ಬೀರೂರು ಪುರಸಭೆಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಮುಖ್ಯಾಧಿಕಾರಿ ಜಿ.ಪ್ರಕಾಶ್, ದೀಪಕ್, ಗಿರಿರಾಜ್, ಕರಿಯಪ್ಪ, ಬಸವರಾಜ್ ಇತರರಿದ್ದರು. 
ಜಿಲ್ಲೆ

ಸಾಮಾನ್ಯ ಜನರ ಬಾಳಿನ ಶಕ್ತಿ

ಬೀರೂರು: ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ ರಾಮ್ ಜಾತಿ ಕುಲುಮೆಯಲ್ಲಿ ಬೆಂದರೂ ಸಾಮಾನ್ಯ ಜನರ ಬಾಳಿಗೆ ಬೆಳಕಾದ ಎರಡು ಶಕ್ತಿ. ವಿಶ್ವಕ್ಕೆ ಮಾದರಿ ಸಂವಿಧಾನ ರಚಿಸಿ ಹಿಂದುಳಿದವರ ಪಾಲಿಗೆ ದನಿಯಾದವರು ಅಂಬೇಡ್ಕರ್ ಎಂದು ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್ ಹೇಳಿದರು.

ಪುರಸಭೆಯಲ್ಲಿ ಭಾನುವಾರ ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ ರಾಮ್ ಜಯಂತಿ ಆಚರಣೆಯಲ್ಲಿ ಮಾತನಾಡಿ, ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಮಹಾಪುರುಷರ ಜನ್ಮದಿನವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಇವರ ಜಯಂತಿ ಒಂದು ಸಮಾಜಕ್ಕೆ ಸೀಮಿತಗೊಳಿಸಬಾರದು ಎಂದರು.
ನನ್ನ ಜಾತಿಯೇ ಶ್ರೇಷ್ಠ, ನನ್ನ ಧರ್ಮವೇ ಶ್ರೇಷ್ಠ ಎನ್ನುವವನ್ನು ನೋಡಿ ಕೋಪ ಮಾಡಿಕೊಳ್ಳಬೇಡ. ಏಕೆಂದರೆ ಅವನು ಮಾನಸಿಕ ರೋಗಿ ಆಗಿರುತ್ತಾನೆ ಎಂದು ಅಂಬೇಡ್ಕರ್ ಹೇಳಿದ್ದರು ಎಂದರು.
ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಲಕ್ಷ್ಮಣ್ ಮಾತನಾಡಿ, ಎಲ್ಲ ನಾಗರಿಕರಿಗೂ ಸಮಾನತೆ ಕಲ್ಪನೆ ಕಟ್ಟಿಕೊಟ್ಟ ಮತ್ತು ಭಾರತವನ್ನು ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಿದ ಸಂವಿಧಾನದ ವಾಸ್ತುಶಿಲ್ಪಿ ಅಂಬೇಡ್ಕರ್ ಎಂದು ಬಣ್ಣಿಸಿದರು.
ಕಂದಾಯ ಅಧಿಕಾರಿ ದೀಪಕ್, ಗಿರಿರಾಜ್, ಪ್ರಸಾದ್, ಬಸವರಾಜ್, ಜಯಮ್ಮ, ಕರಿಯಪ್ಪ ಹಾಗೂ ಸಿಬ್ಬಂದಿ ಇದ್ದರು.