ಉಪ್ಪಿನಬೆಟಗೇರಿ: ತಮ್ಮ ಸನ್ಯಾಸದ ಸುದೀರ್ಘ 89ವರ್ಷಗಳ ಬದುಕಿನುದ್ದಕ್ಕೂ ಇಷ್ಟಲಿಂಗ ಪೂಜೆ, ತಪೋನುಷ್ಠಾನ, ಸರಳ ಸಾತ್ವಿಕ ಆಚಾರ ವಿಚಾರಗಳ ದಿನಚರಿ ರೂಢಿಸಿಕೊಂಡು ಸದಾ ಭಕ್ತಗಣದ ಉನ್ನತಿಯನ್ನೇ ಬಯಸಿರುವ ಗುರುವರ್ಯರಾದ ಶ್ರೀ ಶಾಂತಲಿಂಗ ಶಿವಾಚಾರ್ಯರ ಬದುಕೇ ಒಂದು ಸಂದೇಶವಾಗಿದೆ ಎಂದು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯರು ಹೇಳಿದರು.
ಅಮ್ಮಿನಬಾವಿ ಪಂಚಗೃಹ ಹಿರೇಮಠದಲ್ಲಿ ಬುಧವಾರ ಭಕ್ತರು ಹಮ್ಮಿಕೊಂಡಿದ್ದ ಶ್ರೀ ಶಾಂತಲಿಂಗ ಶಿವಾಚಾರ್ಯರ 90ನೆಯ ವರ್ಧಂತಿ ಮಹೋತ್ಸವ ಹಾಗೂ ತುಲಾಭಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಆಶೀರ್ವಚನ ನೀಡಿದರು.
ಬಸವ ಪೂರ್ವ ಯುಗದಿಂದಲೂ ವೀರಶೈವ ಧರ್ಮದ ತತ್ವ, ಸಿದ್ಧಾಂತ, ಸಂಸ್ಕೃತಿ ಮತ್ತು ಆಚಾರ್ಯ ಗುರು ಪರಂಪರೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ಮುನ್ನಡೆಸಿಕೊಂಡು ಬಂದಿರುವ ಅಮ್ಮಿನಬಾವಿ ಪಂಚಗೃಹ ಹಿರೇಮಠಕ್ಕೆ ಅಪೂರ್ವವಾದ ಚಾರಿತ್ರಿಕ ಘನತೆ ಇದೆ. ಗುರುಕೃಪಾ ಕಾರುಣ್ಯದಲ್ಲಿ ಮಹಾಶಕ್ತಿ ಸಂಚಯವೇ ಇದೆ. ಇದಕ್ಕೆ ಪೂರಕವಾಗಿ ಗುರುಗಳಾದ ಶಾಂತಲಿಂಗ ಶಿವಾಚಾರ್ಯರ ತಪೋಶಕ್ತಿ ನಮ್ಮನ್ನು ಕೈಹಿಡಿದು ಮುನ್ನಡೆಸಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಬೈಲಹೊಂಗಲ ತಾಲೂಕು ದೊಡವಾಡ ಹಿರೇಮಠದ ಶ್ರೀಜಡೆಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಆರಂಭದಿಂದಲೂ ಹೆಸರಿಗೆ ತಕ್ಕಂತೆ ಶಾಂತಚಿತ್ತ ಸ್ವಭಾವವನ್ನು ಮೈಗೂಡಿಸಿಕೊಂಡು ಎಂದೂ ಎಲ್ಲಿಯೂ ಯಾವುದೇ ರಾಜಕೀಯ ಸೋಂಕನ್ನು ಅಂಟಿಸಿಕೊಳ್ಳದೇ ಕೇವಲ ಸಂಸ್ಕಾರ ಸಂಪನ್ನತೆಯ ಧರ್ಮ ಜಾಗೃತಿಯನ್ನು ಭಕ್ತರಲ್ಲಿ ಮೂಡಿಸಲು ತಮ್ಮ ಅಖಂಡ ಬದುಕನ್ನೇ ಸಮರ್ಪಿಸಿಕೊಂಡ ಕೀರ್ತಿ ಶಾಂತಲಿಂಗ ಶಿವಾಚಾರ್ಯ ಶ್ರೀಗಳಿಗೆ ಸಲ್ಲುತ್ತದೆ ಎಂದರು.
ತುಲಾಭಾರ ಸ್ವೀಕರಿಸಿ ಆಶೀರ್ವಚನ ನೀಡಿದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯರು, ಮಕ್ಕಳಲ್ಲಿ ಸತ್ಯ-ಶುದ್ಧ ಸಂಸ್ಕಾರ, ದೇಶಭಕ್ತಿ, ಸಮಾಜಮುಖಿ ಚಿಂತನೆ, ಗುರು-ಹಿರಿಯರಲ್ಲಿ ಭಕ್ತಿ, ಧರ್ಮನಿಷ್ಠೆ, ಸಹೋದರ ಭಾವದ ಸಮಷ್ಟಿ ಪ್ರಜ್ಞೆ ಬೆಳೆದು ಬಂದಾಗಲೇ ಎಲ್ಲರೂ ಬಯಸುವ ಜನಪರವಾದ ಉತ್ತಮ ಸಮಾಜ ನಿರ್ವಣವಾಗುತ್ತದೆ. ಮಠಗಳ ಮೇಲಿರುವ ಬಹುಮುಖ್ಯ ಜವಾಬ್ದಾರಿಯೂ ಇದೇ ಆಗಿದೆ ಎಂದರು.
ತುಲಾಭಾರ ಸೇವೆ: ಶೋಭಾ ಯರಗಂಬಳಿಮಠ, ಪ್ರೇಮಾ ಗುಡಿ(ರುದ್ರಾಪೂರ), ಪವನಕುಮಾರ ಕುಸೂಗಲ್, ಬಿ.ಸಿ. ಕೊಳ್ಳಿ, ಸೋಮಲಿಂಗಯ್ಯ ಗುಡ್ಡದಮಠ, ಸುನೀಲ ಗುಡಿ, ಹಾರೋಬೆಳವಡಿಯ ವಿರೂಪಾಕ್ಷಪ್ಪ ಜಕ್ಕಣ್ಣವರ, ರಾಮಣ್ಣ ಜಕ್ಕಣ್ಣವರ, ಬಸವರಾಜ ಉಗರಗೋಳ, ಸಂಗಯ್ಯ ಓದಿಸುಮಠ, ಗೋವಾ ರಾಜ್ಯದ ದೀಪಕ ಗೊಡಚಿ, ವಿಜಯನಗರ ಜಿಲ್ಲೆ ಹೊಳಗುಂದಿ ಮತ್ತೂರುಮಠದ ಗುರುಬಸವರಾಜ ಹಾಗೂ ಮರೇವಾಡದ ಬಸಪ್ಪ ಸಲಕಿ ಅವರು ಸಕ್ಕರೆ, ಬೆಲ್ಲ, ರವೆ, ತೆಂಗಿನಕಾಯಿ ಮತ್ತು ಅಕ್ಕಿಯ 12 ತುಲಾಭಾರ ಸೇವೆಗಳನ್ನು ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯಕ್ಕೆ ಸಮರ್ಪಿಸಿ ಆಶೀರ್ವಾದ ಪಡೆದರು.
ಕಾರ್ಯಕ್ರಮದಲ್ಲಿ ಅಮ್ಮಿನಬಾವಿ ಪ್ರಾಥಮಿಕ ಪತ್ತಿನ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುನೀಲ ಗುಡಿ, ತಾ.ಪಂ.ಮಾಜಿ ಸದಸ್ಯ ಸುರೇಂದ್ರ ದೇಸಾಯಿ ಹಾಗೂ ’ಜೀವನ ಶಿಕ್ಷಣ’ ಮಾಸಪತ್ರಿಕೆಯ ನಿವೃತ್ತ ಸಂಪಾದಕ ಡಾ. ಗುರುಮೂರ್ತಿ ಯರಗಂಬಳಿಮಠ ಮಾತನಾಡಿದರು.
ಉಡಿ ತುಂಬುವ ಕಾರ್ಯಕ್ರಮ: ಎಲ್ಲಾ ಪೂಜ್ಯ ಶ್ರೀಗಳ ಆಶೀರ್ವಾದದೊಂದಿಗೆ ಸರ್ಕಾರದ ಆರೋಗ್ಯ ಇಲಾಖೆ ನಿವೃತ್ತ ನೌಕರರಾದ ಶೋಭಾ ಯರಗಂಬಳಿಮಠ ಅವರು ಶಕ್ತಿಮಾತೆಯ ಸ್ಮರಣೆಯಲ್ಲಿ ಮಳೆ-ಬೆಳೆಗಾಗಿ ಪ್ರಾರ್ಥಿಸಿ 111 ಮುತೆôದೆಯರಿಗೆ ಶಾಸ್ತ್ರೋಕ್ತವಾಗಿ ಉಡಿ ತುಂಬಿದರು.
ಶಿವಾನಂದ ತಡಕೋಡ ಸ್ವಾಗತಿಸಿದರು. ವಿನಾಯಕ ಹಿರೇಮಠ ವಂದಿಸಿದರು. ಹುಬ್ಬಳ್ಳಿ-ಧಾರವಾಡ ಅವಳಿ ಮಹಾನಗರ ಸೇರಿದಂತೆ ಅಮ್ಮಿನಬಾವಿ, ಮರೇವಾಡ, ಕರಡಿಗುಡ್ಡ, ಹಾರೋಬೆಳವಡಿ, ಕೊಟಗೊಂಡಹುಣಸಿ, ಉಡಿಕೇರಿ, ದೊಡವಾಡ, ಕೌಲಗೇರಿ ಗ್ರಾಮಗಳ ಭಕ್ತಗಣ ಈ ಸಮಾರಂಭದಲ್ಲಿ ಪಾಲ್ಗೊಂಡು ಶ್ರೀಗಳಿಗೆ ಭಕ್ತಿಯ ಗೌರವ ಸಮರ್ಪಣೆ ಮಾಡಿ ಆಶೀರ್ವಾದ ಪಡೆದರು. ದಿ.ಬಸಯ್ಯ ಗುಡಿ ಅವರ ಸ್ಮರಣಾರ್ಥ ಅಬಕಾರಿ ಸಿಪಿಐ ಅಮೃತ ಗುಡಿ ಭಕ್ತ ಸಮೂಹಕ್ಕೆ ದಾಸೋಹ ಸೇವೆಸಲ್ಲಿಸಿದರು. ನಾಗರಾಜ ಕಾಡಸಿದ್ದಣ್ಣವರ ಹಾಗೂ ಮಡಿವಾಳಯ್ಯ ಶಹಪೂರಮಠ ಭಕ್ತಿಸಂಗೀತ ಪ್ರಸ್ತುತಪಡಿಸಿದರು.