ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಆಜಾದ್‌ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು.  
ಜಿಲ್ಲೆ

ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಶಾ ಕಾರ್ಯಕರ್ತೆಯರ ಒತ್ತಾಯ

ಚಿಕ್ಕಮಗಳೂರು: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಶುಕ್ರವಾರ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಡಿಸಿ ಮೀನಾ ನಾಗರಾಜ್ಗೆ ಮನವಿ ಸಲ್ಲಿಸಿದರು.
ಸಂಘದ ರಾಜ್ಯ ಸಮಿತಿ ಸದಸ್ಯೆ ಉಮಾದೇವಿ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲರಿಗೂ ನಿಗದಿತ ವೇತನ ಇದೆ. ಆದರೆ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೊರತುಪಡಿಸಿ ಯಾವುದೇ ಆದಾಯವಿಲ್ಲ. ಕೂಡಲೇ ಸರ್ಕಾರ ಮಾಸಿಕ 15 ಸಾವಿರ ರೂ.ವೇತನ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಜಿಲ್ಲಾಡಳಿತ ಆಶಾ ಕಾರ್ಯಕರ್ತೆಯರ ಕುಂದು ಕೊರತೆ ಸಭೆ ಮಾಡುತ್ತಿಲ್ಲ. ಆರ್‌ಸಿಎಚ್ ಪೋರ್ಟಲ್‌ಗೆ ಲಿಂಕ್ ಮಾಡಿರುವುದರಿಂದ ಆಶಾ ಕಾರ್ಯಕರ್ತೆಯರಿಗೆ ಸಂಪೂರ್ಣವಾಗಿ ವೇತನ ಸಿಗದೆ ಸಾವಿರಾರು ರೂ.ನಷ್ಟ ಅನುಭವಿಸುತ್ತಿದ್ದಾರೆ. ಹಾಗೂ ಇತರ ವೇತನ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಮತ್ತು ಮೊಬೈಲ್ ಆಧಾರಿತ ಕೆಲಸ ಕೈ ಬಿಡುವಂತೆ ಒತ್ತಾಯಿಸಿ ಜಿಲ್ಲಾಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಆಶಾ ಸಾಫ್ಟ್‌ವೇರ್‌ನಿಂದಾಗಿ ವೇತನ ಸರಿಯಾಗಿ ಪಾವತಿಯಾಗುತ್ತಿಲ್ಲ. ಈ ತೊಂದರೆ ತಪ್ಪಿಸಬೇಕು. ಮೊಬೈಲ್ ಆಧಾರಿತ ಕೆಲಸಗಳಿಗೆ ತರಬೇತಿ ಕೊಡಬೇಕು ಹಾಗೂ ಕೆಲಸದಿಂದ ತೆಗೆಯುತ್ತೆ ಎಂದು ಅಧಿಕಾರಿಗಳು ಬೆದರಿಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.