ಜಿಲ್ಲೆ

ಜ್ಞಾನದ ಕಂಪು ಪಸರಿಸುತ್ತಿದೆ ಗ್ರಂಥಾಲಯ !

ಅವಿನಾಶ್ ಜೈನಹಳ್ಳಿ ಮೈಸೂರು
ಅರಮನೆ ನಗರಿಯ ಸಾಹಿತ್ಯಾಸಕ್ತರಿಗೆ ಸದಾ ‘ಜ್ಞಾನ’ದ ಕಂಪು ಪಸರಿಸುತ್ತಿರುವ ನಗರ ಕೇಂದ್ರ ಗ್ರಂಥಾಲಯ ನಿರುದ್ಯೋಗಿಗಳಿಗೆ ಉದ್ಯೋಗ ಮಾರ್ಗದರ್ಶಿ ಆಗಿದ್ದು, ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಪ್ರತಿಯೊಬ್ಬರಿಗೂ ಸಾಹಿತ್ಯ ರಸವನ್ನು ಹಂಚಲು ಮೈಸೂರು ಮಹಾರಾಜರು 1915ರ ಅಕ್ಟೋಬರ್ 15ರಂದು ಸ್ಥಾಪಿಸಿದ ನಗರ ಕೇಂದ್ರ ಗ್ರಂಥಾಲಯ ಈಗ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿರುವ ಅಭ್ಯರ್ಥಿಗಳಿಗೆ ಮಾಹಿತಿ ಭಂಡಾರವಾಗಿರುವ ಜತೆಗೆ ಉಚಿತವಾಗಿ ಅಧ್ಯಯನ ಸಾಮಗ್ರಿಗಳನ್ನೂ ಒದಗಿಸುತ್ತಿದೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಕೃಪೆ ಮತ್ತು ಸರ್ ಎಂ.ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅವರ ದೂರದೃಷ್ಟಿಯೇ ಈ ಕೇಂದ್ರ ಗ್ರಂಥಾಲಯ. ಈ ಗ್ರಂಥಾಲಯ ಸ್ಥಾಪನೆಗೂ ಹಿಂದೆ ಮಹಾರಾಜರು ಮತ್ತು ದಿವಾನರಿಗೆ ಮಾತ್ರ ಖಾಸಗಿ ಗ್ರಂಥಾಲಯಗಳು, ವಾಚನಾಲಯಗಳು ಇದ್ದವು. ಈ ಗ್ರಂಥಾಲಯ ಆರಂಭವಾದ ಮೇಲೆ ಸಾರ್ವಜನಿಕರೆಲ್ಲರೂ ಈ ಸೇವೆ ಪಡೆಯುವಂತಾಯಿತು. ನಂತರ 1965ರಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಗ್ರಂಥಾಲಯವನ್ನು ವಹಿಸಿಕೊಂಡಿತು.

ಇಲ್ಲಿಯವರೆಗೆ ಪುಸ್ತಕ, ವೃತ್ತಪತ್ರಿಕೆ, ಮಾಸ ಪತ್ರಿಕೆ ಓದಲು ಸಾರ್ವಜನಿಕರು ಇಲ್ಲಿಗೆ ಬರುತ್ತಿದ್ದರು. ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಕ್ಷೇತ್ರ ಕಾರ್ಯಕ್ಕೆ ಈ ಗ್ರಂಥಾಲಯವನ್ನೇ ಅವಲಂಬಿಸಿದ್ದರು. ಆದರೆ ಇದೀಗ ಕೇಂದ್ರ ಗ್ರಂಥಾಲಯ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳಿಗೆ ಸ್ವಯಂ ಅಧ್ಯಯನಕ್ಕೂ ಅವಕಾಶ ಕಲ್ಪಿಸಿದೆ. ನಿತ್ಯ ಸಾವಿರಾರು ಅಭ್ಯರ್ಥಿಗಳು ಗ್ರಂಥಾಲಯದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ಸಯ್ಯಜಿರಾವ್ ರಸ್ತೆಯಲ್ಲಿನ ನಗರ ಕೇಂದ್ರ ಗ್ರಂಥಾಲಯದ ಹಳೆಯ ಕಟ್ಟಡ ಹಾಗೂ ಪೀಪಲ್ಸ್ ಪಾರ್ಕ್‌ನಲ್ಲಿರುವ ಹೊಸ ಗ್ರಂಥಾಲಯದಲ್ಲಿ ಹೆಚ್ಚು ಜನ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ. ಎರಡು ಕಡೆಯೂ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಪ್ರತ್ಯೇಕ ಕೊಠಡಿ ಮಾಡಲಾಗಿದ್ದು, ದಿನಕ್ಕೆ 800 ರಿಂದ 1 ಸಾವಿರ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿಕೊಂಡು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದು ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಡಾ.ಬಿ.ಮಂಜುನಾಥ್ ‘ವಿಜಯವಾಣಿ’ಗೆ ಮಾಹಿತಿ ನೀಡಿದರು.

ಕೆಎಎಸ್, ಐಎಎಸ್ ತರಬೇತಿ

ಪೀಪಲ್ಸ್ ಪಾರ್ಕ್‌ನಲ್ಲಿರುವ ಹೊಸ ಗ್ರಂಥಾಲಯದಲ್ಲಿ ಗ್ರಂಥಾಲಯ ಇಲಾಖೆ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳಿಗೆ ಐಎಎಸ್, ಕೆಎಎಸ್ ಸೇರಿದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ಎರಡು ಬ್ಯಾಚ್‌ಗೆ ಐಎಎಸ್, ಕೆಎಎಸ್‌ನ ತರಬೇತಿ ಪೂರ್ಣಗೊಂಡಿದೆ. ಮತ್ತೆ ಲೋಕಸಭಾ ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ 3ನೇ ಬ್ಯಾಚ್ ಐಎಎಸ್, ಕೆಎಎಸ್ ಪರೀಕ್ಷೆಗಳಿಗೆ ತರಗತಿ ಆರಂಭಿಸಲಾಗುತ್ತದೆ. ಜಿಲ್ಲಾಧಿಕಾರಿ ಸೇರಿದಂತೆ ದೊಡ್ಡ ದೊಡ್ಡ ಅಧಿಕಾರಿಗಳು, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ. ಎಲ್ಲರಿಗೂ ಉಚಿತ ತರಬೇತಿ ನೀಡಲಾಗುತ್ತದೆ ಎಂದ ಡಾ.ಬಿ. ಮಂಜುನಾಥ್ ತಿಳಿಸಿದರು.

ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಪಟ್ಟ ಮಾಹಿತಿ ಇದೆ

ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಪಟ್ಟ ಆಧ್ಯಯನ ಸಾಮಗ್ರಿಗಳನ್ನು ಇಲ್ಲಿ ಇಡಲಾಗಿದೆ. ಐಎಎಸ್, ಐಪಿಎಸ್, ಕೆಎಎಸ್, ಪಿಡಿಒ, ಎ್ಡಿಎ, ಎಸ್‌ಡಿಎ, ಎಸ್‌ಎಸ್‌ಸಿ, ಶಿಕ್ಷಕ, ಉಪನ್ಯಾಸ, ಎಸ್‌ಐ, ಪೇದೆ ಹುದ್ದೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಪಟ್ಟ ಮಾಹಿತಿ, ಪುಸ್ತಕ, ಗೆಜೆಟ್ ಲಭ್ಯವಿವೆ. ಆನ್‌ಲೈನ್ ಓಪ್ಯಾಕ್ ತಾಣವಿದೆ. ಇದರಲ್ಲಿ ನಿಮಗೆ ಬೇಕಾದ ಪುಸ್ತಕ, ಮಾಹಿತಿಯ ಹೆಸರು, ವಿವರಣೆ ನೀಡಿದರೆ ಅದು ಯಾವ ರ‌್ಯಾಕ್‌ನಲ್ಲಿ ಸಿಗುತ್ತದೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಇದನ್ನು ಬಳಸಿಕೊಂಡು ವಿದ್ಯಾರ್ಥಿಗಳು ಸುಲಭವಾಗಿ ಅಧ್ಯಯನ ಮಾಡಬಹುದು. ಗ್ರಂಥಾಲಯದಲ್ಲಿ ಪುಸ್ತಕ ತೆಗೆದುಕೊಂಡು ಹೋಗಲು ಸದಸ್ಯತ್ವ ಚೀಟಿ ಬೇಕು. ಆದರೆ, ಇಲ್ಲಿ ಓದಲು ಯಾವುದೇ ಕಾರ್ಡ್ ಅವಶ್ಯಕತೆ ಇಲ್ಲ. ಈ ಕೊಠಡಿಯಲ್ಲಿ ಪ್ರತಿದಿನ ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳಿಗೆ ಅನುಕೂಲ

ನಗರದಲ್ಲಿರುವ ಎಲ್ಲ ಶಾಖಾ ಗ್ರಂಥಾಲಯಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳಿಗೆ ನೆರವಾಗುತ್ತಿವೆ. ಕುವೆಂಪುನಗರ, ಸರಸ್ವತಿಪುರಂ, ಸಿದ್ಧಾರ್ಥನಗರ, ಲಕ್ಷ್ಮೀಪುರಂ, ಜಯಲಕ್ಷ್ಮೀಪುರಂ, ಜೆ.ಪಿ.ನಗರ, ಅಶೋಕಪುರಂ, ವಿಶ್ವೇಶ್ವರನಗರ, ಬಸವೇಶ್ವರ ರಸ್ತೆ, ಜಯನಗರ, ಸುಭಾಷ್‌ನಗರ, ಉದಯಗಿರಿ, ಹೆಬ್ಬಾಳ, ಗಾಂಧಿನಗರ, ಪಿ.ಕೆ.ಸ್ಯಾನಿಟೋರಿಯಂ, ವಿವೇಕಾನಂದ ನಗರ, ರಾಮಕೃಷ್ಣನಗರ ಸೇರಿದಂತೆ ನಗರದ ಎಲ್ಲ ಶಾಖಾ ಗ್ರಂಥಾಲಯಗಳ ಮೂಲಕವು ಗ್ರಂಥಾಲಯ ಇಲಾಖೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳಿಗೆ ಸೇವೆ ನೀಡುತ್ತಿದೆ. ಅಂತೆಯೇ, ಈ ಎಲ್ಲ ಶಾಖೆಗಳಲ್ಲೂ ನಿತ್ಯ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳು ಅನುಕೂಲ ಪಡೆಯುತ್ತಿದ್ದಾರೆ. ಶಾಖಾ ಗ್ರಂಥಾಲಯಗಳಿಗೆ ಭೇಟಿ ನೀಡಿ ಪತ್ರಿಕೆಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಪಟ್ಟ ಆಧ್ಯಯನ ಸಾಮಗ್ರಿಗಳನ್ನು ಓದುತ್ತಿದ್ದಾರೆ.

ಪೀಪಲ್ಸ್ ಪಾರ್ಕ್‌ನಲ್ಲಿರುವ ಹೊಸ ಗ್ರಂಥಾಲಯದಲ್ಲಿ ಗ್ರಂಥಾಲಯ ಇಲಾಖೆ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳಿಗೆ ಐಎಎಸ್, ಕೆಎಎಸ್ ಸೇರಿದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ. *ಲೋಕಸಭಾ ಚುನಾವಣಾ ನೀತಿ ಸಂಹಿತೆ ಪೂರ್ಣಗೊಂಡ ಬಳಿಕ ಮೂರನೇ ಬ್ಯಾಚ್ ಐಎಎಸ್, ಕೆಎಎಸ್ ಪರೀಕ್ಷೆಗಳಿಗೆ ತರಗತಿ ಆರಂಭಿಸಲಾಗುತ್ತದೆ. ಉಚಿತವಾಗಿ ಅಧ್ಯಯನ ಸಾಮಗ್ರಿಗಳನ್ನೂ ಒದಗಿಸುತ್ತಿದೆ. ದಿನಕ್ಕೆ ಸಾವಿರಾರು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿಕೊಂಡು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.ಡಾ.ಬಿ. ಮಂಜುನಾಥ್, ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ