ಮಳವಳ್ಳಿ: ಕನ್ನಡ ಚಿತ್ರರಂಗದಲ್ಲಿ ಮೊದಲಿಗೆ ಸಾಮಾಜಿಕ ಚಲನಚಿತ್ರವನ್ನು ತೆರೆಗೆ ತಂದ ದಿಗ್ಗಜ ನಿರ್ದೇಶಕ ಎಚ್.ಎಲ್.ಎನ್. ಸಿಂಹ ಅವರು ಮೂಲತಃ ಮಳವಳ್ಳಿ ಸಮೀಪದ ಮಾರೇಹಳ್ಳಿ ಗ್ರಾಮದವರು ಎಂಬುದು ನಮ್ಮ ಹೆಮ್ಮೆ ಎಂದು ಡಾ. ರಾಜ್ ಕುಮಾರ್ ಕಲಾ ಸಂಘದ ಅಧ್ಯಕ್ಷ ದೊಡ್ಡಯ್ಯ ಹೇಳಿದರು.
ಪಟ್ಟಣ ಹೊರ ವಲಯದಲ್ಲಿರುವ ಮಾರೇಹಳ್ಳಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಎಚ್.ಎಲ್.ಎನ್.ಸಿಂಹ ಅವರ 121ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೇಡರ ಕಣ್ಣಪ್ಪ ಚಿತ್ರದ ಮೂಲಕ ಡಾ.ರಾಜ್ ಕುಮಾರ್ ಅವರನ್ನು ಮೊದಲಿಗೆ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಎಚ್.ಎಲ್.ಎನ್.ಸಿಂಹ ಅವರು ಜತೆಗೆ ಬಿ.ಆರ್.ಪಂತುಲು, ನರಸಿಂಹರಾಜು ಅವರಂತ ಪ್ರತಿಭಾನ್ವಿತ ಕಲಾವಿದರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಸಿಂಹ ಅವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.
ಭಾರತೀಯ ಚಿತ್ರರಂಗದಲ್ಲಿ ಮೊದಲಿಗೆ ಸಂಸಾರನೌಕೆ ಮೂಲಕ ಸಾಮಾಜಿಕ ಚಿತ್ರವನ್ನು ನಿರ್ದೇಶಿಸುವ ಮೂಲಕ ಕನ್ನಡ ಚಿತ್ರ ರಂಗದ ಭೀಷ್ಮ ಎಂದೇ ಹೆಸರಾಗಿದ್ದರು. ಇಂತಹ ಮಹಾನ್ ದಿಗ್ಗಜರ ಹೆಸರು ಕನ್ನಡ ಚಿತ್ರರಂಗದಲ್ಲಿ ಶಾಶ್ವತ ಉಳಿಯುವಂತಹ ಯಾವುದೇ ಸ್ಮಾರಕ, ಪ್ರಶಸ್ತಿಯನ್ನು ಸರ್ಕಾರ ಆರಂಭಿಸದಿರುವುದು ದುರದೃಷ್ಟಕರ. ಈಗಲಾದರೂ ಪ್ರಸ್ತುತ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕೆಂದು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಎಚ್.ಎಲ್.ಎನ್.ಸಿಂಹ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಿಹಿ ವಿತರಣೆ ಮಾಡಲಾಯಿತು.
ಪುರಸಭೆ ಸದಸ್ಯ ಬಸವರಾಜು, ಮಾಜಿ ಸದಸ್ಯ ಕಿರಣ್ ಶಂಕರ್, ರೋಟರಿ ಸಂಸ್ಥೆ ಸೋಮಶೇಖರ್, ಮುಖಂಡರಾದ ಮಾರ್ಕಂಡೇಯ, ಗಂಗರಾಜು ಇತರರು ಇದ್ದರು.