ಬಾಗಲಕೋಟೆ: ಜಿಲ್ಲೆಯಲ್ಲಿ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಸೌಲಭ್ಯಗಳ ಬಗ್ಗೆ ಸಾಕಷ್ಟು ದೂರು ದುಮ್ಮಾನಗಳು ಆಗಾಗ ಕೇಳಿ ಬರುತ್ತಲೇ ಇವೆ. ಈ ಬಗ್ಗೆ ಇತ್ತೀಚಿಗೆ ಕೆಡಿಪಿ ಸಭೆಯಲ್ಲೂ ಚರ್ಚೆಯೂ ಆಗಿತ್ತು. ಸಭೆಯಲ್ಲಿ ಸೂಚನೆ ಬಂದಂತೆ ಜಿಲ್ಲೆಯಲ್ಲಿ ಇರುವ ವಿವಿಧ ವಸತಿ ನಿಲಯಗಳಿಗೆ ಪೊಲೀಸರು ಭೇಟಿ ನೀಡಿ ಪರಿಶೀಲಿಸುವ ಉತ್ತಮ ಕಾರ್ಯ ಮಾಡಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿವಿಧ ವಸತಿ ನಿಲಯಗಳಿಗೆ ಶನಿವಾರ ಖಾಕಿ ಪಡೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿದರು. ಮಕ್ಕಳ ಜೊತೆ ಸಮಾಲೋಚನೆ ಹಾಗೂ ಆಹಾರ ಗುಣಮಟ್ಟ ಪರೀಕ್ಷೆ, ಮಕ್ಕಳ ಜೊತೆಗೆ ಕುಳಿತು ಊಟ ಸವಿದು, ಬಳಿಕ ಕಾನೂನಿನ ತಿಳಿವಳಿಕೆ ಮೂಡಿಸುವ ಕೆಲಸವನ್ನು ಸಹ ಜಿಲ್ಲೆಯ ಪೊಲೀಸರು ಮಾಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಂತೆ ಜಿಲ್ಲೆಯ 74 ವಸತಿ ನಿಲಯಗಳಿಗೆ ಶನಿವಾರ ಒಂದೇ ದಿನ ಭೇಟಿ ನೀಡಿರುವ ಸಿಪಿಐ, ಪಿಎಸ್‌ಐ ಹಾಗೂ ಇತರ ಸಿಬ್ಬಂದಿ ವಿದ್ಯಾರ್ಥಿಗಳು ಹಾಗೂ ಹಾಸ್ಟೆಲ್ ಸಿಬ್ಬಂದಿ ಜೊತೆಗೆ ಮುಕ್ತ ಚರ್ಚೆಯನ್ನು ನಡೆಸಿದ್ದಾರೆ. ಮುಖ್ಯವಾಗಿ ಹಾಸ್ಟೆಲ್ ಮಕ್ಕಳಿಗೆ ಸರ್ಕಾರ ಕೊಡುವ ಸೌಲಭ್ಯಗಳು ಸರಿಯಾಗಿ ತಲುಪಿವೆಯೋ ಇಲ್ಲವೋ ಎನ್ನುವ ಬಗ್ಗೆ ಪರಿಶೀಲಿಸಿದ್ದಾರೆ. ಹಾಸ್ಟೆಲ್‌ಗೆ ಪೂರೈಕೆ ಆಗುವ ಆಹಾರ ಪದಾರ್ಥಗಳ ಗುಣಮಟ್ಟ ಹಾಗೂ ತಯಾರಿಸುವ ಊಟದ ಗುಣಮಟ್ಟವನ್ನು ತಿಳಿಯಲು ವಿದ್ಯಾರ್ಥಿಗಳ ಜೊತೆ ಕೂತುಕೊಂಡು ಸ್ವತಃ ಊಟ ಮಾಡಿದ್ದಾರೆ.
ಇನ್ನು ಹಾಸ್ಟೆಲ್ ವಿದ್ಯಾಥಿಗಳಿಗೆ ಕಾನೂನಿನ ತಿಳಿವಳಿಕೆ, ರಸ್ತೆ ಸಂಚಾರ, ಸೈಬರ್ ಕ್ರೈಂ ಹಾಗೂ ಡ್ರಗ್ಸ್, ಪೋಕ್ಸೋ, ಜೆಜೆ ಕಾಯ್ದೆ, ಬಾಲ್ಯ ವಿವಾಹ ಇತ್ಯಾದಿ ಕಾನೂನುಗಳ ಬಗ್ಗೆ ತಿಳಿವಳಿಕೆ ಮೂಡಿಸಲು ವಿದ್ಯಾರ್ಥಿಗಳಿಗೆ ಪಾಠಗಳನ್ನು ಮಾಡಿದ್ದಾರೆ. ಕೆಲ ಹಾಸ್ಟೆಲ್‌ಗಳಲ್ಲಿ ಸಣ್ಣ ಪುಟ್ಟ ಲೋಪಗಳು ಕಂಡು ಬಂದಾಗ ಅವುಗಳನ್ನು ಸರಿಪಡಿಸಿಕೊಂಡು ವಿದ್ಯಾರ್ಥಿಗಳಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಒದಗಿಸುವಂತೆ ಸಿಬ್ಬಂದಿಗೆ ಸಲಹೆ ನೀಡಿದ್ದಾರೆ.
ಜಿಲ್ಲೆಯ ಬಾಗಲಕೋಟೆ, ಬೀಳಗಿ, ಬಾದಾಮಿ, ಹುನಗುಂದ, ಜಮಖಂಡಿ, ಮುಧೋಳ ತಾಲೂಕುಗಳಲ್ಲಿರುವ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ 74 ಹಾಸ್ಟೆಲ್‌ಗಳಿಗೆ ಮಧ್ಯಾಹ್ನ ಏಕಕಾಲಕ್ಕೆ ಭೇಟಿ ನೀಡಿರುವ ಪೊಲೀಸ್ ಅಧಿಕಾರಿಗಳು, ಹಾಸ್ಟೆಲ್‌ಗಳಲ್ಲಿನ ವಾಸ್ತವ ಪರಿಸ್ಥಿತಿ ಖುದ್ದಾಗಿ ವೀಕ್ಷಿಸಿದರು. ಕೆಲ ಸಲಹೆ, ಸೂಚನೆಗಳನ್ನು ಸಹ ಅಲ್ಲಿನ ಸಿಬ್ಬಂದಿಗೆ ನೀಡಿದ್ದಾರೆ. ವಿದ್ಯಾರ್ಥಿಗಳ ಜೊತೆ ಕುಳಿತು ಮುಕ್ತವಾಗಿ ಚರ್ಚೆ ನಡೆಸುವ ಮೂಲಕ ಖಾಕಿ ಪಡೆ ಎಂದರೆ ಬರೀ ಕಾನೂನು ಸುವ್ಯವಸ್ಥೆ ರಕ್ಷಣೆ ಅಷ್ಟೇ ಅಲ್ಲ. ಸಾಮಾಜಿಕ ಕಾಳಜಿಯೂ ಇದೆ ಎನ್ನುವುದನ್ನು ತೋರ‌್ಪಡಿಸುವ ಕೆಲಸಕ್ಕೆ ಬಾಗಲಕೋಟೆ ಪೊಲೀಸರು ಮುಂದಾಗಿರುವುದು ವಿದ್ಯಾರ್ಥಿ ಸಮುದಾಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.