ಜಿಲ್ಲೆ

ಶ್ರೀ ರಾಮನ ಆದರ್ಶ ಅನುಸರಣೀಯ

ಕಾರ್ಕಳ: ಶ್ರೀ ರಾಮಚಂದ್ರನ ಜೀವನದ ಆದರ್ಶಗಳು ಸರ್ವರಿಗೂ ಅನುಸರಣೀಯ. ಸಾಹಿತಿ, ಗುರು ಅಂಬಾತನಯ ಮುದ್ರಾಡಿಯವರು ‘ಶ್ರೀರಾಮದರ್ಶನ’ ಕೃತಿಯ ಮೂಲಕ ಶ್ರೀರಾಮನ ಹಿರಿದಾದ ದರ್ಶನವನ್ನು ನಮಗೆ ಮೂಡಿಸಿದ್ದಾರೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ರೂವಾರಿ ಡಾ.ಎಂ.ಮೋಹನ ಆಳ್ವ ಅಭಿಪ್ರಾಯಪಟ್ಟರು.

ಬಜಗೋಳಿಯ ಮಾರುತಿ ಕ್ಯಾಶ್ಯೂ ಇಂಡಸ್ಟ್ರೀಸ್ ಆವರಣದಲ್ಲಿ ಕಾರ್ಕಳ ಹೊಸಸಂಜೆ ಪ್ರಕಾಶನ ಪ್ರಕಟಿತ ಅಂಬಾತನಯ ಮುದ್ರಾಡಿ ರಚಿಸಿದ ‘ಶ್ರೀರಾಮದರ್ಶನ’ ಕೃತಿ ಲೋಕಾರ್ಪಣೆಗೈದು ಮಾತನಾಡಿದರು.

ಕೃತಿಕಾರ ಅಂಬಾತನಯ ಮುದ್ರಾಡಿಯವರು ಮಾತನಾಡಿ, ಕೃತಿ ರಚನೆಗೆ ಹೊರಗಿನ ಪ್ರೀತಿಯ ಒತ್ತಡವೇ ಕಾರಣ. ಸನ್ಮಿತ್ರರ, ಅಭಿಮಾನಿಗಳ, ಬಂಧುಗಳ, ಸಾಹಿತ್ಯಾಸಕ್ತರ ಪ್ರೀತಿಯ ಒತ್ತಡ ಬಂದಾಗಲೆಲ್ಲ ಸ್ಪಂದಿಸುವುದು ನನ್ನ ಸ್ವಭಾವ. ಈ ಸ್ವಭಾವವೇ ನನ್ನನ್ನು ಸಾಹಿತ್ಯಲೋಕದಲ್ಲಿ ನಡೆದಾಡಿಸಿದೆ ಎಂದರು.

ಹಿರಿಯ ಪತ್ರಕರ್ತ ಕೆ. ಪದ್ಮಾಕರ ಭಟ್ ಈದು ಹೊಸ್ಮಾರು ಪ್ರಸ್ತಾವಿಸಿದರು. ಜಾನಪದ ವಿದ್ವಾಂಸ ಶ್ರೀಮದ್ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಅರುಣ್‌ಕುಮಾರ್ ಎಸ್.ಆರ್., ಉದ್ಯಮಿಗಳಾದ ರವೀಂದ್ರ ಶೆಟ್ಟಿ ಬಜಗೋಳಿ, ಕೂಷ್ಮಾಂಡಿನಿ ಉದ್ಯಮ ಸಂಸ್ಥೆಯ ಮಹಾವೀರ ಜೈನ್, ಮಾರುತಿ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲೀಕ ಪ್ರಶಾಂತ ಶೆಟ್ಟಿ, ಹೊಸಸಂಜೆ ಪ್ರಕಾಶನದ ಆರ್.ದೇವರಾಯ ಪ್ರಭು ಉಪಸ್ಥಿತರಿದ್ದರು.

ವೈಷ್ಣವಿ ಭಟ್ ಪ್ರಾಸ್ತಾಪಿಸಿದರು. ಶ್ರೀಮದ್ ಭುವನೇಂದ್ರ ಕಾಲೇಜು ಉಪನ್ಯಾಸಕಿ ಮಾಲತಿ ಪೈ ನಿರ್ವಹಿಸಿದರು. ಎಸ್.ವಿ.ಟಿ ಪದವಿಪೂರ್ವ ಕಾಲೇಜಿನ ನಿವೃತ್ತ ಶಿಕ್ಷಕಿ ಮಾಲತಿ ವಸಂತರಾಜ್ ವಂದಿಸಿದರು.

ಮುದ್ರಾಡಿಯವರು ಅಹಲ್ಯಾ, ಕೈಕೇಯಿ, ತಾರಾ, ಮಂಡೋದರೀ, ಸೀತಾ ಎಂಬ ಐದು ಪುರಾಣ ಪಾತ್ರಗಳನ್ನು ಶ್ರೀರಾಮದರ್ಶನಕ್ಕೆ ಯಶಸ್ವಿಯಾಗಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಅಯೋಧ್ಯೆಯಿಂದ ಲಂಕೆಯವರೆಗಿನ, ಲಂಕೆಯಿಂದ ಅಯೋಧ್ಯೆವರೆಗಿನ ಸಮಗ್ರ ರಾಮಾಯಣ ಕತೆಯನ್ನು ಈ ಐದು ಪಾತ್ರಗಳ ಮೂಲಕವೆ ಗೀತರೂಪಕಗಳ ಸಂಕಲನದೊಂದಿಗೆ ಶ್ರೀರಾಮದರ್ಶನವನ್ನು ಮಾಡಿಸಿದ್ದಾರೆ. ಡಾ.ಅರುಣ್‌ಕುಮಾರ್ ಎಸ್.ಆರ್. ಶ್ರೀಮದ್ ಭುವನೇಂದ್ರ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ