ಸಿದ್ದಾಪುರ: ದೇಶದ ಕಾನೂನನ್ನು ಪಾಲಿಸುತ್ತ ವ್ಯವಹಾರ ನಡೆಸುತ್ತಿರುವ ಸಹಕಾರ ಸಂಸ್ಥೆಗಳಲ್ಲಿ ಕ್ಯಾಂಪ್ಕೊ ಪ್ರಮುಖವಾದದ್ದು. ಆ ಕಾರಣದಿಂದ ಪೈಪೋಟಿ ಜಾಸ್ತಿ ಇದೆ. ಸಂಸ್ಥೆ ಲಾಭವನ್ನು ಮಾತ್ರ ಪರಿಗಣಿಸದೆ ಬೆಳೆಗಾರರ ಹಿತದೃಷ್ಟಿಯನ್ನು ಮುಖ್ಯವಾಗಿರಿಸಿಕೊಂಡಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ ಕೊಡ್ಗಿ ಹೇಳಿದರು.
ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಕ್ಯಾಂಪ್ಕೊ ಸಂಸ್ಥೆಯ ಸದಸ್ಯ ಬೆಳೆಗಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತೆರಿಗೆ ಎನ್ನುವ ಗುಮ್ಮ ಎಲ್ಲ ಉದ್ಯಮಗಳನ್ನು ಕಾಡುವಂತೆ ನಮ್ಮ ಸಂಸ್ಥೆಗೂ ಬಾಧಿಸುತ್ತಿದೆ. ಜಿಎಸ್‌ಟಿ ಕಾರಣದಿಂದ ವ್ಯಾಪಾರಿಗಳಂತೆ ನಮಗೆ ಬೆಳೆಗಾರರ ಮಹಸೂಲಿಗೆ ಹೆಚ್ಚಿನ ದರ ನೀಡಲು ಸಾಧ್ಯವಾಗುತ್ತಿಲ್ಲ. ಕೇಂದ್ರ ವಿತ್ತ ಸಚಿವೆಗೆ ಅಡಕೆ ವಹಿವಾಟಿಗೆ ಶೇ. 2 ತೆರಿಗೆ ನಿಗದಿಪಡಿಸಿ ಎಂದು ಬಜೆಟ್ ಪೂರ್ವದಲ್ಲೇ ಮನವಿ ಮಾಡಿದ್ದರೂ ಅವರು ಒಪ್ಪುತ್ತಿಲ್ಲ. ದೇಶದಲ್ಲಿ ಅಂದಾಜು 75 ಸಾವಿರ ಕೋಟಿ ರೂ.ಗಿಂತ ಅಧಿಕ ಅಡಕೆ ವಹಿವಾಟು ನಡೆಯುತ್ತಿದ್ದು, ಶೇ. 2 ತೆರಿಗೆ ವಿಧಿಸಿದರೆ ನಮಗೂ ಹೆಚ್ಚಿನ ದರ ನೀಡಲು ಸಾಧ್ಯವಾಗುತ್ತಿತ್ತು. ಸುಮಾರು 700 ಕೋಟಿ ರೂ.ನಷ್ಟು ಜಿಎಸ್‌ಟಿ ಕಟ್ಟುತ್ತಿರುವ ಕ್ಯಾಂಪ್ಕೊ ಮಾಡಿಕೊಂಡ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಬೇಕಿತ್ತು. ದರ ಕಡಿಮೆಯಾದರೂ ಸಹಕಾರಿ ಸಂಸ್ಥೆಗಳಲ್ಲಿ ಬೆಳೆಗಾರರು ವ್ಯವಹರಿಸಿ. ಇದರಿಂದ ಬೆಳೆಗಾರರು ಬೇರೆ ಬೇರೆ ರೀತಿಯಲ್ಲಿ ನಷ್ಟ ಅನುಭವಿಸುವುದು ತಪ್ಪುತ್ತದೆ ಎಂದರು.
ಅಡಕೆ ಸೇವನೆ ಆರೋಗ್ಯಕ್ಕೆ ಹಾನಿ ಎನ್ನುವ ಕಲ್ಪನೆಯನ್ನು ಮೊದಲು ಹೋಗಲಾಡಿಸಬೇಕಿದೆ. ಈ ಬಗ್ಗೆ ವಿಜ್ಞಾನಿಗಳಿಂದ ಸಂಶೋಧನೆ ನಡೆಸಿ, ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಸುವ, ಕ್ಯಾಂಪ್ಕೊ ಸಂಸ್ಥೆಯಿಂದ ಗೇರು ಬೀಜದ ರಫ್ತು ವ್ಯವಹಾರಕ್ಕೆ ಸಿದ್ಧತೆಗಳು ನಡೆದಿವೆ ಎಂದರು.
ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ ಅವರು ಸಂಸ್ಥೆಯ ಕಾರ್ಯಚಟುವಟಿಕೆಗಳ ವಿವರ ನೀಡಿದರು. ಸಂಸ್ಥೆಯ ಪ್ರಧಾನ ವ್ಯವಸ್ಥಾಪಕಿ ರೇಷ್ಮಾ ಮಲ್ಯ ಅವರು ಸದಸ್ಯರಿಗೆ ಸಂಸ್ಥೆಯ ವತಿಯಿಂದ ನೀಡುವ ಸೌಲಭ್ಯಗಳು ಹಾಗೂ ಕೃಷಿ ಅಧಿಕಾರಿ ಕೃಷ್ಣ ಅವರು ಸಂಸ್ಥೆಯಿಂದ ಉತ್ಪಾದಿಸುತ್ತಿರುವ ಸಾವಯವ ಗೊಬ್ಬರಗಳ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಸಿದ್ದಾಪುರದ ಟಿಎಂಎಸ್ ಸಂಸ್ಥೆಯ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೆಸರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಸ್ಥೆಯ ಉಪಾಧ್ಯಕ್ಷ ಶಂಕರನಾರಾಯಣ ಭಟ್ಟ ಖಂಡಿಗೆ, ಎಚ್.ಎಂ. ರಾಘವೇಂದ್ರ ಹೊಸನಗರ, ಕೃಷ್ಣಪ್ರಸಾದ ಸೇರಿದಂತೆ ಕ್ಯಾಂಪ್ಕೊ ನಿರ್ದೇಶಕರು, ವ್ಯವಸ್ಥಾಪಕರು, ಸಿಬ್ಬಂದಿ ಉಪಸ್ಥಿತರಿದ್ದರು. ಕ್ಯಾಂಪ್ಕೊ ನಿರ್ದೇಶಕ ಶಂಭುಲಿಂಗ ಹೆಗಡೆ ನಿಡಗೋಡ ಸ್ವಾಗತಿಸಿದರು. ನಿರ್ದೇಶಕ ರಾಘವೇಂದ್ರ ಗರ್ತಿಕೆರೆ ವಂದಿಸಿದರು.