ಜಿಲ್ಲೆ

ಸೋಂಕಿತರು ಯಾವುದೇ ಕಾರಣಕ್ಕೂ ಹೆದರಬಾರದು

Hassan

ಹಾಸನ: ‘ಕರೊನಾ ಎದುರಿಸುವ ಶಕ್ತಿಯನ್ನು ದೇವರು ನಮಗೆ ನೀಡಿದ್ದಾನೆ, ಯಾವ ಕಾರಣಕ್ಕೂ ರೋಗಿಗಳು ಹೆದರಬಾರದು, ಕ್ವಾರಂಟೈನ್‌ನಲ್ಲಿ ನಮಗೆ ಎಲ್ಲ ಸೌಲಭ್ಯ ಕಲ್ಪಿಸಿದ ಜಿಲ್ಲಾಡಳಿತಕ್ಕೆ ಸಾವಿರ ಶರಣು’…!

ಡೆಡ್ಲಿ ಕರೊನಾಗೆ ಒಳಪಟ್ಟು ಗುಣಮುಖರಾಗಿ ಹೊರಗೆ ಬಂದವರ ಭಾವುಕ ಮಾತುಗಳಿವು. ಮೇ 12ರಿಂದ ಜಿಲ್ಲೆಯಲ್ಲಿ ಆರಂಭವಾಗಿರುವ ಕರೊನಾ ಪರ್ವ ಮುಂದುವರಿದಿದ್ದು ಅದೇ ರೀತಿ ಗುರುವಾರ 29 ಜನರು ಗುಣಮುಖರಾಗಿ ಬಿಡುಗಡೆಯಾದರು. ಜಿಲ್ಲಾಧಿಕಾರಿ ಆರ್.ಗಿರೀಶ್, ಶಾಸಕ ಸಿ.ಎನ್.ಬಾಲಕೃಷ್ಣ ಸೇರಿ ಇತರ ಅಧಿಕಾರಿಗಳು ಎಲ್ಲರನ್ನೂ ಪ್ರೀತಿಯಿಂದ ಬೀಳ್ಕೊಟ್ಟರು.

ಕೋವಿಡ್-19 ಆಸ್ಪತ್ರೆಯಿಂದ ಹೊರ ಬಂದ 29 ಜನರಿಗೆ ಗುಲಾಬಿ ಹೂವು ನೀಡಿ ಹಾಗೂ ಚಪ್ಪಾಳೆ ತಟ್ಟುವ ಮೂಲಕ ಶುಭ ಹಾರೈಸಲಾಯಿತು. ಮುಂದಿನ 14 ದಿನ ಹೋಂ ಕ್ವಾರಂಟೈನ್ ಆಗುತ್ತೇವೆ ಎಂಬ ಪ್ರತಿಜ್ಞೆಯನ್ನು ಅವರೆಲ್ಲರೂ ಮಾಡಿದರು. ಚನ್ನರಾಯಪಟ್ಟಣದ 23 ಹಾಗೂ ಹೊಳೆನರಸೀಪುರದ 6 ಜನರು ಆಸ್ಪತ್ರೆಯಿಂದ ಬಿಡುಗಡೆಯಾದರು. ಇದರಲ್ಲಿ 11 ಮಹಿಳೆ, 19 ಪುರುಷರಿದ್ದಾರೆ.

ಸಕ್ರಿಯ 110 ಪ್ರಕರಣ: ಜಿಲ್ಲೆಯಲ್ಲಿ ಇದುವರೆಗೆ 140 ಕರೊನಾ ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿದ್ದು 29 ಜನರು ಗುರುವಾರ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, 110 ಸಕ್ರಿಯ ಪ್ರಕರಣಗಳಿವೆ. ಒಂದು ಮಗು ಬಿಡುಗಡೆಯಾಗಬೇಕಿತ್ತಾದರೂ ಪಾಲಕರು ಆಸ್ಪತ್ರೆಯಲ್ಲೇ ಇರುವುದರಿಂದ ಒಟ್ಟಿಗೆ ಹೊರಗೆ ಹೋಗಲಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು.

ಕ್ವಾರಂಟೈನ್ ಅವಧಿಯನ್ನು 14 ರಿಂದ 7 ದಿನಕ್ಕೆ ಇಳಿಸಿ ಸರ್ಕಾರ ಆದೇಶಿಸಿದೆ. ಹೀಗಾಗಿ ಮರು ಪರೀಕ್ಷೆಯಲ್ಲಿ ನೆಗೆಟಿವ್ ಬಂದವರನ್ನೂ ಬಿಡುಗಡೆ ಮಾಡಲಾಗಿದೆ. ಇಂದು ಬಿಡುಗಡೆಯಾದ ಎಲ್ಲರಿಗೂ ಪಾಸಿಟಿವ್ ಬಂದಿತ್ತಾದರೂ ರೋಗ ಲಕ್ಷಣಗಳು ಇರಲಿಲ್ಲ. ಉಳಿದ 110 ಜನರು ಆರೋಗ್ಯದಿಂದಿದ್ದು ಹಂತ ಹಂತವಾಗಿ ಬಿಡುಗಡೆಯಾಗುತ್ತಾರೆ ಎಂದು ಹೇಳಿದರು.

ತಜ್ಞರ ಸಮಿತಿ ಇದೆ: 14 ದಿನ ಕ್ವಾರಂಟೈನ್ ಮುಗಿಸಿದರೂ ಕೊನೆಯ ಪರೀಕ್ಷೆಯಲ್ಲಿ ಪಾಸಿಟಿವ್ ಬರುತ್ತಿರುವ ಪ್ರಕರಣಗಳಿದ್ದು ಅವುಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ರಾಜ್ಯ ಹಾಗೂ ಜಿಲ್ಲಾ ಆಸ್ಪತ್ರೆಯ ನುರಿತ ತಜ್ಞರ ಸಮಿತಿ ಅದನ್ನು ಗಂಭೀರವಾಗಿ ಪರಿಗಣಿಸಿದೆ. ಮುಂದಿನ ಚಿಕಿತ್ಸಾ ಕ್ರಮ ಕೈಗೊಳ್ಳಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಆತಂಕಪಡುವ ಅವಶ್ಯವಿಲ್ಲ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿಢೀರನೇ ಏರಿಕೆಯಾಗಿದ್ದರೂ ಗುಣಮುಖರ ಸಂಖ್ಯೆಯೂ ಅದೇ ಪ್ರಮಾಣದಲ್ಲಿದೆ. ಹೀಗಾಗಿ ಜಿಲ್ಲೆಯ ಜನರು ಆತಂಕಪಡಬೇಕಿಲ್ಲ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಜನಪ್ರತಿನಿಧಿಗಳಾಗಿ ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇವೆ. ಮಾರಕ ಕರೊನಾ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದರು.

ಹಿಮ್ಸ್ ನಿರ್ದೇಶಕ ಡಾ. ಬಿ.ಸಿ. ರವಿಕುಮಾರ್ ಮಾತನಾಡಿ, 110 ಸಕ್ರಿಯ ಪ್ರಕರಣಗಳ ಮೇಲೆ ನಿಗಾ ಇರಿಸಿದ್ದು ಎಲ್ಲರೂ ಗುಣಮುಖರಾಗುತ್ತಾರೆ. ಎಲ್ಲರನ್ನೂ ಸುರಕ್ಷಿತವಾಗಿ ಮನೆಗೆ ಕಳುಹಿಸಲಾಗುವುದು ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ಸತೀಶ್‌ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಕೃಷ್ಣಮೂರ್ತಿ, ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಜಿಪಂ ಸಿಇಒ ಬಿ.ಎ. ಪರಮೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ ಇದ್ದರು.

ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ: ಕರೊನಾ ತಗುಲಿದೆ ಎಂಬ ಸುದ್ದಿ ತಿಳಿದು ಆರಂಭದಲ್ಲಿ ಭಯ ಆಗಿತ್ತು. ಆದರೆ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ನಮ್ಮನ್ನು ಚೆನ್ನಾಗಿ ನೋಡಿಕೊಂಡರು. ಯಾವುದಕ್ಕೂ ಕೊರತೆ ಮಾಡದ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಮುಂಬೈನಿಂದ ಬರುವಾಗ ಚೆಕ್ ಪೋಸ್ಟ್‌ಗಳಲ್ಲಿ ಪಾರದರ್ಶಕ ತಪಾಸಣೆ ನಡೆಸಿದ್ದರೆ ಜಿಲ್ಲಾಡಳಿತಕ್ಕೆ ಇಷ್ಟೊಂದು ಹೊರೆಯಾಗುತ್ತಿರಲಿಲ್ಲ. ಈ ವಿಚಾರದಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿ ಎಂದು ಹೇಳುತ್ತೇನೆ. 14 ದಿನ ಕುಟುಂಬ ಸದಸ್ಯರಿಂದ ದೂರ ಉಳಿದ ನೋವಿದೆ ಎಂದು ಕಲ್ಲೆಸೋಮನಹಳ್ಳಿ ಗ್ರಾಮದ ಕೆ. ಶಿವಲಿಂಗೇಗೌಡ ಅಭಿಪ್ರಾಯ ಹಂಚಿಕೊಂಡರು.

ನಾನ್ಯಾರು ಅಂತ ಗೊತ್ತಾಯ್ತಾ ?: ಆಸ್ಪತ್ರೆಯಿಂದ ಹೊರ ಬರುತ್ತಿದ್ದಂತೆ ವ್ಯಕ್ತಿಯೊಬ್ಬ ಎಲ್ಲರಿಗೂ ಕೈ ಮುಗಿದು ಧನ್ಯವಾದ ಸಲ್ಲಿಸಿದರು. ಆಗ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಆರಾಮಾಗಿದೀನಿ ಅಂತ ಎಲ್ಲೆಲ್ಲೋ ಸುತ್ತಾಡಬೇಡ. ಮಾಸ್ಕ್ ಧರಿಸಿದ್ದೇನೆ, ನಾನ್ಯಾರು ಅಂತ ಗೊತ್ತಾಯ್ತಾ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಮತ್ತೆ ಮೂವರಿಗೆ ಸೋಂಕು: ಹೊಳೆನರಸೀಪುರ ತಾಲೂಕಿನ ಮೂವರಿಗೆ ಗುರುವಾರ ಕರೊನಾ ತಗುಲಿದ್ದು ಒಟ್ಟು ಸೋಂಕಿತರ ಸಂಖ್ಯೆ 140ಕ್ಕೆ ಏರಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು. ಮೂವರೂ ಹೊಳೆನರಸೀಪುರ ತಾಲೂಕಿನವರಾಗಿದ್ದು, ಇಬ್ಬರು ಮಹಾರಾಷ್ಟ್ರ ಹಾಗೂ ಒಬ್ಬ ತಮಿಳುನಾಡಿನಿಂದ ಬಂದಿದ್ದಾರೆ ಎಂದರು.