ಶ್ರೀರಂಗಪಟ್ಟಣದ ಕನಕ ಭವನದಲ್ಲಿ ಬುಧವಾರ ಪಟ್ಟಣ ಹಾಗೂ ಗಂಜಾಂನ ಮುಸ್ಲಿಂ ಮುಖಂಡರು ಶಾಸಕ ರಮೇಶ ಬಂಡಿಸಿದ್ದೇಗೌಡ ಅವರ ವಿರುದ್ಧ ಎದ್ದಿರುವ ಆರೋಪವನ್ನು ಸಾಮೂಹಿಕವಾಗಿ ತಿರಸ್ಕರಿಸಿ ಅವರಿಗೆ ಬೆಂಬಲ ವ್ಯಕ್ತಪಡಿಸಿದರು. ಮುಖಂಡರಾದ ಇಮ್ರಾನ್, ಅನ್ಸರ್, ನಜೀರ್ ಅಹ್ಮದ್, ಅಜೀಜ್ ಖಾನ್, ಆಟೋ ಅಕ್ರಮ್, ಸೈಯದ್ ಜುಲ್ಫಿಕರ್, ಸನಾ ಉಲ್ಲಾ, ಹಾಜಿ ಅಪ್ಸರ್ ಪಾಷ, ಸದ್ದಾಂ ಇತರರಿದ್ದರು. 
ಜಿಲ್ಲೆ

ಶಾಸಕರು ಯಾರನ್ನೂ ಹೀಯಾಳಿಸಿಲ್ಲ

ವಸಂತಕುಮಾರ್ ಬಿ

 ಶ್ರೀರಂಗಪಟ್ಟಣ: ಕ್ಷೇತ್ರದ ಶಾಸಕ ರಮೇಶ ಬಂಡಿಸಿದ್ದೇಗೌಡ ಜನಪರ ಹಾಗೂ ಜನಾನುರಾಗಿ ನಾಯಕರಾಗಿದ್ದು, ಅವರು ಗ್ರಾಮೀಣ ಶೈಲಿಯ ಆಡು ಭಾಷೆ ಬಳಸಿ ಮಾತನಾಡಿದ್ದಾರೆಯೇ ಹೊರತು ಮುಸ್ಲಿಂ ಸಮುದಾಯವನ್ನು ಹೀಯಾಳಿಸಿಲ್ಲ ಅಥವಾ ನಿಂದಿಸಿಲ್ಲ ಎಂದು ಮುಸ್ಲಿಂ ಮುಖಂಡರು ಸಾಮೂಹಿಕವಾಗಿ ಸ್ಪಷ್ಟನೆ ನೀಡಿದರು.

ಪಟ್ಟಣದ ಕನಕ ಭವನದಲ್ಲಿ ಬುಧವಾರ ಸೇರಿದ ಪಟ್ಟಣ-ಗಂಜಾಂ ವ್ಯಾಪ್ತಿಯ ಮುಸ್ಲಿಂ ಮುಖಂಡರು, ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅವರ ಹೇಳಿಕೆಯೊಂದರ ವೈರಲ್ ವಿಡಿಯೋ ಸಂಬಂಧ ಎದ್ದಿರುವ ಆರೋಪವನ್ನು ಒಮ್ಮತವಾಗಿ ತಿರಸ್ಕರಿಸಿ ಅವರನ್ನು ಬೆಂಬಲಿಸಿ ಮಾತನಾಡಿದರು.

ಪುರಸಭೆ ಮಾಜಿ ಸದಸ್ಯ ಅಬ್ದುಲ್ ರವೂಫ್ ಮಾತನಾಡಿ, ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ರಮೇಶ ಬಂಡಿಸಿದ್ದೇಗೌಡ ಹಾಗೂ ಅವರ ಕುಟುಂಬ ಬರೋಬ್ಬರಿ 40 ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿ ಎಲ್ಲ ಸಮುದಾಯದ ಜನರ ಬೆನ್ನಿಗೆ ನಿಂತಿದೆ. ಜತೆಗೆ ಅವರ ವಿಶ್ವಾಸದೊಂದಿಗೆ ಮುನ್ನಡೆಯುತ್ತಿರುವ ನಾಯಕ ಎನಿಸಿಕೊಂಡಿದ್ದಾರೆ. ಅಲ್ಲದೆ ಇಸ್ಲಾಂಗೆ ಸಂಬಂಧಿಸಿದ ಯಾವುದೇ ಧಾರ್ಮಿಕ ಆಚರಣೆಗಳಲ್ಲಿ ಮನೆಯ ಮಗನಂತೆ ನಮ್ಮೊಡನೆ ಭಾಗಿಯಾಗಿ ಸಂಸ್ಕೃತಿಗಳನ್ನು ಗೌರವಿಸಿ, ಎಲ್ಲರ ಕಷ್ಟಗಳಿಗೆ ನೆರವಾಗಿ ಸರ್ವರ ಪ್ರೀತಿ ಗಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಮೇಶ ಬಂಡಿಸಿದ್ದೇಗೌಡ ಅವರ ನಡೆ, ನುಡಿ ಈ ಕ್ಷೇತ್ರದ ಜನರಿಗೆ ತಿಳಿದಿದ್ದು, ಯಾವುದೇ ಸಮಾಜ ಮತ್ತು ಸಮುದಾಯಕ್ಕೆ ಅವಮಾನಿಸುವ ದುರುದ್ದೇಶವನ್ನು ಅವರು ಹೊಂದಿಲ್ಲ ಹಾಗೂ ಮಾಡಿಲ್ಲ. ನಾವು ಜಾತ್ಯತೀತ ನಡೆ ಹೊಂದಿರುವ ಹಾಗೂ ಅಭಿವೃದ್ಧಿಗೆ ಪೂರಕವಾಗಿರುವ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರೊಂದಿಗೆ ಸದಾಕಾಲ ಜತೆಗಿರುತ್ತೇವೆ ಎಂದು ಸ್ಪಷ್ಟಪಡಿಸಿದರು.

ಮುಖಂಡ ಗಂಜಾಂ ಸಲೀಂ ಮಾತನಾಡಿ, ತಾಲೂಕಿನ ತರಿಪುರ ವ್ಯಾಪ್ತಿಯಲ್ಲಿ ಕೇಳಿ ಬಂದಿರುವ ಆರೋಪವೊಂದಕ್ಕೆ ಪ್ರತಿಕ್ರಿಯಿಸುವ ವೇಳೆ ಹಾಗೆ ಮಾತನಾಡಿದ್ದಾರೆ. ಅಲ್ಲಿ ಯಾವ ದುರುದ್ದೇಶ ಅವರಿಗಿಲ್ಲ. ಅಲ್ಲದೆ ಮೈಸೂರು ನಗರಕ್ಕೆ ಸಮೀಪದ ರೈತರು ಹಾಗೂ ಬಡಜನರಿಗೆ ಉಪಯೋಗವಾಗಬೇಕಾದ ಸರ್ಕಾರಿ ಜಮೀನನ್ನು ಮೈಸೂರಿನ ಪ್ರಭಾವಿ ವ್ಯಕ್ತಿಗಳು ಕಬಳಿಸಲು ಬೇರೆ ಬೇರೆ ಮಾರ್ಗದಲ್ಲಿ ಯತ್ನಿಸಿದ್ದಾರೆ ಎಂಬ ಮಾಹಿತಿಯಡಿ ಪ್ರಕರಣ ಕುರಿತಾಗಿ ಶಾಸಕರು ಅಧಿಕಾರಿಗಳಿಗೆ ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ ಹೊರತು ಇದಕ್ಕೆ ಅಪಾರ್ಥ ಕಲ್ಪಿಸಿ ಬೇರ‌್ಯಾವುದೇ ಲೇಪನ ಮಾಡಬಾರದು ಎಂದರು.

ಮುಖಂಡರಾದ ಇಮ್ರಾನ್, ಅನ್ಸರ್, ನಜೀರ್ ಅಹ್ಮದ್, ಅಜೀಜ್ ಖಾನ್, ಆಟೋ ಅಕ್ರಮ್, ಸೈಯದ್ ಜುಲ್ಫಿಕರ್, ಸನಾ ಉಲ್ಲಾ, ಹಾಜಿ ಅಪ್ಸರ್ ಪಾಷ, ಸದ್ದಾಂ ಇತರರಿದ್ದರು.