ಜಿಲ್ಲೆ

ಮುಡಾ ಹಗರಣದ ತನಿಖೆ ಸಿಬಿಐಗೆ ವಹಿಸಲಿ

ಹುಬ್ಬಳ್ಳಿ : ಮುಖ್ಯಮಂತ್ರಿ ಅವರಿಂದಲೇ ನೇಮಿಸಲ್ಪಟ್ಟ ಲೋಕಾಯುಕ್ತ ಅಧಿಕಾರಿಗಳು, ಮುಡಾ ಹಗರಣದಲ್ಲಿ ಅವರಿಗೆ ಕ್ಲೀನ್​ಚಿಟ್ ನೀಡಿರುವುದನ್ನೇ ಕಾಂಗ್ರೆಸ್​ನವರು ವಿಜೃಂಭಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ತಾವು ಈ ಹಗರಣದಿಂದ ಶುದ್ಧರಾಗಬೇಕೆಂದರೆ ತನಿಖೆಯ ಹೊಣೆಗಾರಿಕೆಯನ್ನು ಸಿಬಿಐ ಅಥವಾ ಹೈಕೋರ್ಟ್ ಮಾನಿಟರಿಂಗ್​ನಿಂದ ಮಾಡಿಸಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸವಾಲು ಹಾಕಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಅವರಿಗೆ ಲೋಕಾಯುಕ್ತ ಕ್ಲೀನ್​ಚಿಟ್ ನೀಡಿರುವುದರಲ್ಲಿ ಅಚ್ಚರಿ ಇಲ್ಲ ಎಂದರು.

ಹಗರಣದ ತನಿಖೆಯಾಗುವ ಮುಂಚೆಯೇ ಲೋಕಾಯುಕ್ತಕ್ಕೆ ಎಸ್ಪಿ, ಡಿವೈಎಸ್ಪಿ ಸೇರಿದಂತೆ ಪ್ರಮುಖ ಅಧಿಕಾರಿಗಳನ್ನು ಮುಖ್ಯಮಂತ್ರಿಯವರೇ ನೇಮಿಸಿದ್ದಾರೆ. ಅವರಲ್ಲಿ ಕೆಲ ಅಧಿಕಾರಿಗಳು ರಾತ್ರಿ ಸಮಯದಲ್ಲಿ ಸಿಎಂ ಮನೆಗೆ ಹೋಗಿ ಬಂದಿದ್ದಾರೆಂಬ ಆರೋಪ ಇದೆ. ಇಷ್ಟೆಲ್ಲ ಆದ ಮೇಲೆ ಲೋಕಾಯುಕ್ತರಿಂದ ನಿಷ್ಪಕ್ಷಪಾತ ತನಿಖೆ ನಿರೀಕ್ಷಿಸುವುದು ಸರಿಯಲ್ಲ ಎಂದರು.

ಬಾಲಿಶ ಹೇಳಿಕೆ: ನರೇಂದ್ರ ಮೋದಿ ಬದಲಾಗಿ ನಿತಿನ್ ಗಡ್ಕರಿ ಪ್ರಧಾನಿಯಾಗಬೇಕು ಎಂಬ ಸಚಿವ ಸಂತೋಷ ಲಾಡ್ ಅವರ ಹೇಳಿಕೆ ಬಾಲಿಶತನದ್ದು. ಸಿಎಂ ಸಿದ್ದರಾಮಯ್ಯ ಅವರು ಸಂಪುಟದಲ್ಲಿ ಬದಲಾವಣೆ ತರಲು ಮುಂದಾಗಿದ್ದಾರೆ. ಹೀಗಾಗಿ, ಸಚಿವರಾಗಿ ಮುಂದುವರೆಯಬೇಕೆಂಬ ಕಾರಣಕ್ಕೆ ಬಿಜೆಪಿ ವಿರುದ್ಧ ಸಂತೋಷ ಲಾಡ್ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಪ್ರಯಾಗ್​ರಾಜ್​ನ ತ್ರಿವೇಣಿ ಸಂಗಮದಲ್ಲಿ ಯಾವುದೇ ರೀತಿಯ ಮಾಲಿನ್ಯ ಇಲ್ಲ. ನಾನು ಕುಟುಂಬದೊಂದಿಗೆ ಅಲ್ಲಿ ಸ್ನಾನ ಮಾಡಿ ಬಂದಿದ್ದೇನೆ. ಮಾಲಿನ್ಯದ ಬಗ್ಗೆ ಮಾತನಾಡುವವರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸೂಕ್ತ ಉತ್ತರ ಕೊಟ್ಟಿದ್ದಾರೆ ಎಂದರು.

ಚೀನಾ ನಮ್ಮ ಶತ್ರು ಅಲ್ಲವೆಂಬ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ ಹೇಳಿಕೆಯನ್ನು ಆ ಪಕ್ಷದವರೇ ಒಪು್ಪತ್ತಿಲ್ಲ. ಆ ಹೇಳಿಕೆ ಕಾಂಗ್ರೆಸ್ಸಿನದಲ್ಲ ಎನ್ನುವ ಆ ಪಕ್ಷದ ಮುಖಂಡರು, ಸ್ಯಾಮ್ ಪಿತ್ರೋಡಾ ಅವರನ್ನು ಪಕ್ಷದಿಂದ ಉಚ್ಚಾಟಿಸಲಿ ಎಂದು ಒತ್ತಾಯ ಮಾಡಿದರು.