ಆಲೂರು: ಹಲವು ದಿನಗಳಿಂದ ಸುರಿದ ಭಾರಿ ಮಳೆಯಿಂದ ತಾಲೂಕಿನ ಬ್ಯಾಬ ಗ್ರಾಮದ ದೊಡ್ಡ ಕೆರೆಯ ಕೋಡಿ ಬಿದ್ದು ಅಪಾರ ಪ್ರಮಾಣದ ನೀರು ಹೊರಗೆ ಹರಿಯುತ್ತಿದ್ದು, ರೈತರ ಜಮೀನುಗಳು ಜಲಾವೃತಗೊಂಡಿವೆ.
ತಾಲೂಕಿನ ಬೈರಾಪುರ ಗ್ರಾಮ ಪಂಚಾಯಿತಿಗೆ ಸೇರಿದ ಬ್ಯಾಬ ಗ್ರಾಮದ ದೊರೆಕೆರೆ ನೀರು ಗ್ರಾಮದೊಳಕ್ಕೆ ಹಾಗೂ ಜಮೀನುಗಳಿಗೆ ನುಗ್ಗಿದ್ದು, ಕಟಾವು ಹಂತಕ್ಕೆ ಬಂದಿದ್ದ ಭತ್ತ ಹಾಗೂ ಇತರ ಬೆಳೆಗಳು ಜಲಾವೃತಗೊಂಡಿವೆ. ನೂರಾರು ಎಕರೆಯಷ್ಟು ಬೆಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವುದರಿಂದ ರೈತರು ಕಂಗಾಲಾಗಿದ್ದಾರೆ.
ಪರಿಹಾರಕ್ಕೆ ಆಗ್ರಹ : ಕೆರೆ ಕೋಡಿ ಬಿದ್ದಿರುವುದರಿಂದ ರೈತರ ಜಮೀನುಗಳಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದೆ. ರೈತರು ಸಾವಿರಾರು ಖರ್ಚು ಮಾಡಿ ನಾಟಿ ಮಾಡಿದ ಭತ್ತದ ಬೆಳೆ ರೈತರ ಕೈಗೆ ಸೇರುವಾಗ ಅಪಾರ ಪ್ರಮಾಣದಲ್ಲಿ ಮಳೆ ಸುರಿದ ಹಿನ್ನೆಲೆಯಲ್ಲಿ ಕೆರೆ ಕೋಡಿ ನೀರು ನುಗ್ಗಿ ಸಂರ್ಪೂಣ ಬೆಳೆ ಹಾನಿ ಆಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ನಷ್ಟ ಅನುಭವಿಸಿದವರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಈಡೇರದ ಆಶ್ರಯ ನಿವೇಶನ ಹಂಚಿಕೆ
ಕಳೆದ 1998-99ನೇ ಸಾಲಿನಲ್ಲಿ ಅಂದಿನ ಜಿಲ್ಲಾಧಿಕಾರಿ ಬ್ಯಾಬ ಗ್ರಾಮದ 150 ದಲಿತ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡುವ ಮೂಲ ಉದ್ದೇಶದಿಂದ ಸರ್ವೇ ನಂಬರ್ 48ರಲ್ಲಿರುವ ಸರ್ಕಾರಿ ಗೋಮಾಳದಲ್ಲಿ 6 ಎಕರೆ ಜಾಗವನ್ನು ಮೀಸಲಿಟ್ಟಿದ್ದರೂ ಈವರೆಗೂ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳದ ಕಾರಣ ನಿವೇಶನ ಹಂಚಿಕೆ ಮರೀಚಿಕೆ ಆಗಿದೆ. ದಲಿತ ಕುಟುಂಬಗಳು ಮಳೆಗಾಲದಲ್ಲಿ ಪಡಬಾರದ ಕಷ್ಟ ಪಡುತ್ತ ಜೀವನ ನಡೆಸುವಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬೈರಾಪುರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಾಲಲೋಚನ ಒತ್ತಾಯಿಸಿದ್ದಾರೆ.