ಜಿಲ್ಲೆ

ಸಿವಿಲ್​ ಇಂಜಿನಿಯರ್​ಗೆ ಕೆರೆ ಹೊಣೆ; ಗುತ್ತಿಗೆ ಆಧಾರದಲ್ಲಿ ನೇಮಕ

ಕೆರೆಗಳ ಅಭಿವೃದ್ಧಿಗೆ 11 ಸಿವಿಲ್ ಇಂಜಿನಿಯರ್​ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಬಿಬಿಎಂಪಿ ಮುಂದಾಗಿದೆ. ಶಾಶ್ವತ ಅಭಿವೃದ್ಧಿ ಯೋಜನೆಗಳಿಗೆ ತಾತ್ಕಾಲಿಕ ಇಂಜಿನಿಯರ್​ಗಳ ನೇಮಕ ಎಷ್ಟು ಸಮಂಜಸ ಎಂಬುದು ಜಿಜ್ಞಾಸೆಗೆ ಕಾರಣವಾಗಿದೆ.

ಬೆಂಗಳೂರು ಅಭಿವೃದ್ಧಿಗೆ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳು ಆಯಕಟ್ಟಿನ ಹುದ್ದೆಗಳಿಗೆ ತಾತ್ಕಾಲಿಕ ನೇಮಕಾತಿ ಮಾಡಿಕೊಂಡಿಲ್ಲ. ಆದರೆ, ಕೆರೆಗಳ ಅಭಿವೃದ್ಧಿಯಂಥ ಮಹತ್ವದ ಯೋಜನೆಗೆ ತಾತ್ಕಾಲಿಕ ಸಿವಿಲ್ ಇಂಜಿನಿಯರ್​ಗಳನ್ನು ನೇಮಕ ಮಾಡಿಕೊಳ್ಳುವ ಮೂಲಕ ಪಾಲಿಕೆ ಇತಿಹಾಸ ಬರೆಯಲಿದೆ. ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ (ಕಿಯೋನಿಕ್ಸ್) ವತಿಯಿಂದ ಇಂಜಿನಿಯರ್​ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುತ್ತಿದೆ. ಇವರ ಪೈಕಿ 9 ಇಂಜಿನಿಯರ್​ಗಳು ಈಗಾಗಲೆ ನೇಮಕಗೊಂಡಿದ್ದು, ಕೆಲಸಕ್ಕೆ ವರದಿ ಮಾಡಿಕೊಂಡಿದ್ದಾರೆ.

ಕೆರೆಗಳ ಅಭಿವೃದ್ಧಿ ಹೊಣೆ: ಬೆಂಗಳೂರಿನಲ್ಲಿ ಒಟ್ಟು 210 ಕೆರೆಗಳಿವೆ. ಅವುಗಳ ಅಭಿವೃದ್ಧಿ ಜವಾಬ್ದಾರಿ ಪಾಲಿಕೆಯದ್ದಾಗಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ. 6 ತಿಂಗಳ ಹಿಂದೆ ಅರಣ್ಯ ಇಲಾಖೆ ಮತ್ತು ಬಿಡಿಎಯಿಂದ 38 ಕೆರೆಗಳು ಪಾಲಿಕೆ ಸುಪರ್ದಿಗೆ ವರ್ಗಾವಣೆಗೊಂಡಿದ್ದು, ಒಟ್ಟು 205 ಕೆರೆಗಳ ನಿರ್ವಹಣೆ ಜವಾಬ್ದಾರಿ ಬಿಬಿಎಂಪಿಯದ್ದಾಗಿದೆ. ಇವುಗಳಲ್ಲಿ 75 ಕೆರೆಗಳು ಸಂಪೂರ್ಣ ಅಭಿವೃದ್ಧಿಯಾಗಿದ್ದರೆ, 20 ಕೆರೆಗಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಉಳಿದ 110 ಕೆರೆಗಳನ್ನು ಅಭಿವೃದ್ಧಿಪಡಿಸಬೇಕಿದೆ. ಈ ಜವಾಬ್ದಾರಿ ಈಗ ಗುತ್ತಿಗೆ ಇಂಜಿನಿಯರ್​ಗಳ ಹೆಗಲೇರಲಿದೆ.

ಅಕ್ರಮಕ್ಕೆ ರಹದಾರಿ: ಪಾಲಿಕೆ ಹಾಗೂ ಬಿಡಿಎ ಇಂಜಿನಿಯರ್​ಗಳು ಅಭಿವೃದ್ಧಿ ಕಾಮಗಾರಿಗಳಲ್ಲಿ ಸಾಕಷ್ಟು ಅಕ್ರಮವೆಸಗಿರುವ ಉದಾಹರಣೆಗಳಿವೆ. ಆಯಾ ಸಂಸ್ಥೆಗಳು ಅಕ್ರಮಕ್ಕೆ ಕಾರಣವಾದವರನ್ನು ಸೇವೆಯಿಂದ ಅಮಾನತು ಮಾಡಿ ಶಿಸ್ತು ಕ್ರಮ ಕೈಗೊಂಡಿವೆ. ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ಇಂಜಿನಿಯರ್​ಗಳು ಅಕ್ರಮದಲ್ಲಿ ಭಾಗಿಯಾದರೆ, ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಗುತ್ತಿಗೆ ಅವಧಿ ಮುಗಿದ ನಂತರ ಕಾರ್ಯಗಳಲ್ಲಿ ಲೋಪ ಉಂಟಾಗಿರುವುದು ಗಮನಕ್ಕೆ ಬಂದಲ್ಲಿ ಯಾರನ್ನು ಪ್ರಶ್ನಿಸಲಾಗುತ್ತದೆ? ಯಾರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂಬುದು ಯಕ್ಷ ಪ್ರಶ್ನೆಗಳಾಗಿವೆ.

ಕೆರೆಗಳ ಅಭಿವೃದ್ಧಿಗೆ ಗುತ್ತಿಗೆ ಆಧಾರದಲ್ಲಿ ಸಿವಿಲ್ ಇಂಜಿನಿಯರ್​ಗಳ ನೇಮಕ ಸೂಕ್ತವಲ್ಲ. ಪಾಲಿಕೆಯಲ್ಲಿ ಹಲವು ಇಂಜಿನಿಯರ್​ಗಳು ಕೆಲಸವಿಲ್ಲದೆ ಓಡಾಡಿ ಕೊಂಡಿದ್ದಾರೆ. ಅವರನ್ನು ಈ ಕೆಲಸಕ್ಕೆ ಬಳಸಿಕೊಳ್ಳ ಬಹುದಿತ್ತು. ಇಂಜಿನಿಯರ್ ಕೊರತೆಯಾದರೆ ಹೊಸದಾಗಿ ನೇಮಕ ಮಾಡಿಕೊಳ್ಳಲಿ. ಅದನ್ನು ಬಿಟ್ಟು ತಾತ್ಕಾಲಿಕ ಸೇವೆ ಪಡೆಯುವುದು ಸಮಂಜಸವಲ್ಲ. | ಅಬ್ದುಲ್ ವಾಜಿದ್ ಬಿಬಿಎಂಪಿ ಪ್ರತಿಪಕ್ಷ ನಾಯಕ
ಕೌನ್ಸಿಲ್ ಸಭೆಯಲ್ಲಿ ಚರ್ಚೆಯಾಗಿಲ್ಲ

ಗುತ್ತಿಗೆ ಆಧಾರದಲ್ಲಿ ಸಿವಿಲ್ ಇಂಜಿನಿಯರ್​ಗಳನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ಚರ್ಚೆಯಾಗಿಲ್ಲ. ಅಧಿಕಾರಿಗಳ ಏಕಾಏಕಿ ನೇಮಕಾತಿಗೆ ಮುಂದಾಗಿರುವುದು ಪ್ರತಿಪಕ್ಷಗಳ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಪಾಲಿಕೆಯ ವಿವಿಧ ವಿಭಾಗಗಳಲ್ಲಿ ನಿಗದಿಗಿಂತಲೂ ಹೆಚ್ಚಿನ ಸಂಖ್ಯೆಯ ಇಂಜಿನಿಯರ್​ಗಳು ಇದ್ದಾರೆ. ಕೆರೆಗಳ ಅಭಿವೃದ್ಧಿಗೆ ಅವರ ಸೇವೆ ಬಳಸಿಕೊಳ್ಳದೆ ಹೊರಗುತ್ತಿಗೆಯ ಸೇವೆ ಪಡೆಯುತ್ತಿರುವುದರ ಹಿಂದೆ ಅಕ್ರಮದ ವಾಸನೆ ಬರುತ್ತಿದೆ ಎಂದು ಪಾಲಿಕೆಯ ಪ್ರತಿಪಕ್ಷ ನಾಯಕ ಅಬ್ದುಲ್ ವಾಜಿದ್ ಆರೋಪಿಸಿದ್ದಾರೆ.

| ಸತೀಶ್ ಕೆ.ಬಳ್ಳಾರಿ ಬೆಂಗಳೂರು