಾದ ಸ್ಥಿತಿ ಬಂದಿದೆ. ವರುಣನ ಆರ್ಭಟಕ್ಕೆ ಕೆರೆ, ಕಟ್ಟೆಗಳು, ಬಾಂದಾರಗಳು ಭರ್ತಿಯಾಗಿ ಜೀವ ಕಳೆ ಬಂದವು. ಬಿಸಿಲನಾಡು ಅಕ್ಷರಶಃ ಮಲೆನಾಡಿನಂತೆ ಕಂಗೂಳಿಸಿತು. ಸಂಜೆ ಹೊತ್ತಿಗೆ ವಾತಾವರಣ ಬದಲಾಗಿ ಹೋಯಿತು. ಮಳೆ ಸಂಪೂರ್ಣ ಮಾಯವಾಗಿ ಬಿಸಲಿನ ತಾಪ ಹೆಚ್ಚಾಗಿರುವುದು ಕಂಡು ಬಂದಿತು. ಇಳಕಲ್ ಭಾಗದಲ್ಲಿ ಭಾರಿ ಮಳೆ ಹಾಗೂ ಸಿಡಿಲಿಗೆ ಹೆರೂರ ಗ್ರಾಮದ ಗೌಡಪ್ಪ ಹೊಕ್ರಾಣಿ ಅವರಿಗೆ ಸೇರಿದ 8 ಆಡು ಹಾಗೂ ಒಂದು ಆಡಿನ ಮರಿ ಮೃತಪಟ್ಟಿವೆ. ಆಡು ಸಾಕಾಣಿಕೆಗಾಗಿ ಪಿ.ಎಲ್.ಡಿ ಬ್ಯಾಂಕ್ ಸಾಲ ಮಾಡಿದ್ದ ಗೌಡಪ್ಪ ಆಡುಗಳ ಸ್ಥಿತಿ ಕಂಡು ಕಣ್ಣೀರಿಟ್ಟರು. ಸೂಕ್ತ ಪರಿಹಾರ ನೀಡಲು ಮನವಿ ಮಾಡಿದರು. ಸ್ಥಳಕ್ಕೆ ಪಶುವೈದ್ಯಾಧಿಕಾರಿ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.