ಜಿಲ್ಲೆ

ಹಾನಗಲ್ಲನಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ

ಹಾನಗಲ್ಲ: ತಾಲೂಕಿನಲ್ಲಿ ಹಾಡಹಗಲೇ ಕೊಲೆ, ಹಲ್ಲೆಗಳಂತಹ ಅಪರಾಧ ಕೃತ್ಯಗಳು ಅವ್ಯಾಹತವಾಗಿ ನಡೆಯುತ್ತಿದ್ದು, ತಾಲೂಕು ಆಡಳಿತ ಹಾಗೂ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಸಾರ್ವಜನಿಕರು ಆತಂಕ, ಭಯದಲ್ಲಿ ಜೀವನ ನಡೆಸುವ ದುಸ್ಥಿತಿ ನಿರ್ವಣವಾಗಿರುವುದನ್ನು ಪ್ರತಿಭಟಿಸಿ, ಮೌನ ಮೆರವಣಿಗೆ ಮೂಲಕ ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ತಹಸೀಲ್ದಾರರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ತಾಲೂಕಿನ ಸಮಾನ ಮನಸ್ಕರ ವೇದಿಕೆಯಡಿ ಮಾನವ ಹಕ್ಕುಗಳ ಸಮಿತಿ, ರೋಶನಿ ಸೇವಾ ಟ್ರಸ್ಟ್, ಅಂಜುಮನ್ ಇಸ್ಲಾಂ ಸಂಸ್ಥೆ, ಪತ್ರಕರ್ತರ ಸಂಘ, ಪೋಟೋಗ್ರಾಫರ್ ಸಂಘ, ದಲಿತ ಸಂಘರ್ಷ ಸಮಿತಿಗಳು, ರೈತ, ಕನ್ನಡ ಪರ ಸಂಘಟನೆಗಳು, ಕನ್ನಡ ರಕ್ಷಣಾ ವೇದಿಕೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ, ಜನ ವೇದಿಕೆ, ಲೋಯಲಾ ವಿಕಾಸ ಕೇಂದ್ರ, ಬೀದಿಬದಿ ವ್ಯಾಪಾರಸ್ಥರ ಸಂಘ, ನ್ಯಾಯವಾದಿಗಳ ಸಂಘ, ಕಾರ್ವಿುಕರ ಸಂಘ, ಸ್ತ್ರೀ ಶಕ್ತಿ ಸಂಘಟನೆ, ಜಯ ಕರ್ನಾಟಕ ಸಂಘಟನೆ, ವಿವಿಧ ಪಕ್ಷಗಳ ಪ್ರತಿನಿಧಿಗಳು, ನಿವೃತ್ತ ನೌಕರರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಪಟ್ಟಣದ ಪ್ರವಾಸಿ ಮಂದಿರದಿಂದ ಮಹಾತ್ಮ ಗಾಂಧಿ ವೃತ್ತದವರೆಗೆ ಮೌನ ಮೆರವಣಿಗೆ ನಡೆಸಿ, ಮಾನವ ಸರಪಳಿ ನಿರ್ವಿುಸಿ ತಹಸೀಲ್ದಾರ್ ಎಸ್. ರೇಣುಕಮ್ಮ ಅವರಿಗೆ ಮನವಿ ಸಲ್ಲಿಸಿದರು.

ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತ ವ್ಯವಸ್ಥೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಕೈಮೀರುವ ಸ್ಥಿತಿಯಲ್ಲಿದೆ. ಕ್ರಮಕ್ಕೆ ಮುಂದಾಗದಿದ್ದರೆ ಸಾರ್ವಜನಿಕರು ಅನಿವಾರ್ಯವಾಗಿ ಬೀದಿಗಿಳಿದು ಉಗ್ರ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಸಂಘಟನೆಗಳು ನೀಡಿದವು. ಖಾನಾವಳಿ, ದಾಬಾ, ಗೂಡಂಗಡಿಗಳಲ್ಲಿ ಪರವಾನಗಿ ಇಲ್ಲದೆ ಮದ್ಯ ಮಾರಾಟ ತಡೆಯಲು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂಬ ಬೇಡಿಕೆಗಳನ್ನು ತಹಸೀಲ್ದಾರರಿಗೆ ಸಲ್ಲಿಸಿದರು.

ತಾಲೂಕು ಆಡಳಿತ ವಿಫಲ: ಕೊಲೆ, ಅತ್ಯಾಚಾರ, ಹಲ್ಲೆ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆದಿದ್ದು, ಅಪರಾಧಿಗಳಿಗೆ ಶಿಕ್ಷೆಯಾಗುತ್ತಿಲ್ಲ. ಅಮಾನವೀಯ ಕೃತ್ಯಗಳನ್ನು ತಡೆಯುವಲ್ಲಿ ತಾಲೂಕು ಆಡಳಿತ ವ್ಯವಸ್ಥೆ ವಿಫಲವಾಗಿದೆ. ಸಣ್ಣಪುಟ್ಟ ವಿಷಯಗಳು ಕೊಲೆಗೆ ಕಾರಣವಾಗುತ್ತಿವೆ. ಕಾನೂನು ವ್ಯವಸ್ಥೆ ಸರಿಪಡಿಸದಿದ್ದರೆ ತಾಲೂಕಿನಲ್ಲಿ ಸಭ್ಯ ನಾಗರಿಕರು ಬದುಕದಂತಹ ಸ್ಥಿತಿ ಎದುರಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ, ಅನಿತಾ ಡಿಸೋಜಾ, ಜೆರಾಲ್ಡ್ ಡಿಸೋಜಾ, ಜೇಸನ್, ಮಂಜುನಾಥ ಕರ್ಜಗಿ, ಫೈರೋಜ್ ಶಿರಬಡಗಿ, ಭೋಜರಾಜ ಕರೂದಿ, ಬಿ.ಆರ್. ಶೆಟ್ಟರ್, ಡಾ.ಎನ್.ಎಫ್. ಕಮ್ಮಾರ, ಎನ್.ಎಂ. ಪೂಜಾರ, ಕಲ್ಲಪ್ಪ ನಾಯ್ಕರ, ಶಾಂತಾ ಡಿಸೋಜಾ, ಮಹಲಿಂಗಪ್ಪ ಅಕ್ಕಿವಳ್ಳಿ, ಅಡಿವೆಪ್ಪ ಆಲದಕಟ್ಟಿ, ಎಸ್.ಎಂ. ಕೋತಂಬರಿ, ವಿನಾಯಕ ಕುರುಬರ, ಎಂ.ಎ. ನೆಗಳೂರ, ಸಿದ್ದು ಕಾಳಪ್ಪನವರ, ಸಿಕಂದರ್ ವಾಲಿಕಾರ, ರಾಮಚಂದ್ರ ಕಲ್ಲೇರ, ಮಂಜು ಯಳ್ಳೂರ, ಆರ್.ಬಿ. ಪಾಟೀಲ, ನೇತ್ರಾವತಿ ಮಂಡಿಗನಾಳ, ಎನ್.ಎಂ. ಯಶೋದಾ, ಶಂಭು ಲೆಕ್ಕದ, ಮಾರುತಿ ಹರಗಿ, ನಸರುಲ್ಲಾ ಉಪ್ಪುಣಸಿ, ಖ್ವಾಜಾಮೊಹಿದ್ದೀನ್ ಅಣ್ಣಿಗೇರಿ, ನೂರಾರು ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.