ಸಕಲೇಶಪುರ: ನೊಂದವರ ಬದುಕಿಗೆ ಬೆಳಕಾದವರು ದೇವರಾಜ ಅರಸು ಎಂದು ಉಪವಿಭಾಗಾಧಿಕಾರಿ ರಾಜೇಶ್ ಹೇಳಿದರು.
ಪಟ್ಟಣದ ತಾಪಂ ಸಂಭಾಗಣದಲ್ಲಿ ಬುಧವಾರ ಆಯೋಜಿಸಿದ್ದ ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆ ಕಾರ್ಯಕಮದಲ್ಲಿ ಮಾತನಾಡಿದರು. ಸ್ವತಂತ್ರ ಭಾರತದಲ್ಲಿ ಹಿಂದುಳಿದ ವರ್ಗದಿಂದ ಆಯ್ಕೆಯಾದ ಮೊದಲ ಮುಖ್ಯಮಂತ್ರಿ ದೇವರಾಜ ಅರಸು. ತಮ್ಮ ಆಡಳಿತದ ಅವಧಿಯಲ್ಲಿ ದೀನದಲಿತರ ಪರವಾಗಿ ಕೆಲಸ ಮಾಡಿದ ಪರಿಣಾಮ ಲಕ್ಷಾಂತರ ಜನರು ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಅಧಿಕಾರ ದೊರೆತಾಗ ಯಾವ ಮಾದರಿಯಲ್ಲಿ ಸೇವೆ ಸಲ್ಲಿಸಬೇಕು ಎಂಬುದನ್ನು ತೋರಿಸಿದವರು ಅರಸು. ಇಂದಿನ ಯುವ ಜನತೆಗೆ ಅವರ ಬದುಕು ಆದರ್ಶ ಎಂದರು.
ತಹಸೀಲ್ದಾರ್ ಸುಪ್ರೀತಾ ಮಾತನಾಡಿ, ದಕ್ಷಿಣ ಭಾರತದಲ್ಲಿ ಶ್ರೀಮಂತ ಹಾಗೂ ಬಡವರ ಅಂತರ ತಗ್ಗಿಸಿ ಸಮಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸಿದ ಮಹಾತ್ಮ ದೇವರಾಜು ಅರಸು, ಉಳುವವನೇ ಭೂಮಿಯ ಒಡೆಯ ಯೋಜನೆ ಜಾರಿಗೆ ತಂದ ಮುಖ್ಯಮಂತ್ರಿ ದೇವರಾಜ ಅರಸು. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಸತಿ ನಿಲಯಗಳನ್ನು ಸ್ಥಾಪಿಸಿ, ಕೋಟ್ಯಂತರ ಜನರ ಬದುಕಿಗೆ ನೆರವಾದರು ಎಂದರು.
ಸಂಪನ್ಮೂಲನ ಅಧಿಕಾರಿ ಸಿದ್ದೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು.
ಡಿವೈಎಸ್ಪಿ ಪ್ರಮೋದ್‌ಕುಮಾರ್, ಹಿಂದುಳಿದ ವರ್ಗಗಳ ಇಲಾಖೆಯ ಬಸವನಗೌಡ ಪಾಟೀಲ್, ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಎಸ್.ಜಿ.ಲೋಕೇಶ್, ಗ್ರೇಡ್-2 ತಹಸೀಲ್ದಾರ್ ಮೋಹನ್, ತಾಪಂ ಸಹಾಯಕ ನಿರೀಕ್ಷಣಾ ಅಧಿಕಾರಿ ಹರೀಶ್, ಮುಂತಾದವರು ಇದ್ದರು.