ಜಿಲ್ಲೆ

ಮುದ್ದಿನ ಕೃಷ್ಣನಿಗೆ ಮುತ್ತಿನ ಕವಚದ ಕೊಡುಗೆ...

ಪರ್ಯಾಯ ಪುತ್ತಿಗೆ ಮಠದ ಕಿರಿಯ ಶ್ರೀಗಳ ಜನ್ಮನಕ್ಷತ್ರದ ಸವಿನೆನಪಿಗಾಗಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರ ಜನ್ಮನಕ್ಷತ್ರದ ನಿಮಿತ್ತ ಶ್ರೀಕೃಷ್ಣ ಮಠದಲ್ಲಿ ಆಗಸ್ಟ್​ 4ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಲಿದೆ.

ಶ್ರೀಗಳ 37ನೇ ಜನ್ಮ ನಕ್ಷತ್ರದ ಸವಿನೆನಪಿಗಾಗಿ ಮುದ್ದು ಕೃಷ್ಣನಿಗೆ ಮುತ್ತಿನ ಕವಚ, ಕಿರೀಟ ಸಮರ್ಪಣೆ ಮಾಡಲಾಗುತ್ತಿದೆ. ಅದಮಾರು ಮಠದ ಹಿರಿಯ ಯತಿ ವಿಶ್ವಪ್ರಿಯ ತೀರ್ಥ ಶ್ರೀಪಾದರ ದಿವ್ಯ ಹಸ್ತಗಳಿಂದ, ಸುಗುಣೇಂದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ದೇವರಿಗೆ ಮುತ್ತಿನ ಕವಚ ಸಮರ್ಪಿಸಲಾಗುತ್ತಿದೆ.

ಭಕ್ತರೊಂದಿಗೆ ಮೆರವಣಿಗೆ

ಶ್ರೀಕೃಷ್ಣನಿಗೆ ಅರ್ಪಣೆಗೊಳ್ಳಲಿರುವ ಮುತ್ತಿನ ಕವಚ-ಕಿರೀಟವನ್ನು ಭಾನುವಾರ ಸಂಜೆ (ಆ.3ರಂದು) ಸಾಲಂಕೃತ ಪಲ್ಲಕ್ಕಿಯಲ್ಲಿಟ್ಟು ವೈಭವದ ಮೆರವಣಿಗೆಯಲ್ಲಿ ಶ್ರೀಕೃಷ್ಣ ಮಠಕ್ಕೆ ತರಲಾಯಿತು. ಸುಗುಣೇಂದ್ರ ಶ್ರೀ, ಸುಶ್ರೀಂದ್ರ ಶ್ರೀ, ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಮಹಿತೋಷ ಆಚಾರ್ಯ ಇತರರಿದ್ದರು.

ಅಲಂಕಾರ ತಜ್ಞನೆಂಬ ಕೀರ್ತಿ

ಉತ್ಸವ ಹಾಗೂ ಅಲಂಕಾರ ಪ್ರಿಯನಾದ ಉಡುಪಿ ಶ್ರೀಕೃಷ್ಣ ದೇವರನ್ನು ಪುತ್ತಿಗೆ ಪರ್ಯಾಯದ ಮೊದಲ ದಿನದಿಂದಲೇ ಭಕ್ತವೃಂದ ಕಾತುರದಿಂದ ನಿರೀಕ್ಷಿಸುವಂತೆ ಸುಶ್ರೀಂದ್ರ ಶ್ರೀಗಳು ಅಲಂಕಾರಗೊಳಿಸುತ್ತಿದ್ದಾರೆ. ಪೊಡವಿಗೊಡೆಯನನ್ನು ದಿನಕ್ಕೊಂದು ವಿಶೇಷ ಅಲಂಕಾರಗೊಳಿಸಿ, ಹಿರಿಯ ಶ್ರೀಗಳೊಂದಿಗೆ ತಾವೂ ಪೂಜಿಸುವ ಮೂಲಕ ಅಲಂಕಾರ ತಜ್ಞ ಎಂಬ ಕೀರ್ತಿ ಪಡೆದಿದ್ದಾರೆ.