ಜಿಲ್ಲೆ

ಬೆಳಕು ಬೀರುವ ಪ್ರಭಾವ ಅಪಾರ: ಅಂತಾರಾಷ್ಟ್ರೀಯ ಪ್ರಸಿದ್ಧ ವಯೋಲಿನ್ ವಾದಕ ಮೈಸೂರು ಮಂಜುನಾಥ್ ಬಣ್ಣನೆ

ಮೈಸೂರು: ಕತ್ತಲನ್ನು ಓಡಿಸುವ ಬೆಳಕು ನಮ್ಮ ಮನಸ್ಸಿನ ಮೇಲೆ ಬೀರುವ ಪ್ರಭಾವ ಅಪಾರ ಎಂದು ಅಂತಾರಾಷ್ಟ್ರೀಯ ಪ್ರಸಿದ್ಧ ವಯೋಲಿನ್ ವಾದಕ ಮೈಸೂರು ಮಂಜುನಾಥ್ ಬಣ್ಣಿಸಿದರು.

ಮಾನಸಗಂಗೋತ್ರಿಯಲ್ಲಿರುವ ಲಲಿತಕಲಾ ಕಾಲೇಜು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ರಂಗಬೆಳಕು ಕುರಿತ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕತ್ತಲೆಯನ್ನು ಓಡಿಸುವ ಬೆಳಕು, ತಾನು ದೃಷ್ಟಿ ಹರಿಸಿದ ಎಲ್ಲ ಚರಾಚರ ವಸ್ತುಗಳನ್ನು ಬೆಳಗುವಂತೆ ಮಾಡುತ್ತದೆ. ಬೆಳಕು ನಮ್ಮ ಮನಸ್ಸಿನ ಮೇಲೆ ಬೀರುವ ಪ್ರಭಾವ ಅಪಾರ. ಯಾವುದೇ ಕಲಾ ಪ್ರಕಾರದಲ್ಲಿ ಬೆಳಕಿನ ವಿನ್ಯಾಸ ಬಹಳ ಮುಖ್ಯಪಾತ್ರ ವಹಿಸುತ್ತದೆ. ಒಂದು ದೃಶ್ಯ, ಇಡೀ ಪರಿಸರವನ್ನು ಕಟ್ಟಿಕೊಡಲು ಬೆಳಕು ಬೇಕೇ ಬೇಕು. ಸಂಗೀತ ಕಛೇರಿಗಳಲ್ಲಿಯೂ ಹಾಡಿನ ಭಾವವನ್ನು ತೋರಿಸಲು ಸಂಗೀತಗಾರರಿಗೆ ತಲ್ಲೀನವಾಗುವಂತೆ ಮಾಡಲು ಬೆಳಕಿನ ವಿನ್ಯಾಸವೂ ಅತಿಮುಖ್ಯ ಎಂದು ತಿಳಿಸಿದರು.

ಬೆಳಕಿನ ವಿನ್ಯಾಸಕಾರ ಮಹೇಶ್ ಕಲ್ಲತ್ತಿ ಅವರು ರಂಗಭೂಮಿಯಲ್ಲಿ ಬೆಳಕಿನ ಸಾಧನಗಳನ್ನು ವಿದ್ಯಾರ್ಥಿಗಳಿಗೆ ಸ್ಲೈಡ್ ಶೋ ಮೂಲಕ ತೋರಿಸುತ್ತಾ ವಿವರಣೆ ನೀಡಿದರು. ಬಳಿಕ ರಂಗಮಂದಿರದಲ್ಲಿ ಕಟ್ಟಿರುವ ಲೈಟ್‌ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದರು.

ರಂಗತಜ್ಞ ಅರಸೀಕೆರೆ ಯೋಗಾನಂದ ಮಾತನಾಡಿ, ಇಂತಹ ಪ್ರಾತ್ಯಕ್ಷಿಕೆಗಳಿಂದ ವಿದಾರ್ಥಿಗಳು ನೇರವಾಗಿ ನೋಡಿ ಕಲಿಯಲು ಸಾಧ್ಯವಾಗುವುದರಿಂದ ಮುಂದಿನ ದಿನಗಳಲ್ಲಿ ಇನ್ನು ಹಲವಾರು ವಿಷಯಗಳಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.

ಲಲಿತಕಲಾ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಅನಿಟಾ ವಿಮ್ಲ ಬ್ರಾಗ್ಸ, ನಾಟಕ ಶಿಕ್ಷಕ ಮೇಘ ಸಮೀರ, ಅಧ್ಯಾಪಕರಾದ ಸುಬ್ಬಲಕ್ಷ್ಮೀ, ಗೀತಾ, ಸೂರ್ಯಪ್ರಭಾ, ನಟರಾಜ, ಕಲಾವಿದರಾದ ಶ್ರೀಕಾಂತ್, ಮಂಜುನಾಥ್ ಇತರರು ಇದ್ದರು.