ಸದೇಶ್ ಕಾರ್ಮಾಡ್ ಮೈಸೂರು
ಭಾಷೆ ಎಂಬುದು ಕೇವಲ ಸಂವಹನದ ಸಾಧನವಲ್ಲ; ಅದು ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ, ಜ್ಞಾನ ಮತ್ತು ಬದುಕಿನ ಮೌಲ್ಯಗಳನ್ನು ಹೊತ್ತು ಸಾಗುವ ಜೀವಂತ ಪರಂಪರೆ. ಅಂತಹ ಶ್ರೀಮಂತ ಪರಂಪರೆಯ ಕೊಂಡಿಯಾಗಿರುವ ಸಂಸ್ಕೃತ ಭಾಷೆಯನ್ನು ಕಲಿಯಬೇಕೆಂಬ ಆಸೆ ಅನೇಕರಿಗಿದೆ. ಆದರೆ ಕಲಿಸುವವರಿಲ್ಲ, ಕಲಿಯಲು ಸೂಕ್ತ ವೇದಿಕೆಯಿಲ್ಲ ಎಂಬ ಕಾರಣಕ್ಕೆ ಅನೇಕರ ಆಸೆ ಮನಸ್ಸಿನಲ್ಲೇ ಉಳಿದಿದೆ. ಅಂತಹ ಆಸೆಗಳಿಗೆ ಹೊಸ ಚೈತನ್ಯ ತುಂಬುವ ಪ್ರಯತ್ನ ಮೈಸೂರಿನಲ್ಲಿ ಆರಂಭವಾಗಿದೆ.
ಸಂಸ್ಕೃತ ಭಾಷೆ ಕೆಲವರಿಗೆ ಮಾತ್ರ ಸೀಮಿತವಾಗಬಾರದು, ಆಸಕ್ತಿ ಇರುವ ಪ್ರತಿಯೊಬ್ಬರೂ ಈ ಭಾಷೆಯನ್ನು ಕಲಿಯುವಂತಾಗಬೇಕು ಎಂಬ ಆಶಯದೊಂದಿಗೆ ನಗರದಲ್ಲಿ ‘ದಿ ಸ್ಯಾನ್ಸ್ಕ್ರಿಟ್ ಸರ್ಕಲ್’ ಎಂಬ ವಿನೂತನ ಭಾಷಾ ಕಲಿಕಾ ಬಳಗ ರಚಿಸಲಾಗಿದೆ. ಇಲ್ಲಿ ವಯಸ್ಸಿನ ಹಂಗಿಲ್ಲ, ಜಾತಿ-ಧರ್ಮದ ಬೇಧವಿಲ್ಲ, ಕಲಿಕೆಗೆ ಯಾವುದೇ ಶುಲ್ಕವೂ ಇಲ್ಲ. ಭಾಷೆಯನ್ನು ಕಲಿಯುವ ಆಸಕ್ತಿ ಇದ್ದರೆ ಸಾಕು, ಎಲ್ಲರಿಗೂ ಇಲ್ಲಿ ಸ್ವಾಗತ.
ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕಿರಣ್ ಪಿ. ಕೌಶಿಕ್ ಈ ವಿನೂತನ ಪ್ರಯತ್ನಕ್ಕೆ ಚಾಲನೆ ನೀಡಿದ್ದಾರೆ. ಕಳೆದ ಏಳು ತಿಂಗಳಿನಿಂದ ಈ ಕಲಿಕಾ ಚಟುವಟಿಕೆ ನಡೆಯುತ್ತಿದ್ದು, ಪ್ರತಿ ತಿಂಗಳ ಒಂದು ಭಾನುವಾರ ಬೆಳಗ್ಗೆ 7ರಿಂದ 8ರವರೆಗೆ ಕುಕ್ಕರಹಳ್ಳಿಯ ಕುವೆಂಪುವನದಲ್ಲಿ ಸಂಸ್ಕೃತದ ಕಲಿಕಾ ತರಗತಿ ಆಯೋಜಿಸಲಾಗುತ್ತಿದೆ. ಭಾನುವಾರದ ಮುಂಜಾನೆಯನ್ನು ಕೇವಲ ನಡಿಗೆ, ವ್ಯಾಯಾಮಕ್ಕೆ ಮೀಸಲಿಡದೆ ಹೊಸ ಭಾಷೆಯೊಂದನ್ನು ಕಲಿಯಲು ಬಳಸಿಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ.
ಪ್ರತಿ ಭೇಟಿಯಲ್ಲೂ ಸುಮಾರು 15ರಿಂದ 20 ಮಂದಿ ಸಂಸ್ಕೃತ ಕಲಿಯುವ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಮಕ್ಕಳು, ಯುವಕರು, ಮಧ್ಯವಯಸ್ಕರು, ಹಿರಿಯರು ಹೀಗೆ ವಿವಿಧ ವಯೋಮಾನದವರು ಒಂದೇ ಕಡೆ ಸೇರಿ ಭಾಷೆಯನ್ನು ಕಲಿಯುತ್ತಿರುವುದು ಈ ಪ್ರಯತ್ನದ ವಿಶೇಷ. ಸಾಮಾನ್ಯವಾಗಿ ಭಾಷಾ ಕಲಿಕೆ ಎಂದರೆ ವ್ಯಾಕರಣ, ಕಠಿಣ ಪದಗಳು, ಪಾಠ ಮತ್ತು ಬರವಣಿಗೆಯ ನೆನಪಾಗಬಹುದು. ಆದರೆ ಇಲ್ಲಿ ಕಲಿಕೆಯ ವಿಧಾನವೇ ವಿಭಿನ್ನವಾಗಿದೆ. ಸಂಸ್ಕೃತವನ್ನು ಅತ್ಯಂತ ಸರಳವಾಗಿ ಪರಿಚಯಿಸುವುದರ ಜತೆಗೆ ವಿವಿಧ ಆಟಗಳು, ಸಂವಾದ ಮತ್ತು ಆಸಕ್ತಿದಾಯಕ ಚಟುವಟಿಕೆಗಳ ಮೂಲಕ ಕಲಿಸುವ ಪ್ರಯತ್ನ ನಡೆಯುತ್ತಿದೆ.
ಪರಸ್ಪರ ಮಾತನಾಡುತ್ತಾ, ಪದಗಳನ್ನು ಪರಿಚಯಿಸಿಕೊಳ್ಳುತ್ತಾ, ಆಟಗಳಲ್ಲಿ ತೊಡಗಿಸಿಕೊಳ್ಳುತ್ತಾ ಸಂಸ್ಕೃತ ಕಲಿಯುವ ಅವಕಾಶ ಇಲ್ಲಿ ಸಿಗುತ್ತದೆ. ಹೀಗಾಗಿ ಸಂಸ್ಕೃತದ ಪೂರ್ವಜ್ಞಾನ ಇಲ್ಲದವರೂ ಯಾವುದೇ ಮುಜುಗರವಿಲ್ಲದೆ ಕಲಿಕೆಯಲ್ಲಿ ಪಾಲ್ಗೊಳ್ಳಬಹುದು. ತಪ್ಪು ಮಾತನಾಡುತ್ತೇವೆ ಎಂಬ ಆತಂಕವಿಲ್ಲದೆ ಹೊಸ ಪದಗಳನ್ನು ಪ್ರಯೋಗಿಸುವ, ಸರಳ ವಾಕ್ಯಗಳನ್ನು ರೂಪಿಸುವ ಮತ್ತು ಭಾಷೆಯೊಂದಿಗೆ ಆತ್ಮೀಯತೆ ಬೆಳೆಸಿಕೊಳ್ಳುವ ವಾತಾವರಣವನ್ನು ರೂಪಿಸಲಾಗಿದೆ. ಈ ಕಲಿಕಾ ಚಟುವಟಿಕೆಗಳ ಮಾಹಿತಿ ಮತ್ತು ಮುಂದಿನ ಭೇಟಿಯ ದಿನಾಂಕವನ್ನು ಸಾರ್ವಜನಿಕರು ತಿಳಿಯಲು ಇನ್ಸ್ಟಾಗ್ರಾಮ್ನಲ್ಲಿ ‘ದಿ ಸ್ಯಾನ್ಸ್ಕ್ರಿಟ್ ಸರ್ಕಲ್’ ಹೆಸರಿನ ಪುಟವನ್ನು ಫಾಲೋ ಮಾಡಿದರೆ ಸಾಕು.
ಸಂಸ್ಕೃತವನ್ನು ಕಲಿಯುವುದು ಕೇವಲ ಸಾವಿರಾರು ವರ್ಷಗಳ ಇತಿಹಾಸವಿರುವ ಪ್ರಾಚೀನ ಭಾಷೆಯೊಂದನ್ನು ಪರಿಚಯಿಸಿಕೊಳ್ಳು ವುದಲ್ಲ. ಅದು ಭಾರತೀಯ ಜ್ಞಾನ ಪರಂಪರೆಯ ವಿಶಾಲ ಜಗತ್ತಿನೊಳಗೆ ಪ್ರವೇಶಿಸಿದಂತೆ. ವೇದಗಳು, ಉಪನಿಷತ್ತುಗಳು, ಭಗವದ್ಗೀತೆ, ರಾಮಾಯಣ, ಮಹಾಭಾರತ ಸೇರಿದಂತೆ ಭಾರತೀಯ ಸಾಹಿತ್ಯ ಮತ್ತು ತತ್ವಚಿಂತನೆಯ ಅನೇಕ ಮಹತ್ವದ ಕೃತಿಗಳು ಸಂಸ್ಕೃತ ಭಾಷೆಯಲ್ಲಿವೆ. ಇವುಗಳನ್ನು ಮೂಲ ಭಾಷೆಯಲ್ಲಿಯೇ ಓದಿ, ಅರ್ಥೈಸಿಕೊಳ್ಳಲು ಸಂಸ್ಕೃತದ ಜ್ಞಾನ ನೆರವಾಗುತ್ತದೆ.
ಸಂಸ್ಕೃತದ ಮಹತ್ವ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರಾಚೀನ ಭಾರತದ ಗಣಿತ, ಖಗೋಳಶಾಸ್ತ್ರ, ವೈದ್ಯಕೀಯ, ಆಯುರ್ವೇದ, ಯೋಗ ಮತ್ತು ತತ್ವಶಾಸ್ತ್ರದ ಹಲವು ಅಮೂಲ್ಯ ಕೃತಿಗಳು ಸಂಸ್ಕೃತದಲ್ಲಿ ರಚನೆಯಾಗಿವೆ. ಆರ್ಯಭಟ, ಭಾಸ್ಕರಾಚಾರ್ಯರ ಗಣಿತ ಮತ್ತು ಖಗೋಳಶಾಸ್ತ್ರದ ಕೃತಿಗಳು, ಚರಕ ಸಂಹಿತೆ ಮತ್ತು ಸುಶ್ರುತ ಸಂಹಿತೆಯಂತಹ ಆಯುರ್ವೇದ ಗ್ರಂಥಗಳು ಭಾರತೀಯ ಜ್ಞಾನ ಪರಂಪರೆಯ ಶ್ರೀಮಂತಿಕೆಯನ್ನು ಪರಿಚಯಿಸುತ್ತವೆ.
ಸಂಸ್ಕೃತ ಕಲಿಕೆಯಿಂದ ಕನ್ನಡ ಸೇರಿದಂತೆ ಭಾರತದ ಹಲವು ಭಾಷೆಗಳ ಪದಗಳ ಮೂಲ ಮತ್ತು ಅವುಗಳ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ. ಸಂಸ್ಕೃತವು ಇಂಡೋ-ಯುರೋಪಿಯನ್ ಭಾಷಾ ಕುಟುಂಬಕ್ಕೆ ಸೇರಿರುವುದರಿಂದ ಲ್ಯಾಟಿನ್, ಗ್ರೀಕ್, ಜರ್ಮನ್ ಮತ್ತು ಇಂಗ್ಲಿಷ್ನಂತಹ ಭಾಷೆಗಳೊಂದಿಗೆ ಅದರಲ್ಲಿರುವ ಕೆಲವು ಪದಮೂಲಗಳ ಸಾಮ್ಯತೆಯನ್ನು ಅರಿಯುವುದಕ್ಕೂ ನೆರವಾಗುತ್ತದೆ.
ಇಂದಿನ ವೇಗದ ಬದುಕಿನಲ್ಲಿ ಹೊಸದನ್ನು ಕಲಿಯಲು ಸಮಯವೇ ಸಿಗುತ್ತಿಲ್ಲ ಎಂದು ಹೇಳುವವರೇ ಹೆಚ್ಚು. ಆದರೆ ತಿಂಗಳಿಗೊಮ್ಮೆ ಒಂದು ಗಂಟೆಯನ್ನು ಮೀಸಲಿಟ್ಟರೆ ಹೊಸ ಭಾಷೆಯೊಂದರ ಪರಿಚಯ ಮಾಡಿಕೊಳ್ಳಬಹುದು ಎಂಬುದನ್ನು ದಿ ಸ್ಯಾನ್ಸ್ಕ್ರಿಟ್ ಸರ್ಕಲ್ ಪ್ರಯತ್ನ ತೋರಿಸಿಕೊಡುತ್ತಿದೆ.
ಸಂಸ್ಕೃತವನ್ನು ಕಲಿಯಬೇಕು ಎಂದು ಸಾಕಷ್ಟು ಜನರು ಬಯಸುತ್ತಿದ್ದಾರೆ. ಆದರೆ, ಸಾಕಷ್ಟು ಜನರಿಗೆ ಕಲಿಯಲು ಸೂಕ್ತ ವೇದಿಕೆ ಇಲ್ಲದೆ ಇರುವುದನ್ನು ಮನಗಂಡು ದಿ ಸ್ಯಾನ್ಸ್ಕ್ರಿಟ್ ಸರ್ಕಲ್ ಭಾಷಾ ಕಲಿಕಾ ಬಳಗ ರಚನೆ ಮಾಡಿದ್ದೇವೆ. ಪ್ರಸ್ತುತ 15 ರಿಂದ 20 ಜನರು ಕಲಿಕೆಯಲ್ಲಿ ಭಾಗವಹಿಸುತ್ತಿದ್ದು, ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಹೊಂದಿದ್ದೇವೆ.
ಕಿರಣ್ ಪಿ. ಕೌಶಿಕ್, ಸಂಸ್ಥಾಪಕರು, ದಿ ಸ್ಯಾನ್ಸ್ಕ್ರಿಟ್ ಸರ್ಕಲ್