ಹುಲ್ಲಹಳ್ಳಿ/ನಂಜನಗೂಡು : ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಹೋಬಳಿಯ ಯಾಲಹಳ್ಳಿ ಗ್ರಾಮದಲ್ಲಿ ಭಾನುವಾರ ವ್ಯಕ್ತಿಯ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.
ಗ್ರಾಮದ ಪಾಳು ಮನೆಯಲ್ಲಿ ಈ ಚಿರತೆ ಸೇರಿಕೊಂಡಿತ್ತು. ಭಾನುವಾರ ಬೆಳಗ್ಗೆ ಮನೆಯ ಸಮೀಪ ಜಯಕುಮಾರ್ ಎಂಬುವರು ನಡೆದುಕೊಂಡು ಹೋಗುತ್ತಿದ್ದಾಗ ಚಿರತೆ ದಾಳಿ ಮಾಡಿದೆ. ಗಾಬರಿಗೊಂಡ ಗ್ರಾಮಸ್ಥರು ಚಿರತೆಯ ಮೇಲೆ ಕಲ್ಲು ಹಾಗೂ ದೊಣ್ಣೆಯನ್ನು ಬೀಸಿದ್ದರಿಂದ ಗಾಬರಿಗೊಂಡು ಮತ್ತೆ ಪಾಳು ಮನೆಗೆ ಹೋಗಿ ಸೇರಿಕೊಂಡಿತ್ತು. ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದರು.
ಸ್ಥಳಕ್ಕಾಗಮಿಸಿದ ವಲಯ ಅರಣ್ಯಾಧಿಕಾರಿ ನಿತೀನ್ ಕುಮಾರ್, ಚಿರತೆ ಕಾರ್ಯಪಡೆಯ ಸಂತೋಷ್ ಹೂಗಾರ್ ನೇತೃತ್ವದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಮನೆಯೊಳಗೆ ಅವಿತಿದ್ದ ಚಿರತೆಯನ್ನು ಪತ್ತೆಹಚ್ಚಿದ್ದಾರೆ ನಂತರ ಪಶುವೈಧ್ಯಾಧಿಕಾರಿ ಡಾ.ರೋಷನ್ ಚಿರತೆಗೆ ಅರವಳಿಕೆ ಮದ್ದು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಆ ನಂತರ ಬಲೆಹಾಕಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಆರ್‌ಎಫ್‌ಒ ನಿತೀನ್ ಕುಮಾರ್ ಸುದ್ದಿಗಾರರಿಗೆ ಮಾಹಿತಿ ನೀಡಿ, ಇದು 7ವರ್ಷದ ಗಂಡು ಚಿರತೆಯಾಗಿದ್ದು, ಮೈಸೂರಿನ ಕೂರ್ಗಳ್ಳಿಯಲ್ಲಿರುವ ವನ್ಯಧಾಮಕ್ಕೆ ಕಳುಹಿಸಿಕೊಡಲಾಗಿದೆ ಎಂದರು. ಗಾಯಗೊಂಡಿದ್ದ ಜಯಕುಮಾರ್ ಅವರು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.