ಶೃಂಗೇರಿ ತಾಲೂಕಿನ ಮೆಣಸೆಯಲ್ಲಿ ಆಯೋಜಿಸಿದ್ದ ಚುನವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಮಾತನಾಡಿದರು. ಟಿ.ಡಿ.ರಾಜೇಗೌಡ, ಶಾಮಣ್ಣ, ಭಾಗ್ಯಾ, ತ್ರಿಮೂರ್ತಿ, ಭಾಸ್ಕರ ನಾಯ್ಕ, ಸತೀಶ್ ಇತರರಿದ್ದರು. 
ಜಿಲ್ಲೆ

ಸಂಸತ್‌ನಲ್ಲಿ ರೈತರ ಸಮಸ್ಯೆ ಪ್ರಸ್ತಾಪಿಸಲೇ ಇಲ್ಲ

ಶೃಂಗೇರಿ: ಮಲೆನಾಡಿನ ಜ್ವಲಂತ ಸಮಸ್ಯೆಗಳ ಕುರಿತು ನನಗೆ ಸಂಪೂರ್ಣ ಅರಿವು ಇದೆ. ಅಡಕೆ ಬೆಳೆಗಾರರ ಸಂಕಷ್ಟ ಪರಿಹರಿಸಲು ಗೋರಖ್ ಸಿಂಗ್ ವರದಿ ಜಾರಿಗೆ ತರಲಾಯಿತು. ಬಳಿಕ ಬಿಜೆಪಿ ಸರ್ಕಾರ ಬಂದು ಹತ್ತು ವರ್ಷವಾದರೂ ಅನುಷ್ಠಾನ ಆಗಲೇ ಇಲ್ಲ. ಬಿಜೆಪಿ ನಾಯಕರಿಗೆ ಅಡಕೆ ಬೆಳೆಗಾರರ ಕುರಿತು ಕಾಳಜಿ ಇಲ್ಲ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ತಿಳಿಸಿದರು.

ಮೆಣಸೆ ಸೊಸೈಟಿ ಸಮೀಪ ಶನಿವಾರ ಚುನವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಜನಪ್ರತಿನಿಧಿಗಳು ಕ್ಷೇತ್ರಕ್ಕೆ ಬಂದರೆ ಮಾತ್ರ ಸಮಸ್ಯೆಗಳ ಕುರಿತು ಪರಿಹಾರ ನೀಡಲು ಸಾಧ್ಯವಾಗುತ್ತದೆ. ಆದರೆ ಇಲ್ಲಿನ ಸಮಸ್ಯೆಗಳು ಹಾಗೆಯೇ ಉಳಿದಿವೆ. ಯಾರೇ ಫೋನ್ ಮಾಡಿದರೂ ಅದಕ್ಕೆ ಸ್ಪಂದಿಸುವ ಗುಣ ಜನಪ್ರತಿನಿಧಿಯಲ್ಲಿ ಇರಬೇಕು. ಈ ಕಾರ್ಯವನ್ನು ನಿರಂತರ ನಾನು ನಿರ್ವಹಿಸಿದ್ದೇನೆ ಎಂದರು.
ಅಡಕೆಗೆ ಹೆಚ್ಚಿನ ಬೆಲೆ ಬರಲು ಕಾಂಗ್ರೆಸ್ ಸರ್ಕಾರ ಕಾರಣ. ಅಡಕೆ ಹಾಗೂ ಕಾಫಿ ಬೆಳೆಗಾರರ ಸಮಸ್ಯೆಗಳ ಕುರಿತು ಸಂಸದೆ ಶೋಭಾ ಕರಂದ್ಲಾಜೆ ಲೋಕಸಭೆಯಲ್ಲಿ ಪ್ರಸ್ತಾಪಿಸಿ ರೈತರ ಪರ ಧ್ವನಿ ಎತ್ತಲೇ ಇಲ್ಲ. ಹಾಗಾಗಿ ಅವರ ಸಮಸ್ಯೆಗಳು ಹಾಗೆಯೇ ಉಳಿದಿವೆ. ಮಲ್ಪೆಯಲ್ಲಿ ಪ್ರಾರಂಭವಾಗುವ ರಾಷ್ಟ್ರೀಯ ಹೆದ್ದಾರಿಗೆ ಅನುದಾನದ ಬಿಡುಗಡೆಗೆ ನಾನು ಹೋರಾಟ ಮಾಡಿದ್ದೇನೆ. ಆದರೆ ಅದರ ಕುರಿತು ಹಿಂದಿನ ಸಂಸದರು ಹೆಚ್ಚು ಗಮನಹರಿಸಿಲ್ಲ ಎಂದು ಆರೋಪಿಸಿದರು.
ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಬೇಕಿದೆ. ಸರ್ಕಾರಿ ಕಚೇರಿಯಲ್ಲಿ ವಿಲೇವಾರಿಯಾಗದ ಕಡತಗಳಿಗೆ ಮರುಜೀವ ನೀಡಬೇಕಿದೆ. ನಾನು ಸಂಸದನಾದ ಸಂದರ್ಭದಲ್ಲಿ ಮಳೆಗಾಲದಲ್ಲಿ ರಸ್ತೆಗಳು ಹಾಳಾದಾಗ ಕಾಂಕ್ರೀಟ್ ರಸ್ತೆಯನ್ನಾಗಿಸಿದ್ದೇನೆ. ಕೇಂದ್ರ ಸರ್ಕಾರ ಜನರ ಉಳಿತಾಯ ಖಾತೆಗೆ 15 ಲಕ್ಷ ರೂ. ಹಾಕುವುದು ಹಾಗೂ ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುವ ಆಶ್ವಾಸನೆ ಈಡೇರಿಸಲೇ ಇಲ್ಲ. ಇದರ ಕುರಿತು ಜನರು ಚರ್ಚೆ ಮಾಡಬೇಕಿದೆ. ಪೆಟ್ರೋಲ್ ಹಾಗೂ ಡಿಸೇಲ್ ದರ ಇಳಿಕೆಯಾಗುತ್ತದೆ ಎಂದು ಸರ್ಕಾರ ಭರವಸೆ ನೀಡಿದ್ದು, ಅದು ಮರೀಚಿಕೆಯಾಗಿ ಉಳಿದಿದೆ ಎಂದರು.
ಜಯಪ್ರಕಾಶ್ ಹೆಗ್ಡೆ ಸಂಸದರಾದರೆ ಮಾತ್ರ ಕ್ಷೇತ್ರದ ಜಲ್ವಂತ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಬಿಜೆಪಿ ದೇಶದ ಅಭಿವೃದ್ಧಿಯತ್ತ ಹೆಚ್ಚು ಗಮನ ನೀಡುತ್ತಿಲ್ಲ. ಕ್ಷೇತ್ರದಲ್ಲಿ ಬರ ಪರಿಸ್ಥಿತಿ ನಿರ್ವಹಣೆಗೆ 60 ಲಕ್ಷ ರೂ. ಅನುದಾನ ಮೀಸಲಿರಿಸಿದ್ದೇವೆ. ಪ್ರಸ್ತುತ ಹತ್ತು ಕೋಟಿ ಅನುದಾನ ಕ್ಷೇತ್ರದ ಅಭಿವೃದ್ಧಿಗೆ ಬಿಡುಗಡೆ ಆಗಿದೆ. ಕಂದಾಯ ಹಾಗೂ ಅರಣ್ಯ ಇಲಾಖೆಯ ಜಂಟಿ ಸರ್ವೇಗೆ ಆದೇಶಿಸಲಾಗಿದೆ. ಜಿಲ್ಲಾಧಿಕಾರಿ ಸುಪರ್ದಿಯಲ್ಲಿರುವ 1,45,000 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮಾಡಿಕೊಂಡಿರುವ ರೈತರಿಗೆ ಹಕ್ಕುಪತ್ರ ನೀಡಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು. ತಾಲೂಕಿನ ಹಲವು ಗ್ರಾಪಂ ವ್ಯಾಪ್ತಿಯಲ್ಲಿ ಚುನಾವಣಾ ಬಹಿಷ್ಕಾರದ ಕೂಗು ಕೇಳುತ್ತಿದೆ. ಬಹಿಷ್ಕಾರದಿಂದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಮೀಸಲು ಅರಣ್ಯ ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ ಮಾಡಲಿದೆ ಎಂದರು.
ಮೆಣಸೆ ಗ್ರಾಪಂ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ, ಕುತೂಗೋಡು ಗ್ರಾಪಂ ಅಧ್ಯಕ್ಷ ನಾಗೇಶ್, ಕಾಂಗ್ರೆಸ್ ಮುಖಂಡರಾದ ಭಾಸ್ಕರ್ ನಾಯ್ಕ, ಕಾನುವಳ್ಳಿ ಕೃಷ್ಣಪ್ಪ ಗೌಡ, ರಮೇಶ್ ಭಟ್, ನಟರಾಜ್, ಎಚ್.ಎಂ.ಸತೀಶ್, ಸದಾಶಿವ ವಜ್ರಪ್ಪ ಇತರರಿದ್ದರು.