ಕಾಪು ಮಾರಿಯಮ್ಮನ ಸಾನ್ನಿಧ್ಯ 
ಜಿಲ್ಲೆ

ಮನೋರಥದಲ್ಲಿಯೂ ದೇವರ ಪ್ರತಿಷ್ಠಾಪನೆ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಜನಾರ್ದನ ದೇವರು ಹಾಗೂ ಮಾರಿಯಮ್ಮನ ರಕ್ಷಣೆಯಲ್ಲಿರುವ ಇಲ್ಲಿಗೆ ಕಾಪು ಎಂಬ ಹೆಸರು ಬಂದಿದೆ. ಅಂತಹ ಕಾಪುವಿನ ಅಮ್ಮನ ಸನ್ನಿಧಾನದಲ್ಲಿ ಉತ್ತಮ ದೇವಳ ನಿರ್ಮಾಣವಾಗಿದೆ. ದೇವರನ್ನು ಗುಡಿಯೊಳಗೆ ಮಾತ್ರ ಪ್ರತಿಷ್ಠಾಪನೆ ಮಾಡುವುದಲ್ಲ, ಮನೋರಥದಲ್ಲಿಯೂ ದೇವರನ್ನು ಪ್ರತಿಷ್ಠಾಪಿಸಿ, ಊರು ತುಂಬಾ ಪ್ರದಕ್ಷಿಣೆ ಮಾಡಬೇಕು. ಮನಸ್ಸಿನಿಂದ ಆ ತಾಯಿಯನ್ನು ಯಾವತ್ತೂ ದೂರವಿಡಬಾರದು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು. ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನಡೆಯುತ್ತಿರುವ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ 8ನೇ ದಿನದ ಧಾರ್ಮಿಕ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು. ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿದ್ವಾನ್ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ವಿದ್ವಾನ್ ನಿಟ್ಟೆ ಪ್ರಸನ್ನ ಆಚಾರ್ಯ, ಪ್ರಸಾದ್‌ರಾಜ್ ಕಾಂಚನ್, ರಾಮದಾಸ ಮಡ್ಮಣ್ಣಾಯ, ಪ್ರವೀಣ್ ಭೋಜ ಶೆಟ್ಟಿ, ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು, ಅರುಣ್‌ಕುಮಾರ್ ಪುತ್ತಿಲ, ಕಾಪು ದಿವಾಕರ ಶೆಟ್ಟಿ, ಯೋಗೀಶ್ ಶೆಟ್ಟಿ ಬಾಲಾಜಿ ಉಪಸ್ಥಿತರಿದ್ದರು. ಅಶೋಕ್ ಪಕಳ ಸ್ವಾಗತಿಸಿದರು. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು.

ಗೌರವ, ಸಂಗೀತಾಮೃತ

ದಾನಿಗಳಾದ ಅರವಿಂದ ಶೆಟ್ಟಿ ಮುಂಬೈ, ಆನಂದ ಶೆಟ್ಟಿ ಮತ್ತು ಶಶಿರೇಖಾ, ಕೆ.ಎಂ.ಶೆಟ್ಟಿ ಮತ್ತು ವಸಂತಿ ಶೆಟ್ಟಿ ದಂಪತಿಯನ್ನು ಗೌರವಿಸಲಾಯಿತು. ವಿದ್ವಾನ್ ಗಣಪತಿ ಭಟ್ ಯಲ್ಲಾಪುರ, ವಿದ್ವಾನ್ ಶ್ರೀಪತಿ ಉಪಾಧ್ಯಾಯ ಕುಂಬಾಸಿ ಅವರಿಂದ ಗಂಗಾವತರಣ ಗಾನ ಆಖ್ಯಾನ ಹಾಗೂ ಚಲನಚಿತ್ರ ಹಿನ್ನಲೆ ಗಾಯಕ ವಿಜಯಪ್ರಕಾಶ್ ಬಳಗದವರ ಸಂಗೀತಾಮೃತ ಸಂಗೀತಾಭಿಮಾನಿಗಳ ಮನಸೂರೆಗೊಂಡಿತು.