ಜಿಲ್ಲೆ

ಗೋವುಗಳ ಕೆಚ್ಚಲು ಕೊಯ್ದ ಘಟನೆ ಆತಂಕಕಾರಿ

ಬಾಳೆಹೊನ್ನೂರು: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಗೋವುಗಳ ಕೆಚ್ಚಲನ್ನು ಕೊಯ್ದು ವಿಕೃತಿ ಮೆರೆದಿರುವುದು ಆತಂಕಕಾರಿ ಘಟನೆ ಎಂದು ವಿಶ್ವ ಹಿಂದು ಪರಿಷತ್ ಹಾಸನ ವಿಭಾಗದ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಹೇಳಿದ್ದಾರೆ.

ಸಂಕ್ರಾಂತಿಯಂದು ಗೋವುಗಳನ್ನು ಸಮಸ್ತ ರೈತರು, ಹಿಂದು ಬಾಂಧವರು ಪೂಜಿಸುವ ವೇಳೆ ಗೋವುಗಳ ಮೇಲೆ ದುಷ್ಕರ್ಮಿಗಳು ವಿಕೃತಿ ಮೆರೆದಿರುವುದು ಅಮಾನವೀಯ ಕೃತ್ಯ. ಮಲೆನಾಡು ಭಾಗದಲ್ಲಿ ಹಲವು ಗೋವುಗಳನ್ನು ಕೈಕಾಲು ಕಟ್ಟಿ ಸಾಗಾಟ ಮಾಡುವುದು, ಸಣ್ಣ ಕರುಗಳನ್ನು ಚೀಲದಲ್ಲಿ ತುಂಬಿ ಕಸಾಯಿ ಖಾನೆಗೆ ಸಾಗಿಸುವುದು. ರಸ್ತೆ ಬದಿಗಳಲ್ಲಿ ಗೋ ಹತ್ಯೆ ಮಾಡುವವರ ವಿರುದ್ಧ ಕ್ರಮಕೈಗೊಳ್ಳುಂತೆ ಹಲವಾರು ಬಾರಿ ವಿಶ್ವ ಹಿಂದು ಪರಿಷತ್ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಹೇಳಿಕೆಯಲ್ಲಿ ದೂರಿದ್ದಾರೆ.

ಜೀವಮಾನವಿಡಿ ಹಾಲು ಹಾಗೂ ಅದರ ಉತ್ಪನ್ನಗಳನ್ನು ಬಳಸುತ್ತಿದ್ದೇವೆ. ಗೋವುಗಳ ಮೇಲೆ ಬಹುಸಂಖ್ಯಾತ ಹಿಂದುಗಳು ಅಪಾರ ಶ್ರದ್ಧಾ ಭಾವನೆ ಹೊಂದಿದ್ದಾರೆ. ಇದೀಗ ಹಿಂದುಗಳ ನಂಬಿಕೆ ಹತ್ತಿಕ್ಕುವ ಯತ್ನ ಮಾಡಲಾಗಿದೆ. ಪ್ರತಿಭಟನೆಯಲ್ಲಿ ಗೋವುಗಳನ್ನು ಬಳಸಿದ ಉದ್ದೇಶದಿಂದ ಗೋವುಗಳ ಕೆಚ್ಚಲನ್ನು ಕೊಯ್ದು ಹಿಂಸೆ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ಸರ್ಕಾರ ಯಾವುದೇ ಒಂದು ವರ್ಗ, ಮತಕ್ಕೆ ಮಾತ್ರ ಸೀಮಿತವಾಗದೆ ಗೋವಿನ ಕೆಚ್ಚಲನ್ನು ಕೊಯ್ದ ವ್ಯಕ್ತಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ಅಕ್ರಮ ಗೋ ಹತ್ಯೆ, ಗೋ ಸಾಗಾಟ ನಿಲ್ಲಿಸಬೇಕು. ಚಾಮರಾಜಪೇಟೆ ರೈತನ ಗೋವುಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಜತಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.