ಜಿಲ್ಲೆ

ಹಡಪದ ಅಪ್ಪಣ್ಣನ ಬದುಕು ಆದರ್ಶ

ಮುಂಡರಗಿ: ಹನ್ನೆರಡನೇ ಶತಮಾನದಲ್ಲಿ ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿ ಬದಲಾವಣೆ ತರುವ ಕಾರ್ಯದಲ್ಲಿ ಅನೇಕ ಶರಣರು ಬಸವಣ್ಣನವರ ಜತೆಗಿದ್ದರು. ಅದರಲ್ಲಿ ಬಹಳ ಶ್ರೇಷ್ಠ ಕಾಯಕದ ಮೂಲಕ ಬಸವಣ್ಣನವರ ಮನಗೆದ್ದು ಬಸವ ಪ್ರಿಯವಾದವರು ಹಡಪದ ಅಪ್ಪಣ್ಣನವರು. ಅವರ ಜೀವನ ಆದರ್ಶಮಯವಾಗಿದೆ ಎಂದು ಶಿಕ್ಷಕಿ ಶಕುಂತಲಾ ಹಂಪಿಮಠ ಹೇಳಿದರು.

ಪಟ್ಟಣದಲ್ಲಿ ತಾಲೂಕು ಕಸಾಪ, ಶಸಾಪ ಹಾಗೂ ಚೈತನ್ಯಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶರಣ ಚಿಂತನ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ.ವಿ.ಕೆ. ಕೋಳೂರಮಠ ಮಾತನಾಡಿ, ಶರಣರ ವಿಚಾರಗಳನ್ನು, ಅವರು ನಡೆಸಿದ ಜೀವನದ ಆದರ್ಶ, ತತ್ವಗಳನ್ನು, ನಡೆಯನ್ನು ಎಲ್ಲರೂ ಪಾಲಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಸಾಪ ತಾಲೂಕಾಧ್ಯಕ್ಷ ಡಾ. ಸಂತೋಷ ಹಿರೇಮಠ ಮಾತನಾಡಿ, ಶರಣರ ಬದುಕು ಶ್ರೇಷ್ಠವಾದದ್ದು. ವಚನಗಳ ಮೂಲಕ ಸಮಾಜಕ್ಕೆ ಅರಿವು ಮೂಡಿಸುತ್ತಿದ್ದರು ಎಂದರು. ಕಸಾಪ, ಶಸಾಪ ಹಾಗೂ ಚೈತನ್ಯ ಶಿಕ್ಷಣ ಸಂಸ್ಥೆ ಪದಾಧಿಕಾರಿಗಳು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ತೇಜಸ್ವಿನಿ, ಮಧುಶ್ರೀ, ತನುಶ್ರೀ, ಮೇಘಾ ಪ್ರಾರ್ಥಿಸಿದರು. ಕಸಾಪ ಗೌರವ ಕಾರ್ಯದರ್ಶಿ ಮಂಜುನಾಥ ಮುಧೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಗೌರವ ಕಾರ್ಯದರ್ಶಿ ವೀಣಾ ಪಾಟೀಲ ಹಾಗೂ ಕಸಾಪ ತಾಲೂಕಾಧ್ಯಕ್ಷ ಎಂ.ಜಿ. ಗಚ್ಚಣ್ಣವರ ಕಾರ್ಯಕ್ರಮ ನಿರ್ವಹಿಸಿದರು.