ಜಿಲ್ಲೆ

ತಳ ಸಮುದಾಯದ ಏಳಿಗೆಗೆ ಅರಸು ಜೀವನ ಮುಡಿಪು

  • ಮಂಡ್ಯ ಮದ್ದೂರು ಶ್ರೀಮಂತ ಅರಸು ಮನೆತನದಲ್ಲಿ ಹುಟ್ಟಿದರೂ ಸಾಮಾನ್ಯ ರೈತನಾಗಿ ಬದುಕಿ, ತಳ ಸಮುದಾಯದ ಏಳಿಗೆಗೆ ತನ್ನ ಜೀವನವನ್ನೇ ಮುಡಿಪಾಗಿಟ್ಟ ವ್ಯಕ್ತಿ ಎಂದರೆ ಡಿ.ದೇವರಾಜ ಅರಸು ಅವರು ಎಂದು ತಾಪಂ ಇಒ ರಾಮಲಿಂಗಯ್ಯ ಬಣ್ಣಿಸಿದರು.

  • ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು 109ನೇ ಜನ್ಮ ದಿನಾಚರಣೆ ಅಂಗವಾಗಿ ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪುರಸಭಾ ಸಿಡಿಎಸ್ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

  • ಉಳುವವನೇ ಭೂಮಿಯ ಒಡೆಯ ಎಂದು ನೊಂದವರ ಧ್ವನಿಯಾಗಿ, ನಿರಾಶ್ರಿತರಿಗೆ ಆಶ್ರಯ ಕೊಟ್ಟರು. ಜೀತ ಹಾಗೂ ಮಲ ಹೊರುವ ಪದ್ಧತಿಯ ನಿರ್ಮೂಲನೆಗೆ ಅರಸು ಅವರು ಶ್ರಮಿಸಿದರು. ಹೀಗಾಗಿ ಅವರು ನೀಡಿದ ಕೊಡುಗೆಗಳು ಮಾದರಿಯಾಗಿದ್ದು, ಇಂದಿನ ಯುವ ಜನತೆ ಅವರ ತತ್ವ, ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

  • ವಸತಿ ನಿಲಯದಲ್ಲಿ ವ್ಯಾಸಂಗ ಮಾಡಿ ಅತಿ ಹೆಚ್ಚು ಅಂಕಗಳಿಸಿದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಎಸ್ಸೆಸ್ಸೆಲ್ಸಿಯ ಸಿ.ಎಸ್.ಜೀವನ್, ದ್ವಿತೀಯ ಪಿಯುಸಿಯ ಎಚ್.ಸಿ.ಪ್ರಿಯಾಂಕಾ ಹಾಗೂ ಪದವಿ ವಿದ್ಯಾರ್ಥಿನಿ ಎಚ್.ಎಂ.ನಂದಿನಿ ಅವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.
  • ಪ್ರಾಧ್ಯಾಪಕಿ ಲತಾ ಡಿ.ದೇವರಾಜು ಅರಸು ಕುರಿತು ಪ್ರಧಾನ ಭಾಷಣ ಮಾಡಿದರು. ಉಪ ತಹಸೀಲ್ದಾರ್ ಸೋಮಶೇಖರ್, ಸಿಡಿಪಿಒ ನಾರಾಯಣ್, ಪುರಸಭಾ ಮುಖ್ಯಾಧಿಕಾರಿ ಮೀನಾಕ್ಷಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪ್ರಕಾಶ್, ಕಸಾಪ ತಾಲೂಕು ಅಧ್ಯಕ್ಷ ಸುನೀಲ್ ಕುಮಾರ್, ಮುಖಂಡರಾದ ಲಿಂಗಯ್ಯ, ಚನ್ನಸಂದ್ರ ಲಕ್ಷ್ಮಣ್, ವೆಂಕಟಾಚಲಯ್ಯ, ಅಧಿಕಾರಿಗಳಾದ ಎಂ.ಶಿವರಾಜು, ಮಂಜುನಾಥನಾಯ್ಡು, ಮಹದೇವು, ದರಿಯಪ್ಪ, ಟಿ.ಎಸ್.ಸುನೀಲ್, ರವಿ, ಬಲರಾಮು ಸೇರಿದಂತೆ ಇತರರು ಇದ್ದರು.