ಕುಶಾಲನಗರ: ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜು ಅರಸು ಅವರದ್ದು ವಿಶಿಷ್ಠವಾದ ವ್ಯಕ್ತಿತ್ವವಾದ್ದರಿಂದ ಸದಾ ಎಲ್ಲರ ಮನಸಿನಲ್ಲಿ ಉಳಿದಿದ್ದಾರೆ ಎಂದು ನಿವೃತ್ತ ಶಿಕ್ಷಕ ಉ.ರಾ.ನಾಗೇಶ್ ಅಭಿಪ್ರಾಯಪಟ್ಟರು.
ತಾಲೂಕು ಆಡಳಿತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮಂಗಳವಾರ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜು ಅರಸು ಅವರ 109 ನೇ ಜನ್ಮ ದಿನಾಚರಣೆಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಉಳುವವನಿಗೆ ಭೂಮಿ ಒಡೆಯ ಎಂಬ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತರುವ ಮೂಲಕ ಹಲವರ ಉತ್ತಮ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟ ಧೀಮಂತ ನಾಯಕ ಅರಸು. ಅಂತಹವರ ಹಾದಿಯನ್ನು ಹೃದಯದಿಂದ ಅರ್ಥ ಮಾಡಿಕೊಂಡಾಗ ಮಾತ್ರ ಅವರ ಸಾಧನೆಗಳನ್ನು ಬಹಳ ಎತ್ತರದಲ್ಲಿ ಕಾಣಬಹುದು ಎಂದರು.
ಬಡವರು, ಶೋಷಿತರು ಹಾಗೂ ಸ್ವರವಿಲ್ಲದ ಸಮುದಾಯದ ಪರವಾಗಿ ಅನೇಕ ಹೋರಾಟಗಳನ್ನು ರೂಪಿಸಿದ ಧೀಮಂತ ನಾಯಕ ಅರಸು. ಯಾವುದೇ ಅಬ್ಬರವಿಲ್ಲದೆ ಮೌನ ಕ್ರಾಂತಿ ಮೂಲಕ ಹೋರಾಟ ಮಾಡಿದ ಹಿರಿಮೆ ಅವರಿಗೆ ಸಲ್ಲುತ್ತದೆ. 1970 ರಿಂದ 1980 ರ ಅವಧಿಯನ್ನು ಅರಸು ಯುಗ ಎಂದು ಕರೆಯಲ್ಪಡುತ್ತದೆ ಎಂದು ಗುಣಗಾನ ಮಾಡಿದರು.
ತಾಲೂಕು ದಂಡಾಧಿಕಾರಿ ಕಿರಣ್ ಗೌರಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪುರಸಭೆ ಆರೋಗ್ಯಾಧಿಕಾರಿ ಉದಯ್, ನಾಮ ನಿರ್ದೇಶಿತ ಸದಸ್ಯ ಪ್ರಕಾಶ್, ಆರ್‌ಐ ಸಂತೋಷ್, ಆರೋಗ್ಯ ಇಲಾಖೆ ಅಧಿಕಾರಿ ಶಾಂತಿ ಇತರರು ಹಾಜರಿದ್ದರು.